
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ರಚಿಸಿದ್ದ ‘ಶಿಕ್ಷಣ ತಜ್ಞರ ಸಮಿತಿ’ಯು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ‘ಅಕ್ಷರ ಆವಿಷ್ಕಾರ’ ಯೋಜನೆಯಡಿ ಶಾಲೆಗಳಿಗೆ ಮೂಲಸೌಕರ್ಯಗಳು ಕಲ್ಪಿಸಿದ್ದರೂ ನಿರ್ವಹಣೆ ಕೊರತೆಯು ಶಾಲೆಗಳಿಗೆ ಬಹುವಾಗಿ ಕಾಡುತ್ತಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕೆಕೆಆರ್‌ಡಿಬಿಯು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿಯಿಂದ ಹೊರತಂದು, ಶಾಲೆಗಳಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲು ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತಂದಿದೆ. 2023–24 ಮತ್ತು 2024–25ರ ಅವಧಿಯಲ್ಲಿ ಶೇ 33.84ರಷ್ಟು ಅನುದಾನವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ಖರ್ಚು ಮಾಡಲಾಗಿದೆ.
ಅರ್ಥಶಾಸ್ತ್ರಜ್ಞೆ ಛಾಯಾ ದೇಗಾಂವಕರ್ ನೇತೃತ್ವದ ಶಿಕ್ಷಣ ತಜ್ಞರ ಸಮಿತಿಯು ತನ್ನ ಅಧ್ಯಯನದ ವೇಳೆ ನೂರಾರು ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿದೆ. ಜೊತೆಗೆ ತನ್ನ ವರದಿಯಲ್ಲಿಯೂ ದಾಖಲಿಸಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಅನುದಾನ ಪಡೆದಿರುವ 32 ಶಾಲೆಗಳಿಗೂ ಭೇಟಿ ಕೊಟ್ಟಿದೆ. ಬಹುತೇಕ ಅನುದಾನ ಶಾಲೆ ಕಟ್ಟಡ ದುರಸ್ತಿ, ತರಗತಿ ಕೊಠಡಿಗಳು, ಶೌಚಾಲಯಗಳ ನಿರ್ಮಾಣಕ್ಕೆ ಬಳಕೆಯಾಗಿದೆ.
ಹೆಚ್ಚಿನ ಶಾಲೆಗಳಲ್ಲಿ ಕಟ್ಟಡಗಳ ನಿರ್ವಹಣೆಯು ಸರಿಯಾಗಿಲ್ಲ. ನಿರ್ವಹಣೆಯ ಕೊರತೆಯು ಗಂಭೀರ ಸಮಸ್ಯೆಯಾಗಿ ಶಾಲೆಗಳನ್ನು ಕಾಡುತ್ತಿದೆ. ಅದು, ಬಳಕೆಯಾಗದ ಶೌಚಾಲಯಗಳು ಮತ್ತು ಕಳಪೆ ನೈರ್ಮಲ್ಯದಂತಹ ಸಮಸ್ಯೆಗೂ ಕಾರಣವಾಗುತ್ತದೆ. ನೀರಿನ ಸಮಸ್ಯೆಯೂ ಹಾಗೆಯೇ ಉಳಿದುಕೊಂಡಿದೆ. ಯೋಜನೆಯಡಿ ತೆಗೆದುಕೊಂಡಿರುವ ಕೆಲವು ಕೆಲಸಗಳು ಅನುದಾನದ ಕೊರತೆಯಿಂದಾಗಿ ಅಪೂರ್ಣವಾಗಿಯೇ ಉಳಿದುಕೊಂಡಿವೆ. ಶೌಚಾಲಯಗಳ ಸಮೀಪದಲ್ಲಿ ಮಕ್ಕಳಿಗೆ ಕೈತೊಳೆಯುವ ವ್ಯವಸ್ಥೆಯೂ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಲವು ಹಳ್ಳಿಗಳಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಿದ್ದರೂ ಇನ್ನೂ ಹಸ್ತಾಂತರ ಮಾಡಿಲ್ಲ. ಗುಣಮಟ್ಟದ ಕಾಮಗಾರಿಯ ಬಗ್ಗೆ ಹಲವು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಿದ್ದರೂ ಬಹುತೇಕ ಶಾಲೆಗಳಲ್ಲಿ ಅವುಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಕೆಲವು ಕಟ್ಟಡಗಳ ಮೇಲ್ಚಾವಣಿಗಳಲ್ಲಿ ನೀರು ಜಿನುಗುತ್ತದೆ ಎಂದು ಹೇಳಿದೆ.
ರಾಜ್ಯ ಸರ್ಕಾರದ ಮಾನದಂಡಗಳ ಅನ್ವಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ ಆಧಾರದ ಅನುಗುಣವಾಗಿ ಸೂಕ್ತವಾದ ಪೀಠೋಪಕರಣಗಳು ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಗೆ ತಕ್ಕಂತಹ ಬೆಂಚ್‌ಗಳ ವ್ಯವಸ್ಥೆ ಮಾಡಬೇಕು. ಶಾಲಾ ಸಿಬ್ಬಂದಿ, ಬಾಲಕರು ಹಾಗೂ ಬಾಲಕಿಯರಿಗೆ ಸ್ವಚ್ಛ, ಆರೋಗ್ಯಕರ ಹಾಗೂ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಬೇಕು. ಅದರ ಜೊತೆಗೆ ಕೈ ತೊಳೆಯುವ ವ್ಯವಸ್ಥೆ ಮಾಡಿ, ಅಂಗವಿಕಲ ವಿದ್ಯಾರ್ಥಿಗಳು ಸುಲಭವಾಗಿ ಶೌಚಾಲಯ ಪ್ರವೇಶಿಸುವಂತೆ ರ್‍ಯಾಂಪ್ ನಿರ್ಮಾಣ ಮಾಡಬೇಕು ಎಂದು ಸಮಿತಿಯು ಸಲಹೆ ನೀಡಿದೆ.
ಅನುದಾನ ಡಿ ಗ್ರೂಪ್ ಸಿಬ್ಬಂದಿಯೂ ಇಲ್ಲ’
‘ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುತ್ತಿರುವುದು ಉತ್ತಮವಾಗಿದೆ. ಆದರೆ ಶಾಲೆಯ ನಿರ್ವಹಣೆಗೆ ಅನುದಾನ ಇಲ್ಲ ‘ಡಿ’ ಗ್ರೂಪ್ ಸಿಬ್ಬಂದಿಯೂ ಇಲ್ಲ. ಹೀಗಾಗಿ ಕೆಲವೆಡೆ ಶೌಚಾಲಯಗಳು ಬಳಕೆಯಾಗಿಲ್ಲ’ ಎಂದು ಶಿಕ್ಷಣ ತಜ್ಞರ ಸಮಿತಿಯ ಅಧ್ಯಕ್ಷೆ ಛಾಯಾ ದೇಗಾಂವಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ದುರಸ್ತಿ ಕೆಲಸಗಳಿಗೆ ಸ್ಥಳ ಪರಿಶೀಲನೆ ಮಾಡದೆಯೇ ಅಂದಾಜು ಪಟ್ಟಿ ಕೊಡಲಾಗಿದೆ. ಇದರಿಂದ ಅನುದಾನದ ಕೊರತೆ ಎದುರಾಗಿದೆ. ಶಾಲೆಯ ಮುಖ್ಯಶಿಕ್ಷಕರು ಹೇಳಿದಂತೆ ಅಂದಾಜು ತಯಾರಿಸಬೇಕು. ಕಾಮಗಾರಿಯ ಗುಣಮಟ್ಟದ ಮೇಲೆ ನಿಗಾ ಇರಿಸುವಂತೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರಿಗೆ ತಿಳಿ ಹೇಳಿದ್ದೇವೆ. ಮುಖ್ಯಶಿಕ್ಷಕರು ಗಮನ ಹರಿಸಿದ ಕಡೆಗಳಲ್ಲಿ ಗುಣಮಟ್ಟದ ಕೆಲಸವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.