ಯಾದಗಿರಿಯಲ್ಲಿ ಬುಧವಾರ ನಡೆದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಸಚಿವರಾದ ಶರಣಬಸಪ್ಪ ದರ್ಶನಾಪುರ ಮತ್ತು ಸಂತೋಷ್ ಲಾಡ್ ಅವರು ಉದ್ಘಾಟಿಸಿದರು.
ಯಾದಗಿರಿ: ‘ನಾವು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಏಳಿಗೆಗಾಗಿ ಯೋಜನೆಗಳನ್ನು ತಂದಿದ್ದೇವೆ ಹೊರತು ವೋಟ್‌ಗಾಗಿ ಅಲ್ಲ. ನಾವು ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ರಾಜಕೀಯಕ್ಕೂ ಬಳಸಿಕೊಂಡಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಪಾಟೀಲ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಐದು ಗ್ಯಾರಂಟಿಗಳ ಮೂಲಕ ಜನರಿಗೆ ವಾರ್ಷಿಕ ₹ 60 ಸಾವಿರ ಕೋಟಿ ಕೊಡುತ್ತಿದ್ದೇವೆ. ಅದರ ಜೊತೆಗೆ ಅಭಿವೃದ್ಧಿಗೆ ₹ 85 ಸಾವಿರ ಕೋಟಿ, ಪಿಂಚಣಿಗೆ ₹ 60 ಸಾವಿರ ಕೋಟಿ, ಶಿಕ್ಷಣಕ್ಕೆ ₹ 65 ಸಾವಿರ ಕೋಟಿ ಕೊಟ್ಟು ಬಡವರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದರೂ ತಲಾ ಆದಾಯ, ಎಸ್‌ಜಿಡಿಪಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ’ ಎಂದರು.
‘ಒಳ್ಳೆಯ ಕಾರ್ಯಕ್ರಮಗಳು ಕೊಟ್ಟ ತಕ್ಷಣವೇ ಜನರು ವೋಟ್ ಕೊಡುವುದಿಲ್ಲ ಎಂಬುದು ಗೊತ್ತಿದೆ. ಜನರ ಆಯ್ಕೆಯನ್ನು ಗೌರವಿಸಿ, ಜವಾಬ್ದಾರಿಯುತ ಸರ್ಕಾರವಾಗಿ ನಾವು ನಮ್ಮ ಕಾರ್ಯಕ್ರಮಗಳನ್ನು ಬಡವರ ಏಳಿಗೆಗಾಗಿ ಕೊಡುತ್ತಿದ್ದೇವೆ’ ಎಂದು ಹೇಳಿದರು.
‘ಅಸಂಘಟಿತ ವಲಯದ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಾರ್ಯಕರ್ತರು, ಲಾಜಿಸ್ಟಿಕ್ ಕ್ಷೇತ್ರದ ಶ್ರಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕವಾದ ಯೋಜನೆಗಳನ್ನು ರೂಪಿಸಲಾಗಿದೆ. ಸಣ್ಣ ಉದ್ಯಮಗಳಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಕೆಲಸ ಕೊಟ್ಟರೆ ಶೇ 50ರಷ್ಟು ಸಂಬಳವನ್ನು ನಮ್ಮ ಮಂಡಳಿಯೇ ಕೊಡಲಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಅಸಂಘಟಿತ ವಲಯದ ಕಾರ್ಮಿಕರಿಗೆ ತಮ್ಮದೆಯಾದ ಸಮಸ್ಯೆಗಳಿವೆ. ನಮ್ಮ ಸರ್ಕಾರ ಕಾರ್ಮಿಕರು ಮತ್ತು ಬಡವರಿಗೆ ಸಹಾಯಹಸ್ತ ಚಾಚಿ ಯೋಜನೆಗಳನ್ನು ರೂಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ’ ಎಂದರು.
‘ಜಿಲ್ಲೆಯಲ್ಲಿ ಕಾರ್ಮಿಕರ ನೋಂದಣಿ ಕಡಿಮೆ ಇತ್ತು. ಎಲ್ಲ ತಾಲ್ಲೂಕುಗಳಲ್ಲಿ ಶಿಬಿರಗಳನ್ನು ಮಾಡಿ ನೋಂದಣಿ ಮಾಡಿಸಲಾಗಿದೆ. ಲಭ್ಯ ಇರುವ ಸಾಕಷ್ಟು ಯೋಜನೆಗಳು ತಲುಪಬೇಕಾದರೆ ಎಲ್ಲರೂ ಮಂಡಳಿಯ ವ್ಯಾಪ್ತಿಯೊಳಗೆ ಗುರುತಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಂಡರೆ ನಿಮಗೆ, ನಿಮ್ಮ ಕುಟುಂಬಕ್ಕೆ ಯೋಜನಗೆಳ ಲಾಭ ಸಿಗುತ್ತದೆ’ ಎಂದು ಹೇಳಿದರು.
ಸಾಂಕೇತಿಕವಾಗಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‌ಗಳು, ಫಲಾನುಭವಿಗಳಿಗೆ ಮಂಡಳಿಯ ಚೆಕ್, ವೇತನ ಮರು ಪಾವತಿ ಚೆಕ್, ಅಪಘಾತ ವಿಮೆಯ ಧನ ಸಹಾಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಶಾಸಕ ರಾಜಾ ವೇಣುಗೋಪಾಲ್ ನಾಯಕ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ‘ಯುಡ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿ.ಪಂ.ಸಿಇಒ ಲವೀಶ್ ಒರಡಿಯಾ, ಎಸ್.ಪಿ ಪೃಥ್ವಿಕ್ ಶಂಕರ್, ಜಂಟಿ ಕಾರ್ಮಿಕ ಆಯುಕ್ತ ಡಾ.ಎಸ್.ಬಿ.ರವಿಕುಮಾರ್, ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಎ.ಶಿಂದಿಹಟ್ಟಿ, ಲಿಡ್ಕರ್ ಸಂಸ್ಥೆ ಅಧ್ಯಕ್ಷ ಮುಂಡರಗಿ ನಾಗರಾಜ ಉಪಸ್ಥಿತರಿದ್ದರು.
‘ಇಂಧನ ಮೇಲೆ ₹ 1 ಸೆಸ್ ಏರಿಕೆ ಚಿಂತನೆ’
‘ರಾಜ್ಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ₹ 1 ಸೆಸ್ ಏರಿಸಿದರೆ ಸುಮಾರು ₹ 3000 ಕೋಟಿ ಮಂಡಳಿಗೆ ಬರುತ್ತದೆ. ಇದರಿಂದ ಅಸಂಘಟಿತ ವಲಯದ 1.30 ಕೋಟಿ ಕಾರ್ಮಿಕರಿಗೆ ₹ 15 ಲಕ್ಷದವರೆಗೆ ವಿಮೆ ಕಾರ್ಡ್ ಕೊಡಬಹುದು’ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ’ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅಸಂಘಟಿತ ವಲಯದವರು ಶಾಸಕರು ಸಚಿವರು ಒತ್ತಡ ತರಬೇಕು. ಇದೊಂದು ದೇಶದಲ್ಲಿಯೇ ಮಾದರಿಯಾಗಲಿದೆ’ ಎಂದರು. ‘ಬೀದರ್ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ರಚಿಸಲಾಗುವುದು. ಇದರಿಂದ ಸುಮಾರು 3 ಲಕ್ಷ ಹೊರಗುತ್ತಿಗೆ ನೌಕರರಿಗೆ ಅನುಕೂಲ ಆಗಲಿದೆ. ವಿಳಂಬ ವೇತನ ಪಿಎಫ್ ಇಎಸ್‌ಐ ಸಮಸ್ಯೆಯೂ ದೂರಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪನೆಗೆ ಬರಲಿದೆ’ ಎಂದು ಹೇಳಿದರು. ಪ್ರಿಯಾಂಕ್ ಜತೆಗೆ ಇದ್ದೇವೆ: ‘ಸಾರ್ವಜನಿಕ ಜೀವನದಲ್ಲಿ ಇದ್ದವರು ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಒಬ್ಬರೇ ಇಲ್ಲ. ಅವರ ಜತೆಗೆ ನಾವು ಸೇರಿದಂತೆ ಇಡೀ ಪಕ್ಷವೇ ಅವರೊಂದಿಗೆ ಇದೆ. ನಿಜವಾದ ಹಿಂದೂಗಳು ಅವರ ಜೊತೆಗೆ ಇದ್ದಾರೆ’ ಎಂದು ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿಗೆ ಸಚಿವರ ತರಾಟೆ
ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಅಧಿಕಾರಿಗಳೊಂದಿಗೆ ಸಚಿವ ಸಂತೋಷ್ ಲಾಡ್ ಅವರ ಸಭೆ ನಿಗದಿ ಆಗಿತ್ತು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಅರ್ಧ ಗಂಟೆ ತಡವಾಗಿ ಬಂದಿದ್ದಕ್ಕೆ ಸಚಿವರು ತರಾಟೆಗೆ ತೆಗೆದುಕೊಂಡರು. ‘ಡಿಸಿ ಆದವರು 10 ನಿಮಿಷ ಮುಂಚಿತವಾಗಿ ಇರಬೇಕು. ಇದೇನಾ ನಿಮ್ಮ ಜವಾಬ್ದಾರಿ? ಇಡೀ ಜಿಲ್ಲೆಯನ್ನು ಹೇಗೆ ನಿರ್ವಹಣೆ ಮಾಡುತ್ತಿರಾ’ ಎಂದು ಪ್ರಶ್ನಿಸಿದರು. ಬಳಿಕ ಸಭೆ ನಡೆಸಿದರು.
ಯಾದಗಿರಿ ಮತ್ತು ವಡಗೇರಾ ತಾಲ್ಲೂಕುಗಳಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರ್ಮಿಕರ ಮಕ್ಕಳ ಭವಿಷ್ಯಕ್ಕಾಗಿ ವಸತಿ ಶಾಲೆ ಮಂಜೂರು ಮಾಡಬೇಕು–ಚನ್ನಾರೆಡ್ಡಿ ಪಾಟೀಲ ತುನ್ನೂರು. ಶಾಸಕ
ನಮ್ಮದು ಕಾರ್ಮಿಕರ ಅವಲಂಬಿತವಾದ ಜಿಲ್ಲೆ ಬಹುತೇಕರು ಬಡವರು ಇದ್ದಾರೆ. ಗುರುಮಠಕಲ್ ಮತ ಕ್ಷೇತ್ರದಲ್ಲಿ ವಲಸಿಗರ ಪ್ರಮಾಣ ಹೆಚ್ಚಿದ್ದು ಗುರುಮಠಕಲ್‌ಗೆ ಕಾರ್ಮಿಕರ ಮಕ್ಕಳ ವಸತಿ ಶಾಲೆ ಮಂಜೂರು ಮಾಡಿಕೊಡಬೇಕು–ಶರಣಗೌಡ ಕಂದಕೂರ, ಶಾಸಕ
ಐದು ಗ್ಯಾರಂಟಿ ಯೋಜನೆಗಳ ಜತೆಗೆ ಸಚಿವ ಸಂತೋಷ್ ಲಾಡ್ ಅವರು ತಮ್ಮ ಖಾತೆಯ ಮೂಲಕ ಕಾರ್ಮಿಕರಿಗೆ ಮತ್ತೊಂದು ಗ್ಯಾರಂಟಿ ಕೊಟ್ಟಿದ್ದಾರೆ. ಈ ಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ–ತಿಪ್ಪಣಪ್ಪ ಕಮಕನೂರ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.