ಸುರಪುರ: ನಾರಾಯಣಪುರ ಜಲಾಶಯದಿಂದ ಎರಡನೇ ಹಂಗಾಮಿಗೆ ಕಾಲುವೆಗೆ ನೀರು ಹರಿಸದಿರುವುದು ಮತ್ತು ಬರ ಪರಿಸ್ಥಿತಿಯಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಮಿಕರು ಅನಿವಾರ್ಯವಾಗಿ ಮಹಾನಗರಗಳತ್ತ ಗುಳೆ ಆರಂಭಿಸಿದ್ದಾರೆ.
ಪ್ರತಿ ಗ್ರಾಮದಲ್ಲೂ ಶೇ60ರಿಂದ 70ರಷ್ಟು ಜನರು ದುಡಿಯಲು ಗುಳೆ ಹೋಗುವುದು ಸಾಮಾನ್ಯವಾಗಿದೆ. ಗ್ರಾಮಗಳಲ್ಲಿ ವೃದ್ಧರು, ಮಕ್ಕಳು ಮಾತ್ರವೇ ಉಳಿಯುತ್ತಿದ್ದು, ಗ್ರಾಮಗಳು ಬಿಕೋ ಎನ್ನುತ್ತಿವೆ.
ಹೆಚ್ಚುವರಿ ಬಸ್ ಓಡಾಟ: ಸುರಪುರ ಬಸ್ ಡಿಪೊದಿಂದ ಬೆಂಗಳೂರಿಗೆ ನಿತ್ಯ ನಾಲ್ಕು ಬಸ್ ಸಂಚರಿಸುತ್ತವೆ. ಈಗ ಪ್ರತಿ ದಿನ ನಾಲ್ಕು ಬಸ್‍ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಇನ್ನಷ್ಟು ಬಸ್‍ಗಳನ್ನು ಬಿಡಲು ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಪ್ರತಿ ಗ್ರಾಮಗಳಲ್ಲಿ ಆರೇಳು ಕ್ರೂಸರ್ ಜೀಪ್‍ಗಳು ಕಾರ್ಮಿಕರನ್ನು ಬೆಂಗಳೂರು, ಪುಣೆ, ಮುಂಬೈ ನಗರಗಳಿಗೆ ಬಿಟ್ಟು ಬರಲೆಂದೇ ಇವೆ ಎನ್ನಲಾಗಿದೆ.
ಆರೋಗ್ಯ, ಶಿಕ್ಷಣ ಸಮಸ್ಯೆ: ಗುಳೆ ಹೋಗುವ ಕಾರ್ಮಿಕರು ಕಾಮಗಾರಿ ಸ್ಥಳದಲ್ಲೇ ವಾಸಿಸುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.
ನೆರವಿಗೆ ಬರದ ನರೇಗಾ: ಗುಳೆ ತಪ್ಪಿಸಲೆಂದೇ ಸರ್ಕಾರ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದೆ. ಆದರೆ, ಯೋಜನೆಯಡಿ ಸಮರ್ಪಕ ಕೆಲಸ, ಕೂಲಿ ಸಿಗುತ್ತಿಲ್ಲ. ಯೋಜನೆಯ ದುರುಪಯೋಗವೇ ನಡೆದಿದೆ ಎಂಬುದು ಕಾರ್ಮಿಕರ ಅಸಮಾಧಾನ.
ಕೃಷಿ ಕಾರ್ಮಿಕರು ವ್ಯಾಪಕವಾಗಿ ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ. ಹೆಚ್ಚಿನ ಬಸ್ ಬಿಡುವಂತೆ ಒತ್ತಡ ಹೆಚ್ಚಾಗಿದೆಎಸ್.ಬಿ.ದಶವಂತ ವ್ಯವಸ್ಥಾಪಕ ಸುರಪುರ ಬಸ್ ಡಿಪೊ
ಗುಳೆ ತಪ್ಪಿಸಲು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಬಸ್‍ನಿಲ್ದಾಣಗಳಲ್ಲೂ ಪ್ರಚಾರ ಮಾಡಲಾಗುತ್ತಿದೆಬಸವರಾಜ ಸಜ್ಜನ್ ತಾಲ್ಲೂಕು ಪಂಚಾಯಿತಿ ಇ.ಒ
ಬೆಂಗಳೂರಿನಲ್ಲಿ ದಂಪತಿ ಕಾರ್ಮಿಕರಿಗೆ ದಿನಕ್ಕೆ ₹1500 ಕೂಲಿ ಸಿಗುತ್ತದೆ. ನರೇಗಾ ಯೋಜನೆಯಲ್ಲಿ ಕೂಲಿ ಕಡಿಮೆ. ಕೃಷಿ ಕೆಲಸವೂ ಇಲ್ಲ. ಹೀಗಾಗಿ ಗುಳೆ ಹೆಚ್ಚಾಗಿದೆವಿಶ್ವರಾಜ ಒಂಟೂರ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.