ಶಹಾಪುರ ನಗರಸಭೆಯಲ್ಲಿ ಸೋಮವಾರ ಕಲಬುರಗಿ ಪಿ.ಎಫ್ ಕಚೇರಿ ಲೆಕ್ಕಾಧಿಕಾರಿ ಸೌರಭ ಪೌರ ಕಾರ್ಮಿಕರ ಸಭೆ ನಡೆಸಿದರು
ಶಹಾಪುರ: ನಗರಸಭೆಯ 37 ಪೌರಕಾರ್ಮಿಕರ ವೇತನದಿಂದ ಕಡಿತಗೊಳಿಸುತ್ತಿದ್ದ ಭವಿಷ್ಯ ನಿಧಿ(ಪಿಎಫ್) ಹಾಗೂ ಉದ್ಯೋಗಿಗಳ ರಾಜ್ಯ ವಿಮೆ(ಇಪಿಎಫ್) ಅವರ ಖಾತೆಗೆ ಜಮೆಯಾಗಿಲ್ಲ. ಹೀಗಾಗಿ ಭವಿಷ್ಯ ನಿಧಿಯು ಪೌರಕಾರ್ಮಿಕರ ಪಾಲಿಗೆ ಮರೀಚಿಕೆಯಾಗಿದೆ.
ನಗರಸಭೆಯು, ಜೂನ್‌ನಲ್ಲಿಯೇ ಪೌರಕಾರ್ಮಿಕರ ಖಾತೆಗೆ ಜಮೆಯಾಗಬೇಕಿದ್ದ ₹ 1 ಕೋಟಿ ಮೊತ್ತವನ್ನು ಕಲಬುರಗಿ ಪಿಎಫ್ ಕಚೇರಿ ಸಹಾಯಕ ಆಯುಕ್ತರ ಖಾತೆ ಜಮೆ ಮಾಡಿದೆ. ಆದರೆ ಪೌರಕಾರ್ಮಿಕರ ದಾಖಲೆಗಳಲ್ಲಿ ವ್ಯತ್ಯಾಸ ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದಿದ್ದಕ್ಕೆ ಭವಿಷ್ಯ ನಿಧಿಯು ಪೌರಕಾರ್ಮಿಕರ ಖಾತೆಗೆ ಜಮೆಯಾಗಿಲ್ಲ.
ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 37 ಪೌರಕಾರ್ಮಿಕರ ವೇತನದಲ್ಲಿ 2017ರಿಂದ ಕಡಿತಗೊಳಿಸಲಾಗಿದೆ. ಆದರೆ ಆಧಾರ ಕಾರ್ಡ್, ಬ್ಯಾಂಕ್ ಖಾತೆ, ದಾಖಲೆಯಲ್ಲಿ ಹೆಸರು ಹೊಂದಾಣಿಕೆ, ಸೇವೆ ಸಲ್ಲಿಸಿದ ಅವಧಿಯಲ್ಲಿ ಸಂಬಳದಲ್ಲಿ ಕಡಿತವಾದ ಮೊತ್ತ.. ಹೀಗೆ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವಂತೆ ಕಲಬುರಗಿ ಪಿ.ಎಫ್ ಕಚೇರಿಯಿಂದ ಪೌರಾಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಈವರೆಗೂ ದಾಖಲೆ ನೀಡಿಲ್ಲ. ಪೌರಾಯುಕ್ತರು ಜೂನ್‌ನಲ್ಲಿ ₹1ಕೋಟಿ ಜಮಾ ಮಾಡಿದ ಮೊತ್ತ ಇಂದಿಗೂ ನಮ್ಮ ಖಾತೆಯಲ್ಲಿ ಉಳಿದುಕೊಂಡಿದೆ ಎಂದು ಕಲಬುರಗಿ ಪಿಎಫ್ ಕಚೇರಿ ಲೆಕ್ಕಾಧಿಕಾರಿ ಸೌರಭ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕಾರ್ಮಿಕರ ಸಂಬಳದಿಂದ ಕಡಿತಗೊಳಿಸಿದ ಪಿಎಫ್ ಹಾಗೂ ಇಪಿಎಫ್ ಹಣವನ್ನು ನಿಗದಿತ ಅವಧಿಯಲ್ಲಿ ಪಿಎಫ್ ಕಚೇರಿಗೆ ಪಾವತಿಸಿಲ್ಲ. ಹೀಗಾಗಿ ಪಿಎಫ್ ಕಚೇರಿಯವರು, ದಂಡದ ರೂಪದಲ್ಲಿ ₹ 1.50 ಕೋಟಿ ಹಣ ಪಾವತಿಗೆ ನಗರಸಭೆಗೆ ಪತ್ರದ ಮೂಲಕ ಸೂಚಿಸಿದ್ದಾರೆ. ತಮ್ಮ ತಪ್ಪು ಅರಿತುಕೊಂಡ ಅಧಿಕಾರಿಗಳು, ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮತಿ ಪಡೆಯಲು ಯತ್ನಿಸಿದ್ದಾರೆ. ಆದರೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಪೌರಕಾರ್ಮಿಕರೊಬ್ಬರು ಮಾಹಿತಿ ನೀಡಿದರು.
ಹೊಣೆ ಯಾರು: ನಮ್ಮ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಆದರೆ ಈವರೆಗೂ ದಾಖಲೆ ಸಲ್ಲಿಸಿಲ್ಲ. ಕಡಿತವಾದ ಮೊತ್ತವನ್ನು ನಗರಸಭೆ ಕಚೇರಿಯ ಸಿಬ್ಬಂದಿ ತಮ್ಮ ಬಳಿ ಉಳಿಸಿಕೊಳ್ಳಲು ಅವಕಾಶವಿಲ್ಲ. ಪೌರಕಾರ್ಮಿಕ ಹಣವನ್ನು ಖರ್ಚು ಮಾಡಿದರೆ ಹೇಗೆ ? ಇದಕ್ಕೆ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ಮುಂದಿನ ವಾರ ಖುದ್ದಾಗಿ ನಗರಸಭೆ ಕಚೇರಿಗೆ ಭೇಟಿ ನೀಡುವೆ ಎಂದು ಪಿಎಫ್ ಕಚೇರಿ ಆಯುಕ್ತ ರವೀಂದ್ರ ತಿಳಿಸಿದ್ದಾರೆ.
ಸಚಿವರಿಗೂ ಕ್ಯಾರೇ ಅನ್ನುತ್ತಿಲ್ಲ: ನ್ಯಾಯಯುವಾಗಿ ದುಡಿದ ಸಂಬಳದಲ್ಲಿ ಕಡಿತವಾದ ಮೊತ್ತವನ್ನು ಪಾವತಿಸುವಂತೆ ನಾವೆಲ್ಲರೂ ಭೇಟಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಮಾಡಿಕೊಂಡೆವು. ತಕ್ಷಣವೇ ಅವರು, ಜಿಲ್ಲಾಧಿಕಾರಿ ಕಚೇರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಆದರೆ ಸಚಿವರ ಮಾತಿಗೂ ನಗರಸಭೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಯಾರ ಮುಂದೆ ಹೇಳ ಬೇಕು ನಮ್ಮ ಗೋಳು ? ಎಂದು ಭವಿಷ್ಯ ನಿಧಿ ವಂಚಿತ ಪೌರಕಾರ್ಮಿಕರು ಪ್ರಶ್ನಿಸಿದ್ದಾರೆ.
37 ಪೌರ ಕಾರ್ಮಿಕರ ಪಿಎಫ್ ನಿಧಿ ಬಿಡುಗಡೆಯಾಗಿದ್ದು ಅಗತ್ಯ ದಾಖಲೆ ಸಲ್ಲಿಸಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರೂ ನೀಡಿಲ್ಲ. ಕೊನೆಗೆ ಪೌರ ಕಾರ್ಮಿಕರ ಸಭೆ ಕರೆದು ಸಮಸ್ಯೆ ತಿಳಿಸಿದೆಸೌರಭ, ಲೆಕ್ಕಾಧಿಕಾರಿ, ಪಿಎಫ್ ಕಚೇರಿ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.