ಸುರಪುರ: ‘ಸವಿತಾ ಸಮಾಜದ ಜನರು ತಮ್ಮ ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷ ಮಲ್ಲಣ್ಣ ವಡಗೇರಿ ಹೇಳಿದರು.
ಸಮೀಪದ ರಂಗಂಪೇಟೆಯ ಸವಿತಾ ಸಮಾಜದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಗರಸಭೆ ಮಾಜಿ ಸದಸ್ಯ ಚಂದ್ರಾಮ ಮುಂದಿನಮನಿ ಮಾತನಾಡಿ, ‘ಸವಿತಾ ಸಮಾಜದ ಅಭಿವೃದ್ಧಿಯಾಗಲು ಸಮಾಜದಲ್ಲಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳು, ರಚನಾತ್ಮಕ ಕಾರ್ಯಕ್ರಮಗಳು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಂಗಂಪೇಟೆಯ ಸವಿತಾ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಗೋಗಿ ಮಾತನಾಡಿ, ‘ಸವಿತಾ ಸಮಾಜದಲ್ಲಿರುವ ಪ್ರತಿಭಾವಂತ ಯುವ ಸಮುದಾಯ ಹಾಗೂ ಅನೇಕ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಸಹಾಯ, ಸಹಕಾರ, ಪ್ರೋತ್ಸಾಹ ನೀಡಬೇಕು’ ಎಂದು ಕರೆ ನೀಡಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಮಾತನಾಡಿದರು.
ದೇವಿಂದ್ರಪ್ಪ ಅಜ್ಜಕೋಲಿ, ರಾಘವೇಂದ್ರ ಬಾದ್ಯಾಪುರ, ರಾಘವೇಂದ್ರ ಮುಂದಿನಮನಿ, ಸುರೇಶ ಚಿನ್ನಾಕಾರ, ಮಹೇಶ ಗೋಗಿ, ಅಶೋಕ ಚಿನ್ನಾಕಾರ, ಬಸವರಾಜ ಚಿನ್ನಾಕಾರ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ಮಂಜುನಾಥ ಅನವಾರ, ವಿರೇಶ ಹುಣಸಗಿ, ವಿರೇಶ ಮಸ್ಕಿ, ಓಂಕಾರ ಸೇಡಂ, ಸೃಷ್ಠಿ, ಸುಚಿತ್ರಾ, ಲಕ್ಷ್ಮಿ, ರೇಖಾ, ಭಾಗ್ಯ, ಭರತಕುಮಾರ, ವಾಸು ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.