ADVERTISEMENT

ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:44 IST
Last Updated 29 ಡಿಸೆಂಬರ್ 2025, 7:44 IST
<div class="paragraphs"><p>ಯಾದಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ‌5ನೇ ವೈಜ್ಞಾನಿಕ ಸಮ್ಮೇಳನವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು</p></div>

ಯಾದಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ‌5ನೇ ವೈಜ್ಞಾನಿಕ ಸಮ್ಮೇಳನವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು

   

ಯಾದಗಿರಿ: 'ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದು ಮುನ್ನಡೆಯುತ್ತಿದ್ದರೆ ನಮ್ಮಲ್ಲಿನ ಮೂಢನಂಬಿಕೆಗಳು ನಮ್ಮನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿವೆ' ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಲ್ಲಿನ‌ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿರುವ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಅವರು‌ ಮಾತನಾಡಿದರು.

ADVERTISEMENT

'ನಮ್ಮಲ್ಲಿ ಗುಡಿ-ಗುಂಡಾರಗಳನ್ನು ಕಟ್ಟುವುದು ಕಡಿಮೆಯಾಗಿಲ್ಲ. ಯಾರಾದರೂ ಬಂದು ಏನಾದರೂ ಹೇಳಿದರೆ ಅದನ್ನು ಚಾಚೂತಪ್ಪದೆ ಮೊದಲು ಮಾಡುತ್ತೇವೆ. ನಮ್ಮ ಮಕ್ಕಳನ್ನು ಓದಿಸುವುದಿಲ್ಲ. ಆದರೆ, ದೇವರ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಅದನ್ನು ಖರ್ಚು ಮಾಡುತ್ತೇವೆ. ಜಗತ್ತು ಯಾವ ದಿಕ್ಕಿನಲ್ಲಿ ಹೋಗುತ್ತಿದೆಯೋ ನಾವೂ ಅದೇ ದಿಕ್ಕಿನಲ್ಲಿ ಸಾಗಿ ಯಶಸ್ಸು ಸಾಧಿಸಬೇಕು' ಎಂದರು.

'ಯಾವುದೋ ಒಂದು ಶಕ್ತಿ ತಮ್ಮ ಲಾಭಕ್ಕಾಗಿ ನಮ್ಮನ್ನು ಬೆದರಿಕೆ ಹಾಕಿ ಅನಗತ್ಯವಾಗಿ ಬಡತನದಲ್ಲಿ ಇರುವವರಿಂದ ಹಣವನ್ನು ಖರ್ಚು ಮಾಡಿಸುತ್ತಿದೆ. ಯಾವುದೇ ದೇವರು ಮನುಷ್ಯನಿಗೆ ಕೆಟ್ಟದ್ದು ಮಾಡುವುದಿಲ್ಲ. ಮನುಷ್ಯರು ಮನುಷ್ಯರಿಗೆ ಕೆಟ್ಟದ್ದು ಮಾಡುತ್ತಾರೆ ಹೊರತು ದೇವರು ಕೆಟ್ಟದ್ದು ಮಾಡುವುದಿಲ್ಲ. ವೇಗವಾಗಿ ಎಲ್ಲವನ್ನೂ ಮೆಟ್ಟಿ ನಿಲ್ಲುವಂತಹ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಇದೆ. ಬೇರೆ ಕಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳನ್ನು ಮಟ್ಟಹಾಕುವ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾಡಬೇಕಿದೆ' ಎಂದು ಹೇಳಿದರು.

'ಈ ಸಮ್ಮೇಳನ ಯುವಕರಿಗೆ ಹೆಚ್ಚಿನ ವೈಜ್ಞಾನಿಕ ಜ್ಞಾನ ತುಂಬಲ್ಲಿ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸಮ್ಮೇಳನಕ್ಕೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ' ಎಂದು ಭರವಸೆ ನೀಡಿದರು.

ಪರಿಷತ್ತಿನ ಮಹಾಪೋಷಕರೂ ಆಗಿರುವ ವಿಜ್ಞಾನಿ ಡಾ.ಎ.ಎಸ್. ಕಿರಣ್‌ಕುಮಾರ್ ಮಾತನಾಡಿ, 'ರಾಜ್ಯದ ಎಲ್ಲ ಮಕ್ಕಳಿಗೆ ವಿಜ್ಞಾನದ ವಿಚಾರಗಳನ್ನು ತಲುಪಿಸುವುದು ಅವಶ್ಯವಿದೆ.‌ ಭಾರತ ಜಗತ್ತಿನ ಮೊದಲ ಸ್ಥಾನದಲ್ಲಿ ಬರಬೇಕಾದರೆ ವಿಜ್ಞಾನದ ಬೆಳವಣಿಗೆ ಅತ್ಯಗತ್ಯವಾಗಿದೆ. ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಂದ ಹಿರಿಯರವರೆಗೆ ತಿಳಿಸುವಂತಹ ಇಂತಹ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು ತನ್ನ ಬಜೆಟ್‌ನಲ್ಲಿ ₹ 5 ಕೋಟಿ ಅನುದಾನ ಮೀಸಲಿಟ್ಟು ತನ್ನ ಕಾಣಿಕೆಯನ್ನು ಕೊಡಬೇಕು' ಎಂದರು.

ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, 'ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಒಂದಿಷ್ಟು ಅನುದಾನವನ್ನು ಸಮ್ಮೇಳನಕ್ಕೆ ಕೊಡಬೇಕು' ಎಂದು ಕೋರಿದರು.

ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ಚಿಗರಹಳ್ಳಿಯ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಚಿವ ಸತೀಶ ಜಾರಕಿಹೊಳಿ, ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣಗೋಪಾಲ ನಾಯಕ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಪರಿಷತ್ತು ಜಿಲ್ಲಾ ಅಧ್ಯಕ್ಷ ಗುಂಡಪ್ಪ ಕಲಬುರಗಿ, ಡಿಡಿಪಿಐ ಚನ್ನಬಸಪ್ಪ ಮುಧೋಳ, ಮುಖಂಡರಾದ ಎ.ಸಿ. ಕಾಡ್ಲೂರು, ಭೀಮಣ್ಣ ಮೇಟಿ, ಹಣುಮೇಗೌಡ ಬಿರನಕಲ್, ಮಹೇಶರೆಡ್ಡಿ ಮುದ್ನಾಳ, ಚಿಕ್ಕಹನುಮಂತೇಗೌಡ, ಎಸ್.ಕೆ. ಉಮೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಸಚಿವ ಸತೀಶ ಜಾರಕಿಹೊಳಿ, ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.