ಯಾದಗಿರಿ: ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ಹಾಗೂ ಬೆನಕನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ, ಭಜನೆಯ ಮಹಾಮಂಗಳಾರತಿ ಜರುಗಿದವು. ತಿಂಗಳ ಪರ್ಯಂತ ನಡೆದ ಭಜನೆ, ಪ್ರವಚನ, ಗುರು ಪಾದಪೂಜೆ, ಆರಾಧನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ದೇವಸ್ಥಾನಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ, ಚೆಂಡು ಹೂವಿನ ಸಸಿ, ತೆಂಗಿನ ಗರಿಗಳನ್ನು ಕಟ್ಟಲಾಗಿತ್ತು. ನಸುಕಿನ ಜಾವದಿಂದಲೇ ದೇವಸ್ಥಾನಗಳಲ್ಲಿನ ಮೂರ್ತಿಗಳು ಮತ್ತು ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಾನಾ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿ, ಮಹಾಮಂಗಳಾರತಿಯೂ ಮಾಡಲಾಯಿತು.
ಭಕ್ತರು ಕುಟುಂಬ ಸಮೇತರಾಗಿ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತೀರ್ಥ ಸ್ವೀಕರಿಸಿದರು. ಹೂವು, ಹಣ್ಣು, ನೈವೇದ್ಯ ಅರ್ಪಿಸಿದರು. ಕಾಯಿ ಒಡೆದು ಊದಿನಕಡ್ಡಿ ಬೆಳಗಿ ಭಕ್ತಿ ಸಮರ್ಪಿಸಿದರು. ನಗರ ಬಯಲು ಹನುಮಾನ ಮಂದಿರ, ಲಕ್ಷ್ಮಿ ದೇವಸ್ಥಾನ, ಗುರುಮಠಕಲ್ ತಾಲ್ಲೂಕಿನ ಇಡ್ಲೂರು ಶಂಕರಲಿಂಗೇಶ್ವರ, ಕಾಳಬೆಳಗುಂದಿ ಬನದೇಶ್ವರ, ಗವಿಸಿದ್ಧಲಿಂಗೇಶ್ವರ ದೇವಸ್ಥಾನ, ಲಕ್ಷ್ಮಿಪುರದ ಮಲ್ಲಿಕಾರ್ಜುನ ಗುಡ್ಡ ಸೇರಿದಂತೆ ಹಲವೆಡೆ ಭಕ್ತರ ದಂಡು ಇತ್ತು.
ಮಾತಾ ಮಣಿಕೇಶ್ವರಿ ನಗರದ ಹನುಮಾನ ದೇವಸ್ಥಾನದಲ್ಲಿ ಒಂದು ತಿಂಗಳಿಂದ ನಿತ್ಯ ರುದ್ರಾಭಿಷೇಕ, ಭಜನೆ ನಡೆಯಿತು. ಶನಿವಾರ ಬಿಲ್ವಾರ್ಚನೆ, ಎಲೆಪೂಜೆ ಮಹಾಮಂಗಳಾರತಿಯೊಂದಿಗೆ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಬಿತ್ತು. ಮಲಕಯ್ಯ ಸ್ವಾಮಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಇದೇ ವೇಳೆ ಪ್ರಸಾದ ವ್ಯವಸ್ಥೆಯೂ ಮಾಡಲಾಯಿತು.
ದೇವಸ್ಥಾನ ಸಮಿತಿಯ ಪ್ರಮುಖರಾದ ಅಮಿನರೆಡ್ಡಿ ಹತ್ತಿಕುಣಿ, ರವೀಂದ್ರನಾಥ ರೆಡ್ಡಿ, ಹಣಮಂತ ದೊಡ್ಡಮನಿ, ಬಸಯ್ಯ ಸ್ವಾಮಿ ಹಿರೇಮಠ, ವೆಂಕಟೇಶ ಜಗಲಿಮನಿ, ರವೀಂದ್ರನಾಥ ಮಾಲಿಪಾಟೀಲ, ರವೀಂದ್ರನಾಥ ಪೊಲೀಸ್ ಪಾಟೀಲ, ಗುರುಲಿಂಗಯ್ಯ ಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.
ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದಲ್ಲಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ ಜರುಗಿದವು. ಸಂಜೆ ಶಿವಾನುಭವ ಚಿಂತನಾ ಗೋಷ್ಠಿ ನಡೆಯಿತು. ಸಾವಿರಾರು ಭಕ್ತರು ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರ ಆಶೀರ್ವಾದ ಪಡೆದರು.
ಮಹಾಪ್ರಸಾದ ವ್ಯವಸ್ಥೆ: ಸುರಪುರ ತಾಲ್ಲೂಕಿನ ಹಿಂದೂ ಮುಸ್ಲಿಂ ಸೌಹಾರ್ದದ ಪ್ರತೀಕವಾದ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಹರಿದುಬಂತು. ಐವರು ಭಕ್ತರು ಪಂಚಾಮೃತ ಅಭಿಷೇಕ ನೆರವೇರಿಸಿದರು. ಮಹಾಪ್ರಸಾದ ವ್ಯವಸ್ಥೆಯೂ ಮಾಡಲಾಗಿತ್ತು.
‘ಮಾಲಾಧಾರಿಗಳು ನದಿಯಲ್ಲಿ ಸ್ನಾನ ಮಾಡಿ ರಾತ್ರಿ ನಿತ್ಯ ಭಜನೆ ಮಾಡುತ್ತಿದ್ದರು. ಪ್ರತಿ ಗುರುವಾರ ಪಂಚಾಮೃತ ಅಭಿಷೇಕವೂ ನಡೆಯಿತು. ಶ್ರಾವಣ ಮಾಸದ ಕಾರ್ಯಕ್ರಮಗಳು ಶನಿವಾರ ಮಹಾಪ್ರಸಾದದೊಂದಿಗೆ ಕೊನೆಯಾದವು. ಸಾವಿರಾರು ಭಕ್ತರು ಮೌನೇಶ್ವರರ ದರ್ಶನ ಮಾಡಿದರು. ತುಂಬಿ ಹರಿಯುತ್ತಿರುವ ನದಿಗೆ ಇಳಿಯದಂತೆ ಪೊಲೀಸರು ಭಕ್ತರನ್ನು ತಡೆದರು’ ಎಂದು ದೇವಸ್ಥಾನ ಸಮಿತಿ ಗಂಗಾಧರ ನಾಯಕ್ ತಿಳಿಸಿದರು.
ಮೈಲಾರನಿಗೆ ಬಿಲ್ವಾರ್ಚನೆ ರುದ್ರಾಭಿಷೇಕ
ಮೈಲಾಪುರದ ಮೈಲಾರಲಿಂಗೇಶ್ವರ ದೇವರಿಗೆ ನಸುಕಿನ ಜಾವ 2ರಿಂದ 5ರವರೆಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಬಿಲ್ವಾರ್ಚನೆ ಪಟ್ಟ ಕಟ್ಟುವ ಪೂಜೆಗಳು ನಡೆದವು. ನಂತರ 6ರಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಬೆಟ್ಟದಲ್ಲಿನ ತುಪ್ಪದ ಬಂಡೆಗೆ ತುಪ್ಪದ ದೀಪವೂ ಹಚ್ಚಲಾಯಿತು. ದೇವಸ್ಥಾನದ ಪೀಠಾಧಿಪತಿ ಗಣಪ್ಪ ಪೂಜಾರಿ ಬಸವರಾಜ ಪೂಜಾರಿ ಬೆನ್ನಣ್ಣಗೌಡ ಪೂಜಾರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ‘ಪ್ರತಿ ಸೋಮವಾರ ದೀಪ ಪೂಜೆ ಭಾನುವಾರ ಕುಂಕುಮ ಮತ್ತು ಭಂಡಾರ ಪೂಜೆ ನಿತ್ಯ ಸಂಜೆ– ಬೆಳಿಗ್ಗೆ ಮಹಾಮಂಗಳಾರತಿ ನಡೆದವು. ಬೆನಕನ ಅಮಾವಾಸ್ಯೆಯ ದಿನ 30 ಸಾವಿರಕ್ಕೂ ಹೆಚ್ಚು ಭಕ್ತರು ಬಂದು ದೇವರ ದರ್ಶನಪಡೆದರು. ಬೆಟ್ಟದ ಮೇಲೆ ಹಾಗೂ ರಾಯಚೂರಿನ ರಸ್ತೆಯ ಬದಿಯಲ್ಲಿಯೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು’ ಎಂದು ದೇವಸ್ಥಾನದ ಗುರುಲಿಂಗ ಪೂಜಾರಿ ತಿಳಿಸಿದರು.
ಲಕ್ಷ್ಮಿದೇವಿಯ ಮಂಗಳ ಮಹೋತ್ಸವ ಇಂದಿನಿಂದ
ಇಲ್ಲಿನ ಲಕ್ಷ್ಮಿ ನಗರದಲ್ಲಿರುವ ಲಕ್ಷ್ಮಿ ಮಾರುತಿ ಮಂದಿರದಲ್ಲಿ ಆಗಸ್ಟ್ 24ರಿಂದ ಶ್ರಾವಣ ಮಾಸದ ಮಹಾಮಂಗಲ ಕಾರ್ಯಕ್ರಮಗಳು ಜರುಗಲಿವೆ. ಅಕ್ಕಮಹಾದೇವಿ ಮಹಾಮಂಡಳಿಯಿಂದ ಸಂಜೆ 7.30ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಆ.25ರಂದ ಲಕ್ಷ್ಮಿ ದೇವಿಯ ಪಲ್ಲಕ್ಕಿ ಮೆರವಣಿಗೆ ಕುಂಭ ಕಳಸದೊಂದಿಗೆ ಭೀಮಾ ನದಿಗೆ ತೆರಳಿ ಗಂಗ ಸ್ನಾನ ಪೂಜೆ ನೆರವೇರಿಸಲಾಗುವುದು. ಆ.26ರ ಬೆಳಿಗ್ಗೆ 10ಕ್ಕೆ ಮಹಾಲಕ್ಷ್ಮಿ ದೇವಿಯ ತೊಟ್ಟಿಲು ಮಹೋತ್ಸವ ಮುತ್ತೈದೆಯರಿಗೆ ಉಡಿ ತುಂಬಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪ್ರಸಾದದ ವ್ಯವಸ್ಥೆಯೂ ಮಾಡಲಾಗುವುದು ಎಂದು ಹೇಳಿದೆ.
ಸಿದ್ಧಲಿಂಗೇಶ್ವರ ರಥೋತ್ಸವ ಇಂದು
ಗುರುಸುಣಿಗಿ ಗುಡ್ಡದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಲಿಂಗೇಶ್ವರ ದೇವರಿಗೆ ಶನಿವಾರ ರುದ್ರಭಿಷೇಕ ಪೂಜೆ ಮಹಾಮಂಗಳಾರತಿ ನಡೆದವು. ಆಗಸ್ಟ್ 25ರಂದು ಪಲ್ಲಕ್ಕಿ ಸೇವೆಯ ಬಳಿಕ ಸಂಜೆ 6ಕ್ಕೆ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಮಠದ ಸದ್ಭಕ್ತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.