ADVERTISEMENT

ಶಹಾಪುರ| ಸ್ವಕುಳಿಸಾಳಿ ಕುಟುಂಬದ ಸಾಮಾಜಿಕ ಬಹಿಷ್ಕಾರ ಪ್ರಕರಣ; ಡಿಸಿಗೆ ನೋಟಿಸು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:02 IST
Last Updated 11 ಫೆಬ್ರುವರಿ 2026, 7:02 IST
ಶಹಾಪುರ ನಗರದ ಜಿಹ್ವೇಶ್ವರ ಕಲ್ಯಾಣ ಮಂಟಪದ ಕಟ್ಟಡ
ಶಹಾಪುರ ನಗರದ ಜಿಹ್ವೇಶ್ವರ ಕಲ್ಯಾಣ ಮಂಟಪದ ಕಟ್ಟಡ   

ಶಹಾಪುರ: ನಗರದ ಸ್ವಕುಳಿಸಾಳಿ 15 ಕುಟುಂಬಗಳಿಗೆ ಅದೇ ಸಮಾಜದದವರು ಸಾಮಾಜಿಕ ಬಹಿಷ್ಕಾರ ಹಾಕಿರುವ ದೂರಿನ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಯಿಸಿ ವರದಿ ನೀಡುವಂತೆ (ಫೆ.5) ರಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿ ವಿಚಾರಣೆ ನಡೆಯಿಸಿ, ಸೂಕ್ತ ಕ್ರಮ ಕೈಗೊಂಡ ಬಗ್ಗೆ ಮಾ.30ರ ಒಳಗೆ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಆಯೋಗವು ಆದೇಶಿಸಿದೆ.

ಸ್ವಕುಳಿಸಾಳಿ ಸಮಾಜದ ರಾಜಕುಮಾರ ಚಿಲ್ಲಾಳ ಮತ್ತು ಇತರ 9 ಜನ ಕಾನೂನುಬಾಹಿರವಾಗಿ ಬಹಿಷ್ಕರಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಬಹಿಷ್ಕಾರಕ್ಕೆ ಒಳಗಾದ ಸುರೇಶ ಫಿರಂಗಿ ದೂರು ನೀಡಿದ್ದರು.

ಪೊಲೀಸರಿಂದ ಖಾಜಿ ನ್ಯಾಯ: ಸ್ವಕುಳಿಸಾಳಿ ಕುಟುಂಬದ ಸಾಮಾಜಿಕ ಬಹಿಷ್ಕಾರ ಬಗ್ಗೆ ‘ಪ್ರಜಾವಾಣಿ’ಯಲ್ಲಿ (ಫೆ.7) ವರದಿ ಪ್ರಕಟವಾಗುತ್ತಿದ್ದಂತೆ ಶಹಾಪುರ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡು ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿಗಳನ್ನು ಹಾಗೂ ಸ್ವುಕುಳಿಸಾಳಿ ಸಮಾಜದ ಗಣ್ಯರನ್ನು ಠಾಣೆಗೆ ಬುಲಾವ್ ಮಾಡಿ ವಿಚಾರಣೆ ನಡೆಸಿದ್ದಾರೆ. ಆದರೆ ಪೊಲೀಸರು ಖಾಜಿ ನ್ಯಾಯಕ್ಕೆ ಮುಂದಾಗಿದ್ದಾರೆ. ನಾಳೆ ಬಾ ಎನ್ನುತ್ತಲೆ ಕಾಲಹರಣ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ದಿಟ್ಟಕ್ರಮವನ್ನು ತೆಗೆದುಕೊಳ್ಳದೆ ವಿಚಾರಣೆ ನೆಪದಲ್ಲಿ ಕರೆಯಿಸಿದಾಗ ಠಾಣೆಗೆ ಅಲೆಯುವ ಸರದಿ ನಮ್ಮ ಪಾಲಿಗೆ ಬಂದಿದೆ ಎಂದು ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಸದಸ್ಯರು ಪೊಲೀಸರ್ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೌನವಹಿಸಿದ ಪ್ರಗತಿಪರರು: ‘ನಗರದಲ್ಲಿ ಪ್ರಗತಿಪರ ಚಿಂತಕರ ವೇದಿಕೆ ಕಟ್ಟಿಕೊಂಡು ಹಲವು ಮುಖಂಡರು ಇದ್ದಾರೆ. ಬಹಿರಂಗವಾಗಿ ನಮ್ಮ ಅಳಲು ತೋಡಿಕೊಂಡರು ಸಹ ನಮ್ಮ ನೆರವಿಗೆ ಅಥವಾ ಕೊನೆ ಪಕ್ಷ ಸಾಂತ್ವವನ್ನು ಹೇಳಲು ಒಬ್ಬ ಪ್ರಗತಿಪರ ಚಿಂತಕರು ಬರುತ್ತಿಲ್ಲ. ನಮ್ಮ ಗೋಳು ಅರಣ್ಯರೋಧನವಾಗಿದೆ’ ಎಂದು ತುಂಬಾ ನೊಂದುಕೊಂಡ ಮಹಿಳೆ ಒಬ್ಬರು ಅವಲತ್ತುಕೊಂಡರು.

Qಸಾಮಾಜಿಕ ಬಹಿಷ್ಕಾರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಯಾರು ದೂರು ನೀಡಿಲ್ಲ. ಜಿಲ್ಲಾಧಿಕಾರಿಯಿಂದ ಯಾವುದೇ ಪತ್ರ ಬಂದಿಲ್ಲ. ಇದರ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು
ಸಿದ್ದಾರೂಢ ಬನ್ನಿಕೊಪ್ಪ ತಹಶೀಲ್ದಾರ್‌
ಪೊಲೀಸರು ಠಾಣೆಗೆ ಕರೆಯಿಸಿ ಖಾಜಿ ನ್ಯಾಯ ಮಾಡಲು ಆರಂಭಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಕಾನೂನು ಸೇವಾ ಸಮಿತಿಗೆ ದೂರು ಸಲ್ಲಿಸುವೆ
ಸುರೇಶ ಫಿರಂಗಿ ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.