ಯಾದಗಿರಿ: ‘ಕನ್ನಡ ಸಾಹಿತ್ಯ ಲೋಕಕ್ಕೆ ಎಸ್.ಎಲ್.ಭೈರಪ್ಪ ಅವರು ಅಮೋಘವಾದ ಸೃಜನಶೀಲ ಕಾದಂಬರಿಗಳನ್ನು ಕೊಟ್ಟಿದ್ದಾರೆ’ ಎಂದು ಸರ್ಕಾರಿ ಪದವಿ ಮಹಾದ್ಯಾಲಯದ ಪ್ರಾಚಾರ್ಯ ಸುಭಾಷ್‌ಚಂದ್ರ ಕೌಲಗಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಲ್ ಭೈರಪ್ಪ ಹಾಗೂ ದೇವೇಂದ್ರ ಹೆಗಡೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೈರಪ್ಪ ಅವರ ಬರವಣಿಗೆ ಅನುಭವದ ಸಾಹಿತ್ಯ ವಿದ್ವತ್ಪೂರ್ಣದಿಂದ ಕೂಡಿದ್ದು, ಬದುಕಿನ ಪರಿಪೂರ್ಣತೆಯ ಅವಲೋಕನಕ್ಕೆ ಹಿಡಿದ ಪ್ರತಿಬಿಂಬವಾಗಿದೆ. ಅವರ ಹೆಸರನ್ನು ಕೇಳದವರು ಕರ್ನಾಟಕದಲ್ಲಿ ಯಾರು ಇಲ್ಲ. ನಾಡಿನ ಜನತೆಗೆ ಅಷ್ಟೇ ಅಲ್ಲ, ದೇಶದ ಎಲ್ಲಾ ಭಾಷೆಯ ವರ್ಗಕ್ಕೆ ತಮ್ಮ ಓದುಗ ಬಳಗವನ್ನ ಕಟ್ಟಿಕೊಂಡಿದ್ದಾರೆ. ಜತೆಗೆ ಸದಭಿರುಚಿಯ ಕಾದಂಬರಿಗಳನ್ನು ಕೊಟ್ಟ ಬಹುದೊಡ್ಡ ಕಾದಂಬರಿಕಾರ’ ಎಂದು ಬಣ್ಣಿಸಿದರು.
‘ದೇವೇಂದ್ರ ಹೆಗಡೆ ಅವರು ಸಮ ಸಮಾಜವನ್ನು ಕಟ್ಟುವಲ್ಲಿ ಚಿಂತನಶೀಲರಾಗಿ ಕೆಲಸ ಮಾಡಿದ್ದಾರೆ. ರೈತರು, ನೀರಾವರಿಯ ಬಗ್ಗೆ ಬಹಳ ದೊಡ್ಡ ಕಾಳಜಿಯನ್ನು ಹೊಂದಿದ್ದರು. ಅವರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಲಿ’ ಎಂದರು.
ಮುಖಂಡ ಗಾಳೆಪ್ಪ ಪೂಜಾರಿ ಮಾತನಾಡಿ, ‘ಭೈರಪ್ಪ ಅವರ ಕಾದಂಬರಿಗಳು ಆಳ ಅಧ್ಯಯನ ಮತ್ತು ಕ್ರಿಯಾಶೀಲತೆಯಿಂದ ಮೂಡಿಬಂದಿವೆ. ಅವರ ಕಾದಂಬರಿಗಳು ಓದುಗರ ಕುತೂಹಲವನ್ನು ಹೆಚ್ಚಿಸುತ್ತಿದ್ದವು. ದೇವೇಂದ್ರ ಹೆಗಡೆ ಅವರು ಬರವಣಿಗೆ ಚಿಂತನೆಯ ಸಂಘಟನೆ ಮೂಲಕ ಸಮಾಜವನ್ನು ಕಟ್ಟುವಲ್ಲಿ ಪ್ರಯತ್ನಿಸಿದ್ದರು. ಶೋಷಿತ ವರ್ಗವನ್ನು ಏಳಿಗೆಯ ದೃಷ್ಟಿಕೋನದಲ್ಲಿ ಅವರನ್ನು ಬಲಪಡಿಸುವ ಕನಸನ್ನು ಹೊಂದಿದ್ದರು’ ಎಂದು ಹೇಳಿದರು.
ಮುಖಂಡ ಶ್ರೀಶೈಲ್ ಪೂಜಾರಿ ಮಾತನಾಡಿ, ‘ಭೈರಪ್ಪ ಅವರ ಕೃತಿಗಳಲ್ಲಿನ ಸೂಕ್ಷ್ಮತೆಯನ್ನು ಅರೆತರೆ ಜೀವನದ ಮೌಲ್ಯವನ್ನು ಕಟ್ಟಿಕೊಡುತ್ತದೆ. ಅದ್ಭುತವಾದ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಹಿರಿಯ ಸಾಹಿತಿ ಭೈರಪ್ಪ’ ಎಂದು ವರ್ಣಿಸಿದರು.
ಖಂಡಪ್ಪ ದಾಸನಕೇರಿ ಮಾತನಾಡಿ, ‘ದೇವೇಂದ್ರ ಹೆಗಡೆ ಅವರು ಯುವ ಪೀಳಿಗೆಗೆ ಪ್ರೇರಣದಾಯಕರಾಗಿದ್ದಾರೆ. ಸಮಾಜ ಸಂಘಟನೆಯಲ್ಲಿ ಬುದ್ಧಿವಂತ ಯುವಕರು ಕಂಡರೆ ಅವರಿಗೆ ತುಂಬಾ ಪ್ರೀತಿ ಇತ್ತು. ಎಲ್ಲರನ್ನು ಪ್ರೋತ್ಸಾಹಿಸಿ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದರು. ಅವರ ವ್ಯಕ್ತಿತ್ವ ಎಲ್ಲರಿಗೂ ಆದರ್ಶ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ, ಪ್ರಮುಖರಾದ ಸೋಮಶೇಖರ್ ಮಣ್ಣೂರು, ಎಸ್.ಎಸ್.ನಾಯಕ, ಶರಣಪ್ಪ ಜಾಕನಳ್ಳಿ, ಮಲ್ಲಿಕಾರ್ಜುನ ಕರಕಳ್ಳಿ, ಭೀಮರಾಯ ಲಿಂಗೇರಿ, ಸೋಪ್ಪಯ್ಯ ಮಾಸ್ಟರ್, ರಾಜಶೇಖರ ಕಿಲ್ಲನಕೇರಿ, ನಾಗೇಂದ್ರ ಜಾಜಿ, ಲಕ್ಷ್ಮಿನಾರಾಯಣ ಗುಂಡಾನೂರ, ನೂರಂದಪ್ಪ ಲೇವಡಿ, ವೀರಭದ್ರಯ್ಯ ಜಾಕಮಠ, ಸೂರ್ಯಕಾಂತ ಕರದಳ್ಳಿ, ಗುರಪ್ಪಚಾರ್ಯ ವಿಶ್ವಕರ್ಮ, ವೆಂಕಟೇಶ ಕಲಕಂಭ, ಸ್ವಾಮಿದೇವ ದಾಸನಕೇರಿ, ಶರಣಪ್ಪ ಗುಳಗಿ, ನಾಗಪ್ಪ ಸಜ್ಜನ, ಸುರೇಶ ತಡಬಿಡಿ, ಅಯ್ಯಣ್ಣಗೌಡ ಕ್ಯಾಸಪನಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.