ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಸರಳ ಈದ್ ಉಲ್ ಫಿತ್ರ್‌

ಮನೆಗಳಲ್ಲಿ ನಮಾಜ್‌ ಮಾಡಿದ ಮುಸ್ಲಿಮರು, ಹಬ್ಬದ ಸಂಭ್ರಮ ಕಸಿದ ಕೊರೊನಾ

​ಪ್ರಜಾವಾಣಿ ವಾರ್ತೆ
Published 26 ಮೇ 2020, 0:43 IST
Last Updated 26 ಮೇ 2020, 0:43 IST
ಯಾದಗಿರಿಯ ಅಲ್ಹಾಜ ಕ್ವಾಜಿ ಮಹಮ್ಮದ್‌ ಹಸನ್‌ ಸಿದ್ದೀಕಿ ಅವರು ಶುಕರಾನ್‌ ನಮಾಜ್‌ ಮಾಡಿದರು
ಯಾದಗಿರಿಯ ಅಲ್ಹಾಜ ಕ್ವಾಜಿ ಮಹಮ್ಮದ್‌ ಹಸನ್‌ ಸಿದ್ದೀಕಿ ಅವರು ಶುಕರಾನ್‌ ನಮಾಜ್‌ ಮಾಡಿದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಮುಸ್ಲಿಮರು ಪವಿತ್ರ ಹಬ್ಬವಾದ ಈದ್–ಉಲ್–ಫಿತ್ರ್‌ ಅನ್ನು ಸರಳವಾಗಿ ಆಚರಣೆ ಮಾಡಿದರು. ಕೊರೊನಾ ಕಾರಣದಿಂದ ಮನೆಯಲ್ಲಿಯೇ ನಮಾಜ್‌ ಮಾಡಿದರು.

ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್‌ಡೌನ್‌ಗೆ ಆದೇಶ ಮಾಡಿದ್ದರಿಂದ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಇದರಿಂದ ಮನೆ, ಮಹಡಿ ಮೇಲೆ ಮುಸ್ಲಿಮರು ನಮಾಜ್‌ ಮಾಡಿದರು. ಈ ಮೂಲಕ ಒಂದು ತಿಂಗಳು ಕಾಲ ಆಚರಿಸಿಕೊಂಡು ಬಂದ ಉಪವಾಸ ವ್ರತ ಕೊನೆಗೊಳಿಸಿದರು.

ಹಬ್ಬದ ಸಂಭ್ರಮ ಕಸಿದ ಕೊರೊನಾ:ಮುಸ್ಲಿಮರಿಗೆ ರಂಜಾನ್‌ ಎಲ್ಲ ಹಬ್ಬಗಳಲ್ಲಿ ದೊಡ್ಡದು ಮತ್ತು ಪವಿತ್ರವಾಗಿದೆ. ಬಡವ–ಶ್ರೀಮಂತ ಎನ್ನದೆ ಎಲ್ಲರೂ ಕೂಡ ಉಪವಾಸ ಆಚರಿಸುವ ಮೂಲಕ ಮನಶುದ್ಧಿ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಮುಸ್ಲಿಮರು ಅಭಿಪ್ರಾಯಪಡುತ್ತಾರೆ. ಆದರೆ, ಈ ಬಾರಿ ಕೊರೊನಾ ಸೋಂಕು ಹಬ್ಬದ ಸಂಭ್ರಮವನ್ನೇ ಕಸಿದಿದೆ. ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ, ಮಸೀದಿಗಳಲ್ಲಿ ಮೂವರಿಗಿಂತ ಹೆಚ್ಚು ಜನ ಸೇರುವಂತಿಲ್ಲ ಎನ್ನುವ ಸರ್ಕಾರದ ಕಟ್ಟುನಿಟ್ಟಿನ ಆದೇಶಕ್ಕೆ ತಲೆಬಾಗಿ ಸಂಭ್ರಮವೇ ಕಳೆದುಕೊಂಡಂತೆ ಸರಳವಾಗಿ ಮನೆಗಳಲ್ಲಿ ಹಬ್ಬ ಆಚರಿಸಲಾಗಿದೆ. ಚಿಣ್ಣರು ಮಾತ್ರ ಹೊಸ ಬಟ್ಟೆಯಲ್ಲಿ ಮಿಂಚಿದರೆ ದೊಡ್ಡವರು ಹೊಸ ಬಟ್ಟೆ ಖರೀದಿಗೆ ಮುಂದಾಗಿಲ್ಲ.

ADVERTISEMENT

ಈದ್ಗಾದಲ್ಲಿ ಮೌನ, ಮನೆಯಲ್ಲಿ ಸಂಭ್ರಮ:ಚಿಕ್ಕಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಗಳಲ್ಲಿ ಮುಸ್ಲಿಮರು ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಸಂಬಂಧ ಈದ್ಗಾಗಳಲ್ಲಿ ಮೌನ ಆವರಿಸಿದೆ. ಮನೆಗಳಲ್ಲಿ ಸಂಭ್ರಮ ತಂದಿದೆ.

‘ಹಬ್ಬದ ಸಂಭ್ರಮ ಕಳೆಕುಂದಿದೆ. ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ರಂಜಾನ್‌ ಹಬ್ಬದ ಅಂಗವಾಗಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಬೇಕು. ಆದರೆ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಇದನ್ನು ಕೈಬಿಡಲಾಗಿದೆ. ಮನೆಮನೆಗೆ ಹೋಗಿ ಶುಭಾಶಯ ವಿನಿಮಯ ಮಾಡಲಾಗುತ್ತಿತ್ತು. ಆದರೆ, ಈಗ ಅವೆಲ್ಲಕ್ಕೂ ಕಡಿವಾಣ ಬಿದ್ದಿದೆ’ ಎಂದು ಯಾದಗಿರಿಯಮುಖ್ಯ ಕ್ವಾಜಿಅಲ್ಹಾಜ ಕ್ವಾಜಿ ಮಹಮ್ಮದ್‌ ಹಸನ್‌ ಸಿದ್ದೀಕಿ ಹೇಳುತ್ತಾರೆ.

ರಂಜಾನ್‌ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಶುಕರಾನ್‌ ನಮಾಜ್‌ ಮಾಡಲಾಗಿದೆ. ಅಂದರೆ ತಿಂಗಳು ಕಾಲ ಕಾಪಾಡಿದ ದೇವರಿಗೆ ಕೃತಜ್ಞತೆ ಸಲ್ಲಿಸುವುದು ಎಂದು ಯಾದಗಿರಿ ಮುಖ್ಯ ಕ್ವಾಜಿ ಅಲ್ಹಾಜ ಕ್ವಾಜಿ ಮಹಮ್ಮದ್‌ ಹಸನ್‌ ಸಿದ್ದೀಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.