ಯಾದಗಿರಿ: ‘ಶ್ರಾವಣ ಮಾಸವು ವಿಶಿಷ್ಠ ಮಾಸವಾಗಿದ್ದು, ಪ್ರತಿ ದಿನವೂ ವೈಶಿಷ್ಟ್ಯವನ್ನು ಹೊಂದಿದೆ. ಶ್ರಾವಣದಲ್ಲಿ ಭಗವಂತನ ಪೂಜೆ, ಕೀರ್ತನೆ ಮತ್ತು ಶ್ರವಣದಿಂದ ಅಜ್ಞಾನ ನಶಿಸಿ, ಜ್ಞಾನವು ಸಿಗಲಿದೆ’ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ಹೇಳಿದರು.
ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಲ ಮಂಟಪದಲ್ಲಿ ಶುಕ್ರವಾರ ವಿಶ್ವಮಧ್ವ ಮಹಾ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಹಸ್ರ ದೀಪೋತ್ಸವ ಮತ್ತು ಶ್ರೀಲಕ್ಷ್ಮೀಗೆ ಕುಂಕುಮಾರ್ಚನೆ ಪೂಜೆ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ವರಮಹಾಲಕ್ಷ್ಮೀ ಎಂದರೆ ವಿಷ್ಣು ಭಗವಾನರ ಪತ್ನಿ ಮತ್ತು ಸಕಲ ಸಮೃದ್ಧಿಯ ದೇವತೆ. ಲಕ್ಷ್ಮೀ ಎಂದರೆ ಕೇವಲ ಹಣ ಮಾತ್ರವಲ್ಲದೆ ಜ್ಞಾನ, ಭಕ್ತಿ, ಸಂಪತ್ತು ನೀಡುವ ದೇವತೆಯಾಗಿದ್ದು, ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀ ಉಪಾಸನೆ ಮಾಡಲಾಗುತ್ತದೆ ಎಂದರು.
ಸಮುದ್ರಮಥನದ ವೇಳೆ ವರಮಹಾಲಕ್ಷ್ಮಿ, ಮಹಾಲಕ್ಷ್ಮಿ ಅಥವಾ ವರಲಕ್ಷ್ಮೀ ಪ್ರಕಟವಾದಳು. ಕ್ಷೀರ ಸಾಗರದ ಮೈಬಣ್ಣ ಮತ್ತು ಉಡುಪನ್ನು ಧರಿಸಿದ ಲಕ್ಷ್ಮೀದೇವಿಯು ಭಕ್ತರನ್ನು ಉದ್ಧರಿಸುವಳೆಂಬುದು ಕಥೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಶನಿವಾರ ಯಜ್ಞೋಪವೀತ ಧಾರಣೆ: ಆ 9ರಂದು ನೂಲ ಹುಣ್ಣಿಮೆ ಹಿನ್ನಲೆಯಲ್ಲಿ ನಗರದ ಉತ್ತರಾಧಿಮಠದ ರಾಘವೇಂದ್ರಸ್ವಾಮಿಗಳ ಪರಿಮಳ ಮಂಟಪದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಋಗ್ವೇದ ಉಪಕರ್ಣ ಬೆಳಿಗ್ಗೆ 7ರಿಂದ 9 ಗಂಟೆ, ಯಜುರ್ವೇದಿಗಳಿಗೆ ಬೆಳಿಗ್ಗೆ 9.30ರಿಂದ 11.30ರವರೆಗೆ ಜರುಗಲಿದೆ ಎಂದು ರಾಘವೇಂದ್ರ ಆಚಾರ ಜೋಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.