
ಶಹಾಪುರ ತಾಲ್ಲೂಕಿನ ಸಗರ ಗ್ರಾಪಂ ಕಟ್ಟಡ
ಶಹಾಪುರ: ತಾಲ್ಲೂಕಿನ ಸಗರ, ದೋರನಹಳ್ಳಿ ಹಾಗೂ ವಡಗೇರಾ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದೆ. ಈ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ದೋರನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ವ್ಯಕ್ತಿಗಳ ಸಲಹೆ, ಆಕ್ಷೇಪಣೆಗಳು ಸ್ವೀಕೃತವಾದರೆ ನಿಯಮಾನುಸಾರ ಪರಿಶೀಲಿಸಿ, ತಮ್ಮ ಸ್ಪಷ್ಟವಾದ ಅಭಿಪ್ರಾಯದೊಂದಿಗೆ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಾ.ಪಂ ಇಒ, ತಹಶೀಲ್ದಾರ್ ಹಾಗೂ ಗ್ರಾ.ಪಂ ಪಿಡಿಒ ಅವರಿಗೆ ಸೂಚಿಸಿದ್ದಾರೆ. ಅದರಂತೆ ಇನ್ನೂ ಸಗರ ಹಾಗೂ ವಡಗೇರಾ ಗ್ರಾ.ಪಂಗಳನ್ನು ಕೂಡ ಮೇಲ್ದರ್ಜೆಗೇರಿಸಿದ ಬಗ್ಗೆ ಅಧಿಸೂಚನೆ ಹೊರಡಿಸುವುದು ಬಾಕಿಯಿದೆ.
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ, ಹೆಚ್ಚಿನ ಅನುದಾನ ಸಿಗುತ್ತದೆ. ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತದೆ. ಮುಖ್ಯವಾಗಿ ಸ್ವಚ್ಛತೆ, ವಸತಿ, ಕುಡಿಯುವ ನೀರು, ಬೀದಿ ದೀಪ, ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣದಂತಹ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ಸಿಗುತ್ತದೆ. ಅದರಲ್ಲಿ ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಡೇ-ನಲ್ಮ್ ಮತ್ತು ವಿವಿಧ ಕಲ್ಯಾಣ ನಿಧಿ ಯೋಜನೆಗಳು ಜಾರಿಗೊಳ್ಳಲಿವೆ ಎಂದು ತಾ.ಪಂ ಇಒ ಬಸವರಾಕ ಶರಬೈ ಹೇಳಿದರು.
ಗ್ರಾಮೀಣ ಜನರು, ಕೂಲಿ ಕಾರ್ಮಿಕರ ಪಾಲಿಗೆ ಹಾಗೂ ಸ್ಥಳೀಯ ಅಭಿವೃದ್ಧಿ ಕೆಲಸ ನಿರ್ವಹಿಸಲು ನರೇಗಾ ಯೋಜನೆ ಹೆಚ್ಚು ಅನುಕೂಲವಾಗಿತ್ತು. ಆದರೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದರೆ ನರೇಗಾ ಯೋಜನೆ ಕೈ ತಪ್ಪಿ ಹೋಗುತ್ತದೆ. ಹೊಸದಾಗಿ ನೇಮಕಗೊಳ್ಳುವ ಪಟ್ಟಣ ಪಂಚಾಯಿತಿಗಳಿಗೆ ಕನಿಷ್ಠ 5 ವರ್ಷ ನರೇಗಾ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಚಿಂತನೆ ಮಾಡಬೇಕು. ಇದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ ಎಂದು ಜಿಲ್ಲಾ ಕೃಷಿಕೂಲಿಕಾರ ಸಂಘದ ಅಧ್ಯಕ್ಷ ದಾವಲಸಾಬ್ ನದಾಫ್ ಹೇಳಿದರು.
ಸರ್ಕಾರವು, ಜನರ ಬೇಡಿಕೆ ಈಡೇರಿಸಿದ್ದು ಖುಷಿ ನೀಡಿದೆ. ಅನುದಾನ ಹರಿದು ಬರಲಿದೆ. ಹೆಚ್ಚಿನ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಲಿಮಲ್ಲಿಕಾರ್ಜುನ ಗುಡಿ, ಸಗರ ಗ್ರಾಮದ ನಿವಾಸಿ
ಪ.ಪಂ ಸ್ಥಾಪನೆಯಿಂದ ಗ್ರಾ.ಪಂ, ತಾ.ಪಂ ಜಿ.ಪಂ ಸ್ಥಾನ ಕಳೆದುಕೊಳ್ಳುತ್ತೇವೆ. ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗುತ್ತಾರೆ. ಅಭಿವೃದ್ಧಿಯು ಪಾರದರ್ಶಕವಾಗಿ ಅನುಷ್ಠಾನಗೊಳ್ಳಲಿಮಾನಪ್ಪ ಹಾಲಬಾವಿ, ದೋರನಹಳ್ಳಿ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.