ADVERTISEMENT

ಶಹಾಪುರ: ಕೋವಿಡ್ ಆತಂಕದ ನಡುವೆ ಶಾಲೆ ಆರಂಭಕ್ಕೆ ಸಿದ್ಧತೆ

23ರಿಂದ 9,10 ನೇ ಭೌತಿಕ ತರಗತಿ; ಶಾಲೆಗಳಲ್ಲಿ ಚುರುಕುಗೊಂಡ ಪ್ರವೇಶ ಪ್ರಕ್ರಿಯೆ

ಟಿ.ನಾಗೇಂದ್ರ
Published 21 ಆಗಸ್ಟ್ 2021, 2:46 IST
Last Updated 21 ಆಗಸ್ಟ್ 2021, 2:46 IST
ಶಹಾಪುರ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿನಿಯರು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರು
ಶಹಾಪುರ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿನಿಯರು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರು   

ಶಹಾಪುರ: ಕೊರೊನಾ ಹಾವಳಿಯಿಂದ 2 ವರ್ಷಗಳ ಕಾಲ ಶಾಲೆಯ ಬಾಗಿಲು ಮುಚ್ಚಲಾಗಿತ್ತು. ಆಗಸ್ಟ್‌ 23ರಂದು ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜು ಆರಂಭವಾಗಲಿವೆ ಎಂದು ಸರ್ಕಾರ ತಿಳಿಸಿದೆ. ಆತಂಕದ ನಡುವೆ ಶಾಲೆ ಪುನರಾರಂಭಗೊಳ್ಳಲಿವೆ.

ಸರ್ಕಾರದ ಮಾರ್ಗಸೂಚಿ ನಿಯಮದ ಪ್ರಕಾರ ಆಯಾ ಶಾಲೆಗಳಲ್ಲಿ ಸ್ಯಾನಿಟೈಜರ್ ಬಳಸಿ ಸ್ವಚ್ಛತೆಯ ಕಾರ್ಯ ಸಾಗಿರುವುದು ಕಂಡು ಬಂದಿತು. ತಾಲ್ಲೂಕಿನಲ್ಲಿ ಒಟ್ಟು 61 ಪ್ರೌಢಶಾಲೆಗಳಿದ್ದು, 13,308 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 310 ಶಿಕ್ಷಕರಿದ್ದು, 58 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಒಂದಿಷ್ಟು ಕೋವಿಡ್ ಅಲೆ ಕಡಿಮೆಯಾದ ಸಮಯದಲ್ಲಿ ಸರ್ಕಾರ ವಿದ್ಯಾಗಮನ ಆರಂಭಿಸಿ ಆಯಾ ಗ್ರಾಮದ ದೇವಸ್ಥಾನ, ಮರದ ಕೆಳಗಡೆ ಹಾಗೂ ಬಯಲು ಪ್ರದೇಶದಲ್ಲಿ ಪಾಠ ಮಾಡಲು ಅವಕಾಶ ನೀಡಿತ್ತು. ಆದರೆ, ಕೋವಿಡ್ 2ನೇ ಅಲೆ ಆರಂಭವಾಗುತ್ತಿದ್ದಂತೆ ಅದನ್ನು ಸ್ಥಗಿತಗೊಳಿಸಿತ್ತು. ಈಗ ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಶಾಲೆಯ ಕಡೆ ಭಾರವಾದ ಹೆಜ್ಜೆ ಹಾಕಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಶಿಕ್ಷಣ ಇಲಾಖೆಯು ಮಕ್ಕಳ ಹಾಜರಾತಿಯನ್ನು ಕಡ್ಡಾಯಗೊಳಿಸಿಲ್ಲ. ಪಾಲಕರು ಇಚ್ಛೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿರುವುದು ಇದು ಗೊಂದಲಕ್ಕೆ ಕಾರಣವಾಗಿದೆ. ಮನೆಯಿಂದ ಬಿಸಿ ನೀರು, ಊಟ ಹೀಗೆ ಅಗತ್ಯವಾದ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ತೊಡಕಾಗಿ ಪರಿಣಮಿಸಲಿದೆ ಎನ್ನುತ್ತಾರೆ ವಿದ್ಯಾರ್ಥಿನಿಯೊಬ್ಬರ ಪಾಲಕ ಬಸವರಾಜ.

ಹಳ್ಳಿಯ ವಿದ್ಯಾರ್ಥಿಗಳು ಹೆಚ್ಚಾಗಿ ನೆಚ್ಚಿಕೊಂಡಿರುವುದು ವಸತಿನಿಲಯಗಳನ್ನು. ಆದರೆ, ವಸತಿನಿಲಯಗಳು ಆರಂಭವಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಮಧ್ಯಾಹ್ನದ ಬಿಸಿಯೂಟ ಇಲ್ಲ. ಮಕ್ಕಳಿಗೆ ಪ್ರಯಾಣದ ಪಾಸ್ ವಿತರಿಸಿಲ್ಲ. ಹಣ ನೀಡಿ ದಿನಾಲು ಶಾಲೆಗೆ ಬಂದು ಹೋಗಲು ಗ್ರಾಮೀಣ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಅಲ್ಲದೆ ವಿದ್ಯಾರ್ಥಿನಿಯರಂತೂ ಶಾಲೆಗೆ ಬರುವುದು ಅನುಮಾನ. ಅಲ್ಲದೆ ಈಗ ಮಳೆಗಾಲ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಪೂಜಾರಿ.

‘ಶಾಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಪಾಠ ಕೇಳಬೇಕು ಎನ್ನುವುದು ಕನಸ್ಸಿನ ಮಾತು ಆಗಲಿದೆ. ಬಹುತೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೋಣೆಗಳ ಕೊರತೆ ಇದೆ. ನಗರದ ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂಖ್ಯೆ ದುಪ್ಪಟ್ಟಾಗಿದೆ. ಇದನ್ನು ಹೇಗೆ ಸರಿದೂಗಿಸಬೇಕು ಎನ್ನುವುದು ಆಯಾ ಶಾಲೆಯ ಮುಖ್ಯಸ್ಥರಿಗೆ ಸವಾಲಿನ ಕೆಲಸವಾಗಲಿದೆ’ ಎನ್ನುತ್ತಾರೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಒಬ್ಬರು.

ವಿದ್ಯಾರ್ಥಿಗಳ ಪಾಲಕರು ತುಸು ಧೈರ್ಯವಹಿಸಿ ಮುನ್ನೆಚ್ಚೆರಿಕೆ ಕ್ರಮ ತೆಗೆದುಕೊಂಡು ಶಾಲೆಗೆ ಕಳುಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಒಬ್ಬರು ಮನವಿ ಮಾಡಿದ್ದಾರೆ.

ಪಟ್ಟಿ: ಮಕ್ಕಳ ದಾಖಲಾತಿ ವಿವರ

ಶಾಲೆ; ಒಟ್ಟು ಸಂಖ್ಯೆ; ವಿದ್ಯಾರ್ಥಿಗಳ ಸಂಖ್ಯೆ

ಸರ್ಕಾರಿ ಪ್ರೌಢಶಾಲೆ; 38; 8,837

ಅನುದಾನಿತ ಪ್ರೌಢಶಾಲೆ; 3; 995

ಅನುದಾನರಹಿತ ಪ್ರೌಢಶಾಲೆ; 20; 3,476

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.