ADVERTISEMENT

‌ಮಣ್ಣೆತ್ತಿನ ಬದಲಾಗಿ ಪಿಒಪಿ ಎತ್ತುಗಳ ಮಾರಾಟ!

ಇಂದು ಮಣ್ಣೆತ್ತಿನ ಅಮಾವಾಸ್ಯೆ, ಆದರೆ, ಮಣ್ಣಿನ ಘಮವೇ ಇಲ್ಲ ಬರೀ ಪಿಒಪಿ

ಬಿ.ಜಿ.ಪ್ರವೀಣಕುಮಾರ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ಯಾದಗಿರಿಯ ಚರ್ಚ್‌ ಮುಂಭಾಗದ ರಸ್ತೆ ಬದಿ ಪಿಒಪಿ ಎತ್ತಿನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ
ಯಾದಗಿರಿಯ ಚರ್ಚ್‌ ಮುಂಭಾಗದ ರಸ್ತೆ ಬದಿ ಪಿಒಪಿ ಎತ್ತಿನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ   

ಯಾದಗಿರಿ: ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತುಗಳ ಬದಲಿಗೆ ಪ್ಲಾಸ್ಟರ್‌ ಆ‍ಫ್ ಪ್ಯಾರೀಸ್ (ಪಿಒಪಿ) ಎತ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಗರದ ವಿವಿಧೆಡೆ ಪಿಒಪಿ ಎತ್ತುಗಳು ಮಣ್ಣಿತ್ತಿನ ಜಾಗದಲ್ಲಿ ಸ್ಥಾನ ಪಡೆದಿವೆ. ದೂರದ ಸೊಲ್ಲಾಪುರ, ಅಕ್ಕಲಕೋಟದಿಂದ ಪಿಒಪಿ ಎತ್ತುಗಳನ್ನು ನಗರದಲ್ಲಿ ತಂದು ಮಾರಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಎತ್ತುಗಳನ್ನು ಬಸವಣ್ಣನ ರೂಪ ಎಂದೇ ಪೂಜಿಸುತ್ತಾರೆ. ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತು ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ (ಮಂಗಳವಾರ) ಅಮಾವಾಸ್ಯೆಯಂದು ಪೂಜಿಸಲಾಗುತ್ತದೆ. ಆದರೆ, ಕಾಲ ಬದಲಾದಂತೆ ಮಣ್ಣಿನ ಬದಲಾಗಿ (ಪಿಒಪಿ) ಅಲಂಕಾರಿಕ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.

ದುಬಾರಿ ಬೆಲೆಯ ಕೆರೆ ಮಣ್ಣಿಗೆ ಬದಲಿಗೆ ಆರಾಮವಾಗಿ ಸಿಗುವ ಪಿಒಪಿ ಎತ್ತುಗಳು ಜನರನ್ನು ಆಕರ್ಷಿಸುವುದರಿಂದ ಗ್ರಾಹಕರು ಅವುಗಳನ್ನೆ ಬಯಸುವುದರಿಂದ ಕುಂಬಾರರು ಪಿಒಪಿ ಎತ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ನಗರದ ಚರ್ಚ್‌ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಬೆರಳೆಣಿಕೆ ಮಣ್ಣಿನ ಎತ್ತುಗಳು, ಹಲವು ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ಸಿಂಹಪಾಲು ಪಿಒಪಿ ಎತ್ತುಗಳೇ ಅಕ್ರಮಿಸಿಕೊಂಡಿವೆ. ಈಗ ಮಣ್ಣೆತ್ತು ತಯಾರು ಮಾಡುವ ವ್ಯವಧಾನವೂ ಕುಂಬಾರರಿಗೆ ಇಲ್ಲದಂತೆ ಆಗಿದೆ. ಸುಲಭವಾಗಿ ಮತ್ತು ಯಾವುದೇ ದೈಹಿಕ ಶ್ರಮವಿಲ್ಲದೆ ಪಿಒಪಿ ಎತ್ತುಗಳು ಸಿಗುವುದರಿಂದ ಯಾರೂ ಮಣ್ಣೆತ್ತಿನ ಕಡೆ ಗಮನ ಹರಿಸುತ್ತಿಲ್ಲ.

‘ಪ್ಲಾಸ್ಟರ್‌ ಆಫ್ ಪ್ಯಾರೀಸ್ ಎತ್ತುಗಳು ಹಬ್ಬದ ಸೊಗಡನ್ನು ಕಳೆದುಕೊಂಡಿವೆ. ಆದರೆ, ಗ್ರಾಹಕರುಮಣ್ಣೆತ್ತಿನ ಬದಲಾಗಿ ಪಿಒಪಿ ಎತ್ತುಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ಎಲ್ಲರೂ ಪಿಒಪಿ ಎತ್ತುಗಳನ್ನು ಮಾರಾಟ ಮಾಡುವುದರಿಂದ ಮಣ್ಣಿನ ಎತ್ತುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ನಾವು ಕೂಡ ಪಿಒಪಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕುಂಬಾರ ಓಣಿಯ ಲಕ್ಷ್ಮಿ.

‘ಮಣ್ಣಿನ ಎತ್ತುಗಳ ತಯಾರಿಸಲು ಅದಕ್ಕೆ ತುಂಬಾ ಶ್ರದ್ಧೆ ಮತ್ತು ದೈಹಿಕ ಶ್ರಮ ಬೇಡುತ್ತದೆ. ಈಗ ಎಲ್ಲವೂವೇಗ ಆಗಿರುವುದರಿಂದ ಕುಂಬಾರರು ಕೂಡ ಬದಲಾವಣೆ ಬಯಸಿದ್ದಾರೆ. ಮಣ್ಣಿಗಾಗಿ ಕನಿಷ್ಠ ಒಂದು ತಿಂಗಳು ತಿರುಗಾಡಿ ಸರಿಯಾದ ಮಣ್ಣನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಹದ ಮಾಡಿ ಎತ್ತುಗಳನ್ನು ಮಾಡಿ ನೆರಳಿಗೆ ಸಂರಕ್ಷಿಸಬೇಕು. ಇದು ತುಂಬಾ ತ್ರಾಸದಾಯಕ ಕೆಲಸವಾಗಿದ್ದರಿಂದ ಸುಲಭವಾಗಿ ಸಿಗುವ ಪಿಒಪಿ ಎತ್ತುಗಳನ್ನೇ ಮಾರಾಟ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

‘ಮಣ್ಣಿನ ಜೋಡಿ ಎತ್ತುಗಳ ದರ ₹40ರಿಂದ ₹50 ಇದೆ. ಪಿಒಪಿ ಎತ್ತುಗಳ ದರ ₹ 80 ರಿಂದ ₹800ರವರೆಗೆ ಇದೆ. ಆದರೆ, ಮಣ್ಣಿನ ಎತ್ತುಗಳನ್ನು ಖರೀದಿಸುವವರು ಕಡಿಮೆ. ಸಂಪ್ರಾದಾಯವಾದಿಗಳು ಮಣ್ಣಿನ ಎತ್ತುಗಳನ್ನು ಖರೀದಿಸುತ್ತಾರೆ. ಈಗಿನ ಕಾಲದವರು ಪಿಒಪಿ ಎತ್ತುಗಳನ್ನೆ ಒಯ್ಯುತ್ತಾರೆ’ ಎಂದು ಶರಣಪ್ಪ ಕುಂಬಾರ ತಿಳಿಸಿದರು.

‘ಮಣ್ಣಿನ ಎತ್ತುಗಳ ತಯಾರಿಸುವುದು ತುಂಬಾ ಕಷ್ಟದ ಕೆಲಸವಾದರೂ ಒಂದು ಟ್ರ್ಯಾಕ್ಟರ್ ಮಣ್ಣಿಗೆ ₹ 8000 ಇದೆ. ಹೀಗಾಗಿ ಖರ್ಚು ಕೂಡ ಹೆಚ್ಚಿದೆ. ಆದರೆ, ಪಿಒಪಿ ಎತ್ತುಗಳು ಸಾಗಣೆ ಮಾಡಿದರೂ ಒಡೆದು ಹೋಗುವ ಭಯವಿಲ್ಲ. ಆದರೆ, ಮಣ್ಣಿನ ಎತ್ತುಗಳನ್ನು ಇನ್ನೊಂದೆಡೆ ಸಾಗಿಸಲು ತುಂಬಾ ನಷ್ಟವಾಗುತ್ತದೆ. ಹೀಗಾಗಿ ಕಳೆದ ಎರಡು ಮೂರು ವರ್ಷಗಳಿಂದ ಪಿಒಪಿ ಎತ್ತುಗಳನ್ನು ನೆಚ್ಚಿಕೊಂಡಿದ್ದೇವೆ’ ಎನ್ನುತ್ತಾರೆ ಅವರು.

‘ಹುಟ್ಟಿನಿಂದ ಚಟ್ಟದವರೆಗೂ ಮಣ್ಣಿನಜೊತೆಗೆಆರಂಭವಾಗುವ ಮಣ್ಣೆತ್ತು ಅಮಾವಾಸ್ಯೆ. ಹೀಗಾಗಿ ಮಣ್ಣಿನಿಂದಲೇ ನಮ್ಮ ಜೀವನ ರೂಪಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.