
ಶಹಾಪುರ: ‘ನಿರೀಕ್ಷೆಗೂ ಮೀರಿ ಮತಕ್ಷೇತ್ರದ ಸರ್ವ ಸಮುದಾಯಗಳ ಬೇಡಿಕೆಗೆ ಅನುನುಸಾರವಾಗಿ ಅನುದಾನ ಕಲ್ಪಿಸಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಸರ್ವ ಸಮುದಾಯಕ್ಕೆ ನೀಡಿದ ಭರವಸೆ ಈಡೇರಿಸಿದ ತೃಪ್ತಿ ನನಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಿಭೂತಿಹಳ್ಳಿ ರಸ್ತೆಯಲ್ಲಿರುವ ವಿದ್ಯಾರಣ್ಯ ಲೇಔಟ್‌ನ ಪಕ್ಕದಲ್ಲಿ ಸೋಮವಾರ ಒಂದು ಎಕರೆ ಜಮೀನಿನಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹ 2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಹಾಪುರ ಶಾದಿ ಮಹಲ್‌ಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
‘ಎಲ್ಲಾ ಸಮುದಾಯಗಳಿಗೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿರುವೆ. ಯಾವ ಭವನ ನಿರ್ಮಾಣಕ್ಕೂ ₹ 2 ಕೋಟಿ ಗಿಂತ ಹೆಚ್ಚು ಅನುದಾನ ನೀಡಿಲ್ಲ. ಪ್ರಸಕ್ತ ಸಾಲಿನಲ್ಲಿ ಅಂಬಿಗರ ಚೌಡಯ್ಯ ಭವನಕ್ಕೆ ₹ 2.50 ಕೋಟಿ, ವಾಲ್ಮೀಕಿ ಭವನ, ಜಗಜೀವನರಾಂ ಭವನಕ್ಕೆ ತಲಾ ₹ 2ಕೋಟಿ ಒದಗಿಸಿದ್ದೇನೆ. ಅಲ್ಲದೆ ಗ್ರಾಮೀಣ ಪ್ರದೇಶದ ದೇಗುಲಕ್ಕೂ ಅನುದಾನ ಬಿಡುಗಡೆ ಮಾಡಿದೆ’ ಎಂದರು.
‘ರಸ್ತೆ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ಹೊಸಕಟ್ಟಡ, ಹಳೆಕಟ್ಟಡ ರಿಪೇರಿಗಾಗಿ ಅನುದಾನ ನೀಡಿದ್ದೇನೆ. ಈಗಾಗಲೇ ₹ 56 ಕೋಟಿ ವೆಚ್ಚದಲ್ಲಿ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಮುಕ್ತಾಯವಾಗಿದೆ. ₹300 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡಿದೆ’ ಎಂದರು.
ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ, ಸೈಯದ ಷಾ ಮಹಿಮೂದ ಹುಸೇನಿ ಕೋಶ್ವಾರ, ಮೌಲಾನಾ ಸಾಬ್, ವಿನೋದ ಪಾಟೀಲ, ವಸಂತ ಸುರಪುರಕರ್, ಶಿವಮಹಾಂತ ಚಂದಾಪುರ, ಸಿದ್ದಣ್ಣ ಆರಬೋಳ, ಇಸಾಕ ಹುಸೇನ, ಸೈದುದ್ದೀನ ಖಾದ್ರಿ, ಮಹಾದೇವಪ್ಪ ಸಾಲಿಮನಿ, ಸೈಯದ್ ಮುಸ್ತಾಫ್ ದರ್ಬಾನ, ಇಸ್ಮಾಯಿಲ್ ಚಾಂದ್, ತಲತ ಚಾಂದ, ನಯಿಮ ಅಫ್ಘಾನ, ಶ್ರೀಶೈಲ ಹೊಸ್ಮನಿ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ್ರಾಯಗೌಡ ರಾಕಂಗೇರಾ, ರಫೀಕ ಸಾಬ, ಪಾಶಾ ಪಟೇಲ್, ಭಾಗವಹಿಸಿದ್ದರು.
₹ 2 ಕೋಟಿ ವೆಚ್ಚದಲ್ಲಿ ಕನಕ ಭವನಕ್ಕೆ ಅಡಿಗಲ್ಲು
ಶಹಾಪುರ: ನಗರದ ಐಡಿ ಎಸ್ ಎಂಟಿ ಪ್ರದೇಶದಲ್ಲಿ ₹ 2ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣದ ಕಾಮಗಾರಿಗೆ ಸೋಮವಾರ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ‘ಸರ್ಕಾರದ ಮೇಲೆ ಒತ್ತಡ ಹಾಕಿ ಸಿ.ಎ ಸೈಟ್ ಪಡೆದುಕೊಂಡು ಭವನ ನಿರ್ಮಾಣಕ್ಕೆ ಮುಂದಾಗಿದೇವೆ. ಹಲವು ವರ್ಷದಿಂದ ಜಾಗ ಹುಡುಕಾಟ ಕೆಲಸ ನಡೆದಿತ್ತು. ಕೊನೆಗೆ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಸ್ಥಳ ಗುರುತಿಸಿ ಕೊಟ್ಟರು. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಭವನ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಅನುದಾನ ಬೇಕಾದರೆ ಒದಗಿಸಲು ಬದ್ಧನಾಗಿರುವೆ’ ಎಂದರು. ಕುರುಬ ಸಮುದಾಯ ಮುಖಂಡರು ಉಪಸ್ಥಿತರಿದ್ದರು.
ಐಸಿಸಿ ಸಭೆ ನಾಳೆ
ಶಹಾಪುರ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಮೂಲಕ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸಲು ಬುಧವಾರ(ಅ.12) ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಕರೆಯಲಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ. ಬೇಸಿಗೆ ಹಂಗಾಮಿನ ಬೆಳೆಗೆ ಮಾರ್ಚ್ ಮೊದಲ ವಾರದ ವರೆಗೆ ಯಾವುದೇ ತೊಂದರೆ ಇಲ್ಲದೆ ನೀರು ಹರಿಸಲಾಗುವುದು. ರೈತರು ಸಹ ನಿಗದಿತ ಅವಧಿಯಲ್ಲಿ ಬರುವ ಬೆಳೆಯನ್ನು ಬೆಳೆಯಬೇಕು. ಮುಂದೆ ಅನವಶ್ಯಕವಾಗಿ ಗೊಂದಲ ಉಂಟು ಮಾಡಬಾರದು ಎಂದು ರೈತರಿಗೆ ಸಲಹೆ ನೀಡಿದರು.
₹ 30ಕೋಟಿ ವೆಚ್ಚದ ಕಾರ್ಮಿಕ ವಸತಿ ಶಾಲೆ
ಶಹಾಪುರ: ಜಿಲ್ಲೆಯಲ್ಲಿನ ಕಾರ್ಮಿಕ ವಸತಿ ಶಾಲೆ ಮಂಜೂರು ಆಗಿದೆ. ತಾಲ್ಲೂಕಿನ ಕಂಚಲಕವಿ ಬಳಿ ಆರು ಎಕರೆ ಜಮೀನಿನಲ್ಲಿ ₹30ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಆರಂಭಗೊಳ್ಳಿದೆ ಎಂದರು ಸಚಿವ ಶರಣಬಸಪ್ಪ ದರ್ಶನಾಪುರ ಬಹಿರಂಗಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.