ADVERTISEMENT

ಜಾಧವರನ್ನು ಹೀನಾಯವಾಗಿ ಸೋಲಿಸಿ: ಸಿದ್ದರಾಮಯ್ಯ

ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:37 IST
Last Updated 17 ಏಪ್ರಿಲ್ 2019, 14:37 IST
ಗುರುಮಠಕಲ್ ಕ್ಷೇತ್ರದ ಸೈದಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯನ್ನು ಸಿದ್ದರಾಮಯ್ಯ ಉದ್ಘಾಟಿಸಿದರು
ಗುರುಮಠಕಲ್ ಕ್ಷೇತ್ರದ ಸೈದಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯನ್ನು ಸಿದ್ದರಾಮಯ್ಯ ಉದ್ಘಾಟಿಸಿದರು   

ಯಾದಗಿರಿ: ಹಣ ಪಡೆದು ಬಿಜೆಪಿಗೆ ಸೇರಿ ಕಾಂಗ್ರೆಸ್‌ಗೆ ದ್ರೋಹ ಬಗೆದ ಉಮೇಶ್ ಜಾಧವ ಅವರನ್ನು ಹೀನಾಯವಾಗಿ ಸೋಲಿಸಬೇಕು. ಆಗ ಮಾತ್ರ ಅವರಿಗೆ ಬುದ್ಧಿ ಬರುತ್ತದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಗುರುಮಠಕಲ್ ಮತಕ್ಷೇತ್ರದ ಸೈದಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

’ಜಾಧವ ಅವರು ಸರ್ಕಾರಿ ನೌಕರಿಯಲ್ಲಿದ್ದರು. ಖರ್ಗೆ ಮತ್ತು ಧರ್ಮಸಿಂಗ್ ಅವರು ಅವರನ್ನು ರಾಜೀನಾಮೆ ಕೊಡಿಸಿ ಶಾಸಕರನ್ನಾಗಿ ಮಾಡಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ಮಾಡಿದ್ದೆ. ಪಕ್ಷದಿಂದ ಎಲ್ಲ ಹುದ್ದೆಅನುಭವಿಸಿ ಪಕ್ಷಕ್ಕೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ‘ ಎಂದು ಹರಿಹಾಯ್ದರು.

ಜಾಧವನಂಥವರು ರಾಜಕಾರಣದಲ್ಲಿ ಇದ್ದರೆ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ. ಖರ್ಗೆ ಅವರನ್ನು ಸಂಸತ್‌ನಲ್ಲಿ ಎದುರಿಸಲಾಗದೆ ಮೋದಿ, ಅಮಿತ್ ಶಾ ಷಡ್ಯಂತ್ರ ಮಾಡಿ ಜಾಧವ ಅವರನ್ನು ಖರ್ಗೆ ವಿರುದ್ಧ ನಿಲ್ಲಿಸಿದ್ದಾರೆ ಎಂದರು.

ADVERTISEMENT

ಹೈದರಾಬಾದ್ ಕರ್ನಾಟಕ ಭಾಗವು ಹೆಮ್ಮೆ ಪಡುವಂತೆ ಸಂಸತ್‌ನಲ್ಲಿ ಖರ್ಗೆ ಕೆಲಸ ಮಾಡಿದ್ದಾರೆ. ಸಂಸತ್‌ನಲ್ಲಿ ಖರ್ಗೆ ಅವರ ಜಾಗವನ್ನು ಭರ್ತಿ ಮಾಡಲು ಜಾಧವಗೆ ಸಾಧ್ಯವಿಲ್ಲ ಎಂದು ಹೇಳಿದರು.

‘ಕೋಲಿ ಸಮಾಜಕ್ಕೆ ಬಾಬುರಾವ್ ಚಿಂಚನಸೂರ ಏನೂ ಮಾಡಿಲ್ಲ. ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಎರಡು ಬಾರಿ ನಾನು ಶಿಫಾರಸು ಮಾಡಿದ್ದೇನೆ. ಜಾಧವ ಚಿಂಚೋಳಿಗೆ ಏನೂ ಮಾಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಕೆಲಸಗಳನ್ನು ನಾನು ಮಾಡಿಸಿದ್ದೇನೆ‘ ಎಂದರು.

27 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯವರು ಹಿಂದುಳಿದ, ಅಲ್ಪಸಂಖ್ಯಾತ ಸಮಯದಾಯದ ಒಬ್ಬ ಅಭ್ಯರ್ಥಿಗೂ ಟಿಕೆಟ್‌ ನೀಡಿಲ್ಲ. ಕಾಂಗ್ರೆಸ್–ಜೆಡಿಎಸ್‌ ವತಿಯಿಂದ ಹಿಂದುಳಿದವರಿಗೆ ಎಂಟು, ಅಲ್ಪಸಂಖ್ಯಾತ ಮತ್ತು ರೆಡ್ಡಿ ಸಮುದಾಯದವರಿಗೆ ತಲಾ ಒಂದೊಂದು ಟಿಕೆಟ್ ನೀಡಿದ್ದೇವೆ. ಬಾಯಿಗೆ ಬಂದಂತೆ ಮಾತನಾಡುವ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿಯಿಂದ ಕುರುಬ ಸಮುದಾಯದವರಿಗೆ ಟಿಕೆಟ್ ಕೊಡಿಸಲು ಆಗಿಲ್ಲ ಎಂದು ಹೇಳಿದರು.

ಮೀಸಲಾತಿ ಇಲ್ಲದಿದ್ದರೆ ದಲಿತರಿಗೆ ಬಿಜೆಪಿ ಟಿಕೆಟ್ ನೀಡುತ್ತಿರಲಿಲ್ಲ. ಹೀಗಾಗಿ ಸ್ವಾಭಿಮಾನ ಇರುವ ಹಿಂದುಳಿದ ಸಮಾಜದವರು ಬಿಜೆಪಿಗೆ ಮತ ಹಾಕಬಾರದು ಎಂದು ಹೇಳಿದರು.

ಗುಲಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಉಮೇಶ್ ಜಾಧವ ಕಾಂಗ್ರೆಸ್ ಪಕ್ಷದಿಂದ ಎಲ್ಲ ಲಾಭ ಪಡೆದಿದ್ದಾರೆ. ಅವರ ಸಹೋದರನಿಗೆ ಎರಡು ಬಾರಿ ಟಿಕೆಟ್ ನೀಡಿದ್ದೆವು. ಆದರೆ, ಅವರು ಗೆಲ್ಲಲಿಲ್ಲ. ಅವರ ಅಕ್ಕನ ಮಗನಿಗೆ ನಾಲ್ಕು ಬಾರಿ ಟಿಕೆಟ್ ನೀಡಿದೆವು. ಅವರೂ ಸೋತರು. ಆದರೂ ಎರಡು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದ್ದೆವು ಎಂದರು.

ಖರ್ಗೆ ಅವರಿಗೆ ಪುತ್ರ ವ್ಯಾಮೋಹ ಜಾಧವ ಹೇಳುತ್ತಾರೆ. ಆದರೆ, ಪ್ರಿಯಾಂಕ್ ಖರ್ಗೆ ಶಾಸಕರಾಗುವುದಕ್ಕೂ ಮೊದಲು 15 ವರ್ಷ ಪಕ್ಷದ ಕಾರ್ಯಕರ್ತರಾಗಿ ದುಡಿದಿದ್ದಾರೆ. ನಾನು ಸಂಸತ್‌ಗೆ ಹೋದ ನಂತರ ಕಾಂಗ್ರೆಸ್‌ನ ಹಿರಿಯ 10 ಜನ ನಾಯಕರ ಸೂಚನೆಯಂತೆ ಉಪ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರು ಎಂದು ಹೇಳಿದರು.

ಬಿಜೆಪಿಯವರು ಮೋದಿ ಅವರನ್ನು ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಆದರೆ, ನಾವು ಕೆಲಸ ಮಾಡಿ ಮತ ಕೇಳುತ್ತಿದ್ದೇವೆ ಎಂದರು.

ಗುರುಮಠಕಲ್ ಕ್ಷೇತ್ರದ ಜನರ ಆಶೀರ್ವಾದದಿಂದ ಎಂಟು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ನಂತರ ನಿರೀಕ್ಷೆಯನ್ನು ಹುಸಿ ಮಾಡದೆಕೆಲಸ ಮಾಡಿ ತೋರಿಸಿದ್ದೇನೆ ಎಂದರು.

ಕೆಪಿಸಿಸಿ ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿ ಮುಖಂಡರು ಹಿಂದೂ–ಮುಸ್ಲಿಮರ ನಡುವೆ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬಿಜೆಪಿಯವರು ಬಲಿಷ್ಠ ಭಾರತ ನಿರ್ಮಿಸಬೇಕು ಎಂದು ಹೇಳುತ್ತಾರೆ. ಭಾರತ ಎಂದೂ ದುರ್ಬಲವಾಗಿಲ್ಲ ಎಂದರು.

ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಮಾಜಿ ಸದಸ್ಯರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಡೇವಿಡ್ ಸಿಮಿಯೋನ್, ಮರಿಗೌಡ ಹುಲಕಲ್, ಬಸರೆಡ್ಡಿ ಪಾಟೀಲ್ ಅನಪೂರ, ಶರಣಿಕ ಕುಮಾರ ದೋಕಾ, ಚಿದಾನಂದಪ್ಪ ಕಳಬೆಳಗುಂದಿ, ಭೀಮರೆಡ್ಡಿ ಶೆಟ್ಟಿಹಳ್ಳಿ, ಮಹಿಪಾಲರೆಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.