ಸೈದಾಪುರ: ಸಕಲ ಜೀವರಾಶಿಗಳಿಗೆ ಆಸರೆಯಾದ ಭೂತಾಯಿ ಒಡಲಲ್ಲಿ ಬೆಳೆದ ಬೆಳೆಗೆ ರೈತರು ಪೂಜೆ ಸಲ್ಲಿಸಿ, ಚರಗ ಚೆಲ್ಲುವ ಮೂಲಕ ಸೋಮವಾರ ಎಳ್ಳ ಅಮಾವಾಸ್ಯೆ ಆಚರಣೆ ಮಾಡಿದರು.
ಅಮಾವಾಸ್ಯೆ ನಿಮಿತ್ತ ಸೈದಾಪುರ ವಲಯದ ಮುನಗಾಲ, ಸಂಗವಾರ, ಕೊಂಡಾಪುರ, ಬೆಳಗುಂದಿ, ಬಾಡಿಯಾಲ, ಆನೂರು, ಸಾವುರು, ಹೆಗ್ಗಣಗೇರಾ, ಕ್ಯಾತನಾಳ, ಬಾಲಚೇಡ, ರಾಂಪುರ, ರಾಚನಳ್ಳಿ, ಶೆಟ್ಟಿಹಳ್ಳಿ, ಕಡೇಚೂರು, ಕೂಡ್ಲೂರು, ಬಳಿಚಕ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಸಡಗರದಿಂದ ಹಬ್ಬ ಆಚರಿಸಿದರು.
ರೈತರು ಬೆಳಿಗ್ಗೆಯೇ ಹೋಳಿಗೆ, ಕಡುಬು, ಭಜ್ಜಿ, ವಿವಿಧ ರೀತಿಯ ಕಾಳುಪಲ್ಲೆಗಳು, ಎಣ್ಣೆ ಬದನೆಕಾಯಿ, ರೊಟ್ಟಿ, ಚಪಾತಿ, ಶೇಂಗಾ ಹೋಳಿಗೆ, ಹಪ್ಪಳ, ಚಟ್ನಿ, ಬಗೆಬಗೆಯ ತರಕಾರಿ, ಅನ್ನ ಸಾಂಬಾರು ಸೇರಿದಂತೆ ಹಲವು ಬಗೆಯ ವಿಶಿಷ್ಟ ಖಾದ್ಯಗಳನ್ನು ಬುತ್ತಿ ಕಟ್ಟಿಕೊಂಡು ಕುಟುಂಬ ಹಾಗೂ ನೆರೆಹೊರೆಯವರೊಂದಿಗೆ ಎತ್ತಿನ ಬಂಡಿ, ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ವಾಹನಗಳಲ್ಲಿ ತಮ್ಮ ತಮ್ಮ ಹೊಲಗಳಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.
ನಂತರ ಜೋಳದ ಹೊಲದಲ್ಲಿನ ಬನ್ನಿ, ಬೇವಿನ ಮರದ ಕೆಳಗಡೆ ಐದು ಕಲ್ಲುಗಳನ್ನಿಟ್ಟು ಪಂಚ ಪಾಂಡವರು ಎಂದು ನೇಮಿಸಿ ಅವುಗಳಿಗೆ ಪೂಜೆ ಸಲ್ಲಿಸಿದರು. ನಂತರ ದೊಡ್ಡ ಬುಟ್ಟಿಯಲ್ಲಿ ಮನೆಯಿಂದ ತಂದಿರುವ ನೈವೇದ್ಯವನ್ನು ಭೂತಾಯಿಗೆ ಅರ್ಪಿಸಿದರು. ಕಾಯಿ ಕರ್ಪೂರ ಬೆಳಗಿ ನಂತರ ಹೊಲದ ಮೂಲೆ ಮೂಲೆಗಳಿಗೆ ನೈವೇದ್ಯ, ನೀರು ಸಿಂಪಡಿಸಿ ಚರಗ ಚೆಲ್ಲಿದರು. ಬೆಳೆದ ಫಸಲಿಗೆ ಉತ್ತಮ ಬೆಲೆ ದೊರೆಯಲಿ, ಮುಂದಿನ ಬೆಳೆ ಉತ್ತಮವಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದರು.
ಚರಗ ಚೆಲ್ಲಿದ ನಂತರ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆದರು. ನಂತರ ಮಹಿಳೆಯರು, ಮಕ್ಕಳು ಜೋಕಾಲಿ ಸೇರಿದಂತೆ ವಿವಿಧ ಆಟೋಟಗಳನ್ನು ಆಡಿದರು. ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು. ಸಂಜೆ ಸಮಯಕ್ಕೆ ಐದು ಜೋಳದ ದಂಟುಗಳನ್ನು ಬುಟ್ಟಿಯಲ್ಲಿಯಿಟ್ಟುಕೊಂಡು ತಲೆ ಮೇಲೆ ಬುಟ್ಟಿ ಇಟ್ಟುಕೊಂಡು ಎಲ್ಲರೂ ಸಂತಸದಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.