ADVERTISEMENT

ಶಹಾಪುರ ಅನಧಿಕೃತ ಆಸ್ಪತ್ರೆಗಳ ತವರು

ಪರವಾನಗಿ ಇಲ್ಲದ ಔಷಧ ಅಂಗಡಿಗಳು; ಅಕ್ರಮ ದಂಧೆಯಲ್ಲಿ ಪ್ರಭಾವಿಗಳೇ ಶಾಮೀಲು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 6:12 IST
Last Updated 22 ಡಿಸೆಂಬರ್ 2023, 6:12 IST
ಯಾದಗಿರಿ ನಗರದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಪರವಾನಗಿ ಪಡೆದುಕೊಳ್ಳುವಂತೆ ನೋಟಿಸ್‌ ನೀಡಲಾಯಿತು
ಯಾದಗಿರಿ ನಗರದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಪರವಾನಗಿ ಪಡೆದುಕೊಳ್ಳುವಂತೆ ನೋಟಿಸ್‌ ನೀಡಲಾಯಿತು   

ಯಾದಗಿರಿ: ಜಿಲ್ಲೆಯ ಶಹಾಪುರ ನಗರದಲ್ಲಿ ಆಸ್ಪತ್ರೆಗಳು ಬೀದರ್‌-ಶ್ರೀರಂಗಪಟ್ಟಣದ ಹೆದ್ದಾರಿ ಮೇಲೆ ರಾರಾಜಿಸುತ್ತಿವೆ. ಸ್ಥಳೀಯ ಪ್ರಭಾವಿಗಳು ಇಲ್ಲವೇ ಜಾತಿ, ಧರ್ಮದ ಹೆಸರಿನಲ್ಲಿ ಹಿಡಿತ ಸಾಧಿಸಿದ ವ್ಯಕ್ತಿಗಳಿಗೆ ಸೇರಿದ ಈ ಆಸ್ಪತ್ರೆಗಳು ಹಾಗೂ ರೋಗ ಪರೀಕ್ಷೆ ಪ್ರಯೋಗಾಲಯಗಳು ಬಡ ಜನರ ರಕ್ತ ಹೀರುವ ತಾಣವಾಗಿ ಮಾರ್ಪಟ್ಟಿವೆ.

ಬಹುತೇಕ  ಗ್ರಾಮಗಳಲ್ಲಿ ಯಾವುದೇ ವೈದ್ಯಕೀಯ ಪದವಿ ಪಡೆಯದ ವೈದ್ಯರ ಸೇವೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇವರಿಗೆ ಆರ್‌ಎಂಪಿ ವೈದ್ಯರು ಎಂದು ಕರೆಯುತ್ತಾರೆ. ಇವರು ವೈದ್ಯರ ಹತ್ತಿರ ಕಂಪೌಂಡರ್ ಎಂದು ಸೇರಿ ವೈದ್ಯ ವೃತ್ತಿ ಬಗ್ಗೆ ತಿಳಿದು ಸೇವೆ ನೀಡುತ್ತಾರೆ.

ಅನಧಿಕೃತ ಆಸ್ಪತ್ರೆ ಮತ್ತು ಪ್ರಯೋಗಾಲಯ ಮೇಲೆ ಆಗಾಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ಅನಧಿಕೃತ ಎರಡು ಆಸ್ಪತ್ರೆ ಮತ್ತು ಪ್ರಯೋಗಾಲಯವೊಂದನ್ನು ಬಂದ್‌ ಮಾಡಿಸಲಾಗಿದೆ.

‘ಜಿಲ್ಲೆಯ ಬಹುತೇಕ ‘ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ತಮ್ಮದೇ ಆದ ಕ್ಲಿನಿಕ್ ತೆರೆದಿದ್ದಾರೆ. ಅಲ್ಲದೇ ಆಯಾ ಬಡಾವಣೆಗೆ ಒಂದು ಪ್ರಯೋಗಾಲಯ ಸ್ಥಾಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ ವೇಳೆ ನಾಮಕಾವಸ್ತೆಗೆ ರೋಗಿಗಳ ತಪಾಸಣೆ ಮಾಡಲಾಗುತ್ತದೆ. ರಾತ್ರಿ ಸಮಯಕ್ಕೆ ಬೇರೆ ರೂಪವನ್ನು ತಾಳುತ್ತವೆ. ಪ್ರಾಕ್ಟೀಸ್‌ ಕ್ಲಿನಿಕ್‌ಗಳು ಬೇಕು. ಆದರೆ, ಸರ್ಕಾರಿಗಿಂತ ಖಾಸಗಿಯಲ್ಲೇ ಹೆಚ್ಚು ಸಮಯ ಕಳೆಯುವ ಹಾಗೂ ಶಿಫಾರಸು ಮಾಡುವ ವೈದ್ಯರು, ಸಿಬ್ಬಂದಿಗಳೇ ಜಿಲ್ಲೆಯಲ್ಲಿ ಹೆಚ್ಚಾಗಿದ್ದಾರೆ. ಈ ಅನಧಿಕೃತ ಆಸ್ಪತ್ರೆಗಳ ಕುರಿತು  ಮೇಲಧಿಕಾರಿಗೆ ದೂರು ನೀಡಿದರೆ ಅಧಿಕಾರಿಗಳು ನೇರವಾಗಿ ಆಸ್ಪತ್ರೆಯ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಇದರಿಂದ ಆಸ್ಪತ್ರೆ ಮಾಲೀಕರು ನೇರವಾಗಿ ನಮ್ಮ ಬಳಿ ಬಂದು ಹೆದರಿಸಿ ದೂರು ವಾಪಸ್‌ ಪಡೆಯುವಂತೆ ಒತ್ತಡ ಹಾಕುವುದು ಸಾಮಾನ್ಯವಾಗಿದೆ. ಅನಧಿಕೃತ ಆಸ್ಪತ್ರೆ ಸ್ಥಾಪಿಸವಲ್ಲಿ ಮೇಲಧಿಕಾರಿಗಳ ಪಾತ್ರ ಹಾಗೂ ಪಾಲು ಜಾಸ್ತಿ ಇದೆ' ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

‘ಅನಧಿಕೃತ ಕ್ಲಿನಿಕ್‌ಗಳಲ್ಲಿ ಅಲ್ಲಿನ ಆಡಳಿತಾಧಿಕಾರಿ ಹೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಸ್ಥಳೀಯ ಗೂಂಡಾಗಳನ್ನು ಕರೆಯಿಸಿ ವಸೂಲಿ ಮಾಡಿಸುತ್ತಾರೆ. ಬೆಲೆ ನಿಗದಿಗೆ ಯಾವುದೇ ಮಾನದಂಡ ಹಾಕಿಲ್ಲ. ಔಷಧಿ ಅಂಗಡಿ ಸ್ಥಾಪಿಸುವಾಗ ಸರ್ಕಾರ ಮಾರ್ಗಸೂಚಿ ನಿಯಮದಂತೆ ಪ್ರಮಾಣ ಪತ್ರ ಪಡೆದವರು ಮಾತ್ರ ಅಂಗಡಿ ಸ್ಥಾಪಿಸಲು ಅವಕಾಶವಿದೆ. ಆದರೆ, ನಗರದಲ್ಲಿ ಬಹುತೇಕ ಔಷಧಿ ಅಂಗಡಿಯ ಮಾಲೀಕರು ಮತ್ತೊಬ್ಬರ ಪರವಾನಗಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಮೊದಲು ಪ್ರಮಾಣ ಪತ್ರ ನೀಡಿದ ವ್ಯಕ್ತಿಯನ್ನು ಬಂಧಿಸಬೇಕು. ಅಲ್ಲದೆ ಡ್ರಗ್ಸ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅನಧಿಕೃತವಾಗಿ ಆಸ್ಪತ್ರೆ ಹಾಗೂ ಔಷಧಿ ಅಂಗಡಿ ಸ್ಥಾಪನೆ ಮಾಡಿರುವುದು ಕಣ್ಣಿಗೆ ಕಾಣುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಇದು ಸಹ ಅಕ್ರಮ ದಂಧೆ ನಡೆಯಲು ಮೇಲಧಿಕಾರಿಗಳು ಸಹಕಾರ ಇದೆ’ ಎನ್ನುತ್ತಾರೆ ಅವರು.

‘ನಗರ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪರವಾನಗಿ ಇಲ್ಲದ ಔಷಧ ಅಂಗಡಿಗಳು ತಲೆಯೆತ್ತಿವೆ. ಈ ಔಷಧ ಅಂಗಡಿ ಮಾಲೀಕರೇ   ತಮ್ಮದೇ ಆದ ಅನಧಿಕೃತ ಆಸ್ಪತ್ರೆ ಸ್ಥಾಪಿಸಿ ತಾವೇ ವೈದ್ಯರಿಗೆ ಇಂತಿಷ್ಟು ವೇತನ ನೀಡುತ್ತಾರೆ. ನಂತರ ತಮ್ಮ ಔಷಧಿ ಅಂಗಡಿಯಲ್ಲಿರುವ ಔಷಧಿಯನ್ನು ತಪಾಸಣೆ ಮಾಡಿದ ರೋಗಿಗೆ ಬರೆದುಕೊಡುವ ಅಲಿಖಿತ ಒಪ್ಪಂದದ ಕರಾಳ ದಂಧೆ ನಡೆಯುತ್ತಲಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಯಾರು ಇದನ್ನು ಮಟ್ಟ ಹಾಕುತ್ತಿಲ್ಲ. ಬಡ ಜನರ ರಕ್ತ ಹೀರುವ ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ರೈತ ಮುಖಂಡ ಸಿದ್ದಯ್ಯ ಹಿರೇಮಠ.

ADVERTISEMENT

‘ಅನಧಿಕೃತ ಆಸ್ಪತ್ರೆ ಮತ್ತು ಲ್ಯಾಬ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ರೋಗಿಗಳು ಇಂತಹ ಆಸ್ಪತ್ರೆ ಮತ್ತು ಲ್ಯಾಬ್‌ಗಳಿಗೆ ಹೋಗಬಾರದು‘ ಎನ್ನುತ್ತಾರೆ ಸುರಪುರ ಟಿಎಚ್‌ಒ ಡಾ. ರಾಜಾ ವೆಂಕಪ್ಪನಾಯಕ.

ಮತ್ತೊಬ್ಬರ ಜೀವಕ್ಕೆ ಸಂಚಕಾರ ನೀಡುವ ಇಂಥ ಅನಧಿಕೃತ ಕೇಂದ್ರಗಳ ಮೇಲೆ ದಾಳಿ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲೆಯ ಜನ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

****

ಪ್ರಜಾವಾಣಿ ತಂಡ: ಬಿ.ಜಿ.ಪ್ರವೀಣಕುಮಾರ, ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ.

ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಈಚೆಗೆ ಪರವಾನಗಿ ಇಲ್ಲದೇ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರವಾನಗಿ ಪಡೆದುಕೊಳ್ಳಲು ಜಾಗೃತಿ ಮೂಡಿಸಲಾಯಿತು
ಯಾದಗಿರಿ ನಗರ ಸೇರಿ ತಾಲ್ಲೂಕು ವ್ಯಾಪ್ತಿಯ 10 ಅನಧಿಕೃತ ಲ್ಯಾಬ್‌ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ನೋಟಿಸ್‌ ನೀಡಲಾಗಿದೆ. ಪರವಾನಗಿ ಪಡೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿಯೂ ದಾಳಿ ಮಾಡಿ ನೋಟಿಸ್‌ ನೀಡಲಾಗುವುದು. ಸಂಬಂಧಿಸಿದವರು ಪರವಾನಗಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು.
-ಡಾ.ಹಣಮಂತರೆಡ್ಡಿ ತಾಲ್ಲೂಕು ವೈದ್ಯಾಧಿಕಾರಿ ಯಾದಗಿರಿ
ಕೆಪಿಎಂಇ ಕಾಯ್ದೆ ಅಡಿ ಅನಧಿಕೃತ ಆಸ್ಪತ್ರೆ ಕ್ಲಿನಿಕ್ ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮೇಲಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅನಧಿಕೃತ ಕೇಂದ್ರದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
- ಡಾ.ರಮೇಶ ಗುತ್ತೆದಾರ ತಾಲ್ಲೂಕು ವೈದ್ಯಾಧಿಕಾರಿ ಶಹಾಪುರ
ವೈದ್ಯಕೀಯ ಪದವಿ ಪಡೆದ ವೈದ್ಯರು ಮತ್ತು ಸೂಕ್ತ ಪ್ರಮಾಣ ಪತ್ರ ಹೊಂದಿರುವವರು ಲ್ಯಾಬ್ ನಡೆಸುತ್ತಿದ್ದರೆ ಅಂತವರಿಗೆ ನೋಂದಣಿ ಮಾಡಿಸಿಕೊಳ್ಳಲು 10 ದಿನ ಕಾಲಾವಕಾಶ ನೀಡಲಾಗುತ್ತದೆ. ಅನರ್ಹರ ಆಸ್ಪತ್ರೆ ಲ್ಯಾಬ್‌ಗಳನ್ನು ಬಂದ್‌ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.
-ಡಾ.ರಾಜಾ ವೆಂಕಪ್ಪನಾಯಕ ಸುರಪುರ ತಾಲ್ಲೂಕು ವೈದ್ಯಾಧಿಕಾರಿ
ಗ್ರಾಮೀಣ ಸೇವೆ ನೀಡುತ್ತಿರುವ ಆರ್‌ಎಂಪಿ ವೈದ್ಯರಿಂದ ಸಾಕಷ್ಟು ಅನುಕೂಲಗಳಿವೆ. ಆರೋಗ್ಯ ಇಲಾಖೆಯು ನುರಿತ ಆರ್‌ಎಂಪಿ ವೈದ್ಯರಿಗೆ ತರಬೇತಿ ನೀಡಿ ಸೇವೆ ನೀಡುವ ಅವಕಾಶ ನೀಡಬೇಕು. ನಾಟಿ ವೈದ್ಯರಿಗೂ ಪ್ರಾಶಸ್ತ್ಯ ನೀಡಬೇಕು.
-ಆರ್.ಸಿ. ನಾಯಕ ನಾಟಿ ವೈದ್ಯರ ಸಂಘದ ಅಧ್ಯಕ್ಷ

ಲ್ಯಾಬ್‌ಗಳಿಗೆ ಬೀಗ; ಪ್ರಭಾವಿಗಳಿಂದ ಓಪನ್‌ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ)ಯಡಿ ಅನಧಿಕೃತ ಆಸ್ಪತ್ರೆಗಳು ಕ್ಲಿನಿಕ್‌ಗಳು ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ఇಲಾಖೆ ಆಯುಕ್ತ ಡಿ.ರಂದೀಪ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರಿಂದ ಜಿಲ್ಲೆಯ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿ ಅನಧಿಕೃತ ಲ್ಯಾಬ್‌ ಕ್ಲಿನಿಕ್‌ಗಳಿಗೆ ಬೀಗ ಹಾಕಿದ್ದಾರೆ. ಆದರೆ ಅಧಿಕಾರಿಗಳು ಕಚೇರಿಗೆ  ಹೋಗುವಷ್ಟರಲ್ಲೇ ಪ್ರಭಾವಿಗಳಿಂದ ಕರೆ ಮಾಡಿ ಮತ್ತೆ ತೆಗೆಸಲಾಗಿದೆ.  ಯಾದಗಿರಿ ನಗರ ತಾಲ್ಲೂಕಿನ ರಾಮಸಮುದ್ರ ಸುರಪುರ ನಗರದಲ್ಲಿ ಡಯಗ್ನೋಸ್ಟಿಕ್‌ ಹೋಮಿಯೋಪಥಿ ಕ್ಲಿನಿಕ್‌ ಆಸ್ಪತ್ರೆ ಪ್ರಯೋಗಾಲಯಗಳ ಮೇಲೆ ದಾಳಿ ಮಾಡಲಾಗಿದೆ. ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳ ರಾಜನಕೋಳೂರ ಗ್ರಾಮದಲ್ಲಿ ಅನಧಿಕೃತ ಆಸ್ಪತ್ರೆ ನರ್ಸಿಂಗ್‌ ಹೋಂ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ‘ಪ್ರಭಾವಿಗಳಿಂದಾಗಿ ಅಧಿಕಾರಿಗಳ ಕೈಕಟ್ಟಿದಂತೆ ಆಗಿದೆ. ಕೆಲ ಅಧಿಕಾರಿಗಳು ಆಯಾ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದಾರೆ. ಕ್ರಮ ತೆಗೆದುಕೊಂಡರೆ ತಮ್ಮ ಹುದ್ದೆಗೆ ಎಲ್ಲಿ ಕುತ್ತು ಬರುತ್ತದೋ ಎಂದು ಆ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶ ಪಾಲಿಸಿದ್ದಾರೆ ಹೊರತು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಕರಾಳ ದಂಧೆಗೆ ಕಡಿವಾಣ ಬಿದ್ದಿಲ್ಲ’ ಎಂದು ವಡಗೇರಾ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ಬಸವರಾಜ ಪಡಶೆಟ್ಟಿ ಆರೋಪಿಸುತ್ತಾರೆ.

ಯಾರದೋ ಹೆಸರಲ್ಲಿ ಮತ್ಯಾರೋ ಪ್ರಾಕ್ಟೀಸ್‌!

ಅಧಿಕೃತ ಮಾನ್ಯತೆಯನ್ನು ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆದವರ ಪ್ರಮಾಣ ಪತ್ರದ ಆಧಾರದಲ್ಲಿ ಆಸ್ಪತ್ರೆಗೆ ಅನುಮತಿ ಪಡೆದು ಮತ್ಯಾರೋ ಚಿಕಿತ್ಸೆ ನೀಡುವ ‘ಚಲಾಕಿ ಚಿಕಿತ್ಸಾ ಕೇಂದ್ರ’ಗಳು ಜಿಲ್ಲೆಯ ಕೆಲ ಗ್ರಾಮೀಣ ಭಾಗದಲ್ಲಿರುವ 'ಶಂಕೆ'ಯನ್ನು ವೈದ್ಯಕೀಯ ಸಿಬ್ಬಂದಿಗಳೇ ವ್ಯಕ್ತಪಡಿಸುತ್ತಾರೆ. ಬಿಎಎಂಎಸ್‌ ಬಿಎಚ್‌ಎಂಸ್‌ ಸೇರಿದಂತೆ ಅಧಿಕೃತ ವೈದ್ಯಕೀಯ ವ್ಯಾಸಂಗ ಮಾಡಿದವರು ದೂರದ ಯಾವುದೋ ನಗರದಲ್ಲಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಸೇವೆಯಲ್ಲಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಅವರ ಮೆಡಿಕಲ್‌ ಸರ್ಟಿಫಿಕೇಟ್‌ ಮತ್ತು ವೈದ್ಯಕೀಯ ಸಂಘದ ಗುರುತಿನ ಚೀಟಿ ಬಳಸಿ ಆಸ್ಪತ್ರೆಗೆ ಅನುಮತಿ ಪಡೆಯುವ ಕೆಲವರು (ಆರ್‌ಎಂಪಿ) ಆಸ್ಪತ್ರೆಯನ್ನು ನಡೆಸುತ್ತಾರೆ. ಇದು ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಯಾವುದೋ ಪ್ರಭಾವದಿಂದ 'ಜಾಣ ಕುರುಡು' ಕಾಣಿಸಿಕೊಳ್ಳುತ್ತದೆ ಎನ್ನುವ ಆರೋಪಗಳಿವೆ.

ಪ್ರಮಾಣ ಪತ್ರ ನೀಡುವ ಸಂಸ್ಥೆಗಳ ಮೇಲೂ ಸಂಶಯ

ವಿದೇಶಿ ಮೂಲದ ವೈದ್ಯಕೀಯ ಸಂಸ್ಥೆಗಳಿಂದ ಹಣ ಕೊಟ್ಟು ವೈದ್ಯಕೀಯ ವ್ಯಾಸಂಗದ ಪ್ರಮಾಣ ಪತ್ರಗಳನ್ನು ಪಡೆದು ವೈದ್ಯ ವೃತ್ತಿ ನಡೆಸುವ ವೈದ್ಯರೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.  ‘ವರ್ಷವಿಡೀ ನಮ್ಮ ಕಣ್ಣೆದುರಿಗೇ ಇದ್ದವರು ಮತ್ತು ಆರ್‌ಎಂಪಿ ಆಗಿ ಕೆಲಸ ಮಾಡುತ್ತಿದ್ದವರು ಏಕಾಏಕಿ ಬಿಎಎಂಎಸ್‌ ಬಿಎಚ್‌ಎಂಎಸ್‌ ಪ್ರಮಾಣಿಕೃತ ವೈದ್ಯರಾಗಿ ಬಿಟ್ಟಿದ್ದಾರೆ. ಹಣ ಕೊಟ್ಟ ತಕ್ಷಣ ಯಾರು ಬೇಕಾದರೂ ಹೀಗಾಗಬಹುದೇ?’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಶ್ನಿಸುತ್ತಾರೆ. ಆರ್‌ಎಂಪಿ ವೈದ್ಯರಲ್ಲೂ ಹಲವರಿಗೆ ಅತ್ಯುತ್ತಮ ಎನ್ನಬಹುದಾದ ಜ್ಞಾನವಿದೆ. ಅನವಶ್ಯಕ ಚಿಕಿತ್ಸೆ ನೀಡರು ಮತ್ತು ತೀವ್ರ ಸಮಸ್ಯೆಯೆನಿಸಿದರೆ 'ದೊಡ್ಡಾಸ್ಪತ್ರೆ'ಗಳಿಗೆ ಹೋಗುವಂತೆ ತಿಳಿಸುತ್ತಾರೆ. ಇವರಿಗೆ ಅನಧಿಕೃತ ಸರ್ಟಿಫಿಕೆಟ್‌ ಬೇಕಿಲ್ಲ. ‘ನೇರವಾಗಿ ಆರ್‌ಎಂಪಿ ಎಂದು ಹೇಳಿ ಚಿಕಿತ್ಸೆ ಕೊಡುವವರಿಗಿಂತ ಸುಳ್ಳು ಪದವಿಗಳನ್ನು ಹೊಂದಿರುವ ವೈದ್ಯರಿಂದ ಜನರಿಗೆ ಸಮಸ್ಯೆ ಹೆಚ್ಚಿನದು. ಜತೆಗೆ ಹಣ ಸುಲಿಗೆಯೂ ಹೆಚ್ಚು' ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.