
ಶಹಾಪುರ: ಸ್ವಕುಳಿಸಾಳಿ ಸಮಾಜದ ಮುಖಂಡರು ಅದೇ ಸಮಾಜದ 15 ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ‘ಸಮಾಜದ ಯಾವುದೇ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಅಲಿಖಿತವಾಗಿ ಫರ್ಮಾನು ಹೊರಡಿಸಿದ್ದಾರೆ. ಸಾಮಾಜಿಕ ಬಹಿಷ್ಕಾರದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಿದರು ಇಂದಿಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
‘ಹಲವು ವರ್ಷದಿಂದ ಕಾನೂನು ಹೋರಾಟ ನಡೆಸಿದ್ದೇವೆ. ಹಿರಿಯ ಅಧಿಕಾರಿಗಳಿಗೂ ದೂರು ನೀಡಿ ಕೈ ಸೋತು ಹೋಗಿದೆ. ನಮಗೆ ಬಹಿಷ್ಕಾರದ ಅನಿಷ್ಟ ಪದ್ಧತಿಯಿಂದ ಮುಕ್ತಿ ಸಿಕ್ಕಿಲ್ಲ. ನಗರದಲ್ಲಿ ಪ್ರತ್ಯೇಕವಾದ ಜೀಹ್ವೇಶ್ವರ ಬಡಾವಣೆ ಇದೆ. ಸುಮಾರು 430 ಕುಟುಂಬಗಳಿವೆ. ಅದರಲ್ಲಿ 15 ಕುಟುಂಬಗಳನ್ನು ಮಾತ್ರ ಕಳೆದ 10 ವರ್ಷದಿಂದ ಬಹಿಷ್ಕಾರಕ್ಕೆ ಹಾಕಿದ್ದಾರೆ. ನಮ್ಮ ಸಮಾಜದ ಮಕ್ಕಳಿಗೆ ಮದುವೆ ಮಾಡಲು ಹೆಣ್ಣು ಸಹ ಕೊಡದಂತೆ ಒತ್ತಡ ಹಾಕಿದ್ದಾರೆ. ತಪ್ಪಾಗಿದೆ ಎಂದು ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ಒಪ್ಪಿಕೊಂಡರೆ ದಂಡ ಹಾಕಿ ಮತ್ತೆ ಸಮಾಜದಲ್ಲಿ ಸೇರಿಸಿಕೊಳ್ಳುತ್ತಾರೆ. ಇದು ನಮ್ಮ ಮನೋಬಲವನ್ನು ಕುಗ್ಗಿಸಿದೆ ಎನ್ನುತ್ತಾರೆ’ ಸದಾನಂದ ಪಾಣಿಭಾತೆ.
‘ಸಮಾಜದಿಂದ ಜರುಗುವ ಜೀಹ್ವೇಶ್ವರ, ಹನುಮ, ಶ್ರೀಕೃಷ್ಣಾಷ್ಟಮಿ ಸೇರಿದಂತೆ ಸಭೆ ಸಮಾರಂಭಗಳಿಗೆ ಆಹ್ವಾನಿಸುವುದಿಲ್ಲ. ವೈಯಕ್ತಿಕ ಮದುವೆ ಸಮಾರಂಭಕ್ಕೆ ಕರೆಯಬಾರದು. ಶವ ಸಂಸ್ಕಾರಕ್ಕೂ ಹೋಗಬಾರದು ಎಂದು ಸಂಘದ ಸದಸ್ಯರು ಒತ್ತಡ ಹಾಕುತ್ತಾರೆ. ನಮ್ಮ ಮಾತು ಮೀರಿ ಹೋದರೆ ಸಾಮಾಜಿಕ ಬಹಿಷ್ಕಾರ ಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಾರೆ. ಜೀವಿಸುವ ಹಕ್ಕಿನ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ’ ಎಂದು ಬಹಿಷ್ಕಾರಕ್ಕೆ ಒಳಗಾಗಿರುವ ಗುರುನಾಥ ಸಿರವಾಳ ಅವಲತ್ತುಕೊಂಡರು.
15 ಕುಟುಂಬದ ಸದಸ್ಯರ ಬಹಿಷ್ಕಾರ ಡಿಸಿ, ಎಸ್‌ಪಿಗೆ ದೂರು ನೀಡಿದ್ದರು ಕ್ರಮವಿಲ್ಲ ‘ಬಹಿಷ್ಕಾರದಿಂದ ಮನೋಬಲ ಕುಗ್ಗಿದೆ’
ನಮ್ಮ ಸಮಾಜದಿಂದ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕಿಲ್ಲ. ದೂರು ಯಾಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರು ಬರಲು ಸಿದ್ಧರಿಲ್ಲ. ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಬೇಕು. ದಂಡ ವಿಧಿಸಿಲ್ಲರಾಜಕುಮಾರ ಚಿಲ್ಲಾಳ ಸ್ವಕುಳಿಸಾಳಿ ಸಮಾಜದ ಶಹಾಪುರ ಅಧ್ಯಕ್ಷರುd
ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನಮ್ಮ ಸ್ವಜಾತಿಯವರು ನಮ್ಮ ಮಕ್ಕಳಿಗೆ ಹೆಣ್ಣು ಕೊಡಲಿಲ್ಲ. ಅನಿವಾರ್ಯವಾಗಿ ಅನ್ಯ ಜಾತಿಯ ಹೆಣ್ಣು ಮಗಳನ್ನು ತೆಗೆದು ಮದುವೆ ಮಾಡಿದ್ದೇವೆ. ಎಷ್ಟು ವರ್ಷ ಹಿಂಸೆ ಅನುಭವಿಸಬೇಕುಗುರುನಾಥ ಸಿರವಾಳ ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಸದಸ್ಯ
ಜೀಹ್ವೆಶ್ವರ ಕಲ್ಯಾಣ ಮಂಟಪ ಬಾಡಿಗೆ ತಿಕ್ಕಾಟ ‘ಸ್ವಕುಳಿಸಾಳಿ ಸಮಾಜದ ಆಶ್ರಯದಲ್ಲಿ ಶಹಾಪುರ-ಕಲಬುರಗಿ ಹೆದ್ದಾರಿಗೆ ಹೊಂದಿಕೊಂಡು ಜೀಹ್ವೆಶ್ವರ ಕಲ್ಯಾಣ ಮಂಟಪ ಇದೆ. ಅದರ ಅಡಿಯಲ್ಲಿ 18 ಮಳಿಗೆಯನ್ನು ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ವಾರ್ಷಿಕವಾಗಿ ₹ 25 ಲಕ್ಷ ಬಾಡಿಗೆ ಹಣ ಸಂದಾಯವಾಗುತ್ತದೆ. ಬಾಡಿಗೆ ಹಣದ ಬಗ್ಗೆ ಪ್ರಶ್ನಿಸಿದರೆ ಬಹಿಷ್ಕಾರದ ಅಸ್ತ್ರ ಉಪಯೋಗಿಸುತ್ತಾರೆ. ಇದು ಸಮಾಜದಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಬಹಿಷ್ಕಾರಕ್ಕೆ ಒಳಗಾದ ಘಂಟೆಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.