
ಶಹಾಪುರ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಬಲಭೀಮೇಶ್ವರ, ಸಂಗಮೇಶ್ವರ ಜೋಡಿ ಪಲ್ಲಕ್ಕಿ ಉತ್ಸವದಲ್ಲಿ ಪಂಜಿನ ಮೆರವಣಿಗೆ (ದೀವಟಿಗೆ) ಹಿಡಿದುಕೊಂಡು ಸಾಗುವ ಸಂಭ್ರಮವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಇದನ್ನು ಕಣ್ಮುಂಬಿಕೊಳ್ಳಲು ಆಗಮಿಸಿದ ಭಕ್ತರ ಸಾಗರ ಉತ್ಸವಕ್ಕೆ ಸಾಕ್ಷಿಯಾಯಿತು. ಮಾಗಿಯ ಚಳಿ ಕಡಿಮೆಯಾಗಿದ್ದರಿಂದ ಪ್ರಸಕ್ತ ವರ್ಷ ಹೆಚ್ಚಿನ ಭಕ್ತರು ಜಾತ್ರೆಗೆ ಆಗಮಿಸಿರುವುದು ವಿಶೇಷವಾಗಿತ್ತು.
ಸಂಕ್ರಮಣದ ಪುಣ್ಯಸ್ನಾನದ ಕೈಕಂರ್ಯಗಳು ಪೂರ್ಣಗೊಂಡ ಬಳಿಕ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಭೀಮನದಿಯ ಪಾದಗಟ್ಟಿಯಿಂದ ಭವ್ಯ ಮೆರವಣಿಗೆಯಲ್ಲಿ ಆಗಮಿಸುವ ಪಲ್ಕಕ್ಕಿ ನಂತರ ಶಹಾಪುರ ಹೊರವಲಯದಲ್ಲಿ ಜೋಡಿ ಪಲ್ಲಕ್ಕಿ ಸಮಾಗಮವಾದವು.
ರಾತ್ರಿ ಬಸವೇಶ್ವರ ವೃತ್ತ ಹಾದು ಬಲಭೀಮೇಶ್ವರ ಪಲ್ಲಕ್ಕಿಯು ಜತೆಯಲ್ಲಿ ಹಲಿಗೆ ವಾದನ ಜೋರಾಗುತ್ತಿದ್ದಂತೆ ಭಕ್ತರ ಜೈಕಾರಗಳು ಮೊಳಗಿದವು. ದೇವರ ದರ್ಶನ ಪಡೆಯಲು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ತಂಡೋಪತಂಡವಾಗಿ ಆಗಮಿಸಿದ ಭಕ್ತರು ತಾ ಮುಂದು ನಾ ಮುಂದು ಧಾವಿಸಿದರು ದೇವರ ದರ್ಶನ ಪಡೆದು ಧನ್ಯತೆ ಭಾವ ಮರೆದರು.
ಗಂಗಾನಗರದ ಭಕ್ತರು ದೀವಟಿಗೆಗಳನ್ನು ಉರಿಯಲು ಟ್ರ್ಯಾಕ್ಟರ್‌ಗಳಲ್ಲಿ ರಾಶಿರಾಶಿಯಾಗಿ ಬಟ್ಟೆಯ ಸಿಂಬೆಗಳು, ಸಾವಿರಾರು ಲೀಟರ್ ಎಣ್ಣೆ ದೀವಟೆಗೆ ಕೋಲುಗಳನ್ನು ಅಣಿಗೊಳಿಸಿದ್ದರು. ಪೂಜಾ ವಿಧ ವಿಧಾನ ಮುಗಿದ ಬಳಿಕ ದೀವಟಿಗೆಯ ಕೆನ್ನಾಲಿಗೆ ಧಗ ಧಗಿಸುವುದು ಶುರುವಾಯಿತು. ಇದಕ್ಕೆ ಮೆರಗು ನೀಡುವಂತೆ ಹಲಗೆ ವಾದನ, ಕುಣಿತದೊಂದಿಗೆ ಸಂಭ್ರಮಿಸುವ ಭಕ್ತರು ಗಮನ ಸೆಳೆದರು. ಅಲ್ಲಲ್ಲಿ ಪ್ರಸಾದದ ವ್ಯವಸ್ಥೆ ಕುಡಿಯುವ ನೀರಿನ ಸೇವೆ ಒದಗಿಸಿರುವುದು ಕಂಡು ಬಂತು.
ನಂತರ ರಾತ್ರಿ ಇಡೀ ಮರೆವಣಿಗೆಯ ಬಳಿಕ ಬೆಳಗಿನ ಜಾವ ಮತ್ತೆ ಮೂಲ ಸ್ಥಳಕ್ಕೆ ದೇವರು ತೆಗೆದುಕೊಂಡು ಹೋಗುವುದರ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.