
ಯಾದಗಿರಿ: ‘ಭಾರತ ಉಕ್ಕಿನ ಮನುಷ್ಯರೆಂದು ಖ್ಯಾತರಾದ ಸರ್ದಾರ ವಲ್ಲಭಬಾಯಿ ಪಟೇಲ್ ಅವರು ದೇಶ ಕಂಡ ಅಪ್ರತಿಮ ನಾಯಕರು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಹೇಳಿದರು.
ನಗರದ ಲುಂಬಿನಿ ವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶುಕ್ರವಾರ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಏಕತಾ ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.
‘ದೇಶದ ಪ್ರಥಮ ಗೃಹ ಸಚಿವರಾಗಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ ರಾಷ್ಟ್ರದ ಪ್ರಗತಿಗೆ ಅಗತ್ಯವಾದ ಸೇವೆ ನೀಡಿದ್ದಾರೆ. ಯುವ ಸಮುದಾಯ ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ಮಾತನಾಡಿ, ‘ಸರ್ದಾರ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಾತಂತ್ರ್ಯ ನಂತರವೂ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಳ್ಳದ ಸಂಸ್ಥಾನಗಳ ರಾಜರ ಮನವೊಲಿಸಿ, ದೇಶವನ್ನು ಒಗ್ಗೂಡಿಸಿದ್ದಾರೆ’ ಎಂದರು.
ಜಿ.ಪಂ. ಸಿಇಒ ಲವೀಶ್ ಓರಾಡಿಯಾ ಮಾತನಾಡಿದರು.
ಗ್ರಾಮೀಣ ಪೊಲೀಸ್ ಠಾಣೆಯಿಂದ ಜಾಥಾ ಜರುಗಿತು. ವಿವಿಧೆಡೆ ಪ್ರಬಂಧ, ಭಾಷಣ, ಸಸಿ ನೆಡುವ ಮತ್ತು ಏಕತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಗುರುಮಠಕಲ್: ಪಟ್ಟಣದ ಸರ್ಕಾರಿ ಆಲಕರ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಿಂದ ರಾಷ್ಟ್ರದ ಏಕತೆಗಾಗಿ ಓಟ ಜಾಥಾ ಜರುಗಿತು. ಪಿಐ ವೀರಣ್ಣ ಸೇರಿದಂತೆ ಪೊಲೀಸ್ ಸಬ್ಂದಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.