ADVERTISEMENT

ಶಹಾಪುರ | ಕಸಾಪ ಅಧ್ಯಕ್ಷರ ಆಯ್ಕೆ: ಮುಸುಕಿನ ಗುದ್ದಾಟ

ಶಹಾಪುರ ತಾಲ್ಲೂಕು ಕಸಾಪ: ಜಿಲ್ಲಾ ಘಟಕದ ಅಧ್ಯಕ್ಷರ ನಿರ್ಧಾರವೇ ಅಂತಿಮ

ಟಿ.ನಾಗೇಂದ್ರ
Published 4 ಫೆಬ್ರುವರಿ 2022, 19:30 IST
Last Updated 4 ಫೆಬ್ರುವರಿ 2022, 19:30 IST
ಸಿದ್ದಲಿಂಗಣ್ಣ ಆನೇಗುಂದಿ, ಡಾ.ಅಬ್ದುಲ ಕರೀಂ ಕನ್ಯಾಕೊಳ್ಳೂರ
ಸಿದ್ದಲಿಂಗಣ್ಣ ಆನೇಗುಂದಿ, ಡಾ.ಅಬ್ದುಲ ಕರೀಂ ಕನ್ಯಾಕೊಳ್ಳೂರ   

ಶಹಾಪುರ: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ ತಾಲ್ಲೂಕಿನ ಸಾಹಿತ್ಯ ಆಸಕ್ತರು, ಸಂಘಟಕರು, ಕನ್ನಡಾಭಿಮಾನಿಗಳು, ಸಾಹಿತಿಗಳು ಅಧ್ಯಕ್ಷ ಹುದ್ದೆಯ ಲಾಬಿ ಜೋರಾಗಿ ಕೇಳಿ ಬರುತ್ತಲಿದೆ. ಈಗಾಗಲೇ ಮುಸುಕಿನ ಗುದ್ದಾಟವೂ ಶುರವಾಗಿದೆ. ಅವೆಲ್ಲವುದಕ್ಕಿಂತ ಮುಖ್ಯವಾಗಿ ಜಿಲ್ಲಾ ಘಟಕದ ಅಧ್ಯಕ್ಷರ ಅಂತಿಮ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎನ್ನುವುದು ಕಸಾಪದ ಸದಸ್ಯರು ಮಾತು.

ತಾಲ್ಲೂಕಿನಲ್ಲಿ ಸುಮಾರು 1,400 ಸದಸ್ಯರಿದ್ದಾರೆ. ಕಳೆದ 15 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಿದ್ದಲಿಂಗಣ್ಣ ಆನೇಗುಂದಿ ಅವರು ತಮ್ಮ ಅಧಿಕಾರವಧಿಯಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ₹ 10 ಲಕ್ಷ ಠೇವಣಿ ಸಂಗ್ರಹ, ಕಾರ್ಯಕ್ರಮ ನಡೆಯಲು ಬೇಕಾಗುವ ಸಾಮಗ್ರಿಗಳು ಲಭ್ಯವಾಗುವಂತೆ ಮಾಡಿದ್ದಾರೆ. ಇನ್ನೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕಸಾಪದ ಸದಸ್ಯರನ್ನಾಗಿಸಿದ್ದಾರೆ ಎಂಬ ಹೆಗ್ಗಳಿಕೆ ಇದೆ. ಈಗ ಎಲ್ಲರೂ ಅಧ್ಯಕ್ಷರಾಗಬೇಕು ಎನ್ನುತ್ತಿದ್ದಾರೆ. ಒಗ್ಗೂಡಿ ಕೆಲಸ ಮಾಡಲು ಯಾರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಸಾಹಿತಿಯೊಬ್ಬರು.

ಶಹಾಪುರ ಕಸಾಪ ಪರಿಷತ್‌ನಲ್ಲಿ ಹೆಚ್ಚಾಗಿ ಪ್ರಬಲ ಕೋಮಿನ ವ್ಯಕ್ತಿಗಳು ಆಯ್ಕೆಯಾಗುತ್ತಾ ಬಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ಲಿಂಗಾಯತ ಸಮುದಾಯವರು ನೇಮಕವಾಗುತ್ತಿರುವುದು ವಿಶೇಷವಾಗಿದೆ. ಪ್ರಸಕ್ತ ಬಾರಿ ಜಾತಿ ಲೆಕ್ಕಾಚಾರದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ ದೇಶಮುಖ, ಹಿರಿಯ ಸಾಹಿತಿ ಶಿವಣ್ಣ ಇಜೇರಿ, ಗುರುಬಸವಯ್ಯ ಗದ್ದುಗೆ, ಬಸವರಾಜ ಅರುಣಿ, ಶರಣು ಗದ್ದುಗೆ ಅವರ ಹೆಸರು ಕೇಳಿ ಬರುತ್ತಲಿವೆ.

ADVERTISEMENT

ಅಲ್ಲದೆ ಉಪನ್ಯಾಸಕರಾದ ಡಾ.ಅಬ್ದುಲ ಕರೀಂ ಕನ್ಯಾಕೊಳ್ಳುರ, ಡಾ.ರವೀಂದ್ರನಾಥ ಹೊಸ್ಮನಿ, ವಕೀಲ ಸಾಲೋಮನ್ ಆಲಫ್ರೇಡ್ ಅವರು ಹೆಸರು ತೇಲಿ ಬರುತ್ತಲಿದೆ. ಜಾತಿ ಮೀರಿ ಆಯ್ಕೆ ಮಾಡುವುದಾದರೆ ನಮ್ಮನ್ನು ಪರಿಣಿಸಿ. ನ್ಯಾಯಾಲಯದಲ್ಲಿ ಕನ್ನಡ ಭಾಷೆಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವೆ. ಕನ್ನಡ ಪ್ರಾಧಿಕಾರದಿಂದ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದಿರುವೆ. ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವೆ ಎನ್ನುತ್ತಾರೆ ವಕೀಲ ಸಾಲೋಮನ್ ಆಲ್ಫ್ರೇಡ್ ಎನ್ನುತ್ತಾರೆ.

ಅಲ್ಲದೆ ಅನಿರೀಕ್ಷಿತವಾಗಿ ಬೇರೆಯವರು ಸಹ ಅಧ್ಯಕ್ಷರಾದರೆ ಅಚ್ಚರಿಪಡುವಂತೆ ಇಲ್ಲ. ಈಗಾಗಲೇ ಕಸಾಪ ಸದಸ್ಯರಿಗೆ ಮನ ಒಲಿಸುವ ಕಾರ್ಯವು ತೆರೆಮರೆಯಲ್ಲಿ ನಡೆದಿದೆ ಎನ್ನುತ್ತಾರೆ ಸಾಹಿತಿಯೊಬ್ಬರು.

**

15 ವರ್ಷದಿಂದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಮಾಡಿದ್ದು ನನಗೆ ತೃಪ್ತಿ ಇದೆ. ಅನಾರೋಗ್ಯದ ಕಾರಣ ಹಿಂದೆ ಸರಿದಿರುವೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ.
-ಸಿದ್ದಲಿಂಗಣ್ಣ ಆನೇಗುಂದಿ, ನಿಕಟಪೂರ್ವ ಅಧ್ಯಕ್ಷರು

ಹಲವು ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸೇವೆ ಸಲ್ಲಿಸಿರುವೆ. ಜಾತ್ಯಾತೀತವಾಗಿ ಸಾಹಿತ್ಯವನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಯತ್ನ ಮಾಡುವೆ. ಆದರೆ ಸಂಖ್ಯಾಬಲ ಹಾಗೂ ಜಾತಿಯ ಬೆಂಬಲ ನನಗೆ ಇಲ್ಲ.
-ಡಾ.ಅಬ್ದುಲ ಕರೀಂ ಕನ್ಯಾಕೊಳ್ಳುರ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.