ADVERTISEMENT

ದೀಪಾವಳಿ | ತಾಂಡಾಗಳಲ್ಲಿ ಹಾಡು, ನೃತ್ಯ ವೈಭವ

ಬಣ್ಣ ಬಣ್ಣದ ಉಡುಪಿನಲ್ಲಿ ಲಂಬಾಣಿ ಸಮುದಾಯದ ನಾರಿಯರ ಸಂಭ್ರಮ

ಬಿ.ಜಿ.ಪ್ರವೀಣಕುಮಾರ
Published 14 ನವೆಂಬರ್ 2023, 6:36 IST
Last Updated 14 ನವೆಂಬರ್ 2023, 6:36 IST
ಯಾದಗಿರಿ ತಾಲ್ಲೂಕಿನ ಅರಕೇರಾ (ಬಿ) ತಾಂಡಾದಲ್ಲಿ ಬಂಜಾರ ಸಮುದಾಯದ ಯುವತಿಯರು ಮನೆಮನೆಗೆ ತೆರಳಿ ದೀಪ ಬೆಳಗಿದರು
ಯಾದಗಿರಿ ತಾಲ್ಲೂಕಿನ ಅರಕೇರಾ (ಬಿ) ತಾಂಡಾದಲ್ಲಿ ಬಂಜಾರ ಸಮುದಾಯದ ಯುವತಿಯರು ಮನೆಮನೆಗೆ ತೆರಳಿ ದೀಪ ಬೆಳಗಿದರು   

ಯಾದಗಿರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಂಡಾಗಳಿದ್ದು, ದಸರಾ ಹಬ್ಬ ಮುಗಿಯುತ್ತಿದ್ದಂತೆ ತಾಂಡಾಗಳಲ್ಲಿ ದೀಪಾವಳಿ ಹಬ್ಬದ ಸಿದ್ಧತೆ ಮೇಳೈಸುತ್ತದೆ. ಹಾಡು, ನೃತ್ಯ ವೈಭವ ದೀಪಾವಳಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತದೆ. ದಸರಾ ಹಬ್ಬದಿಂದ ದೀಪಾವಳಿವರೆಗೆ ಪ್ರತಿನಿತ್ಯ ರಾತ್ರಿ ಯುವತಿಯರು ನೃತ್ಯ ಮಾಡುವ ಸಂಪ್ರದಾಯ ಇಂದಿಗೂ ಕಂಡು ಬರುತ್ತದೆ.

ಯಾದಗಿರಿ ತಾಲ್ಲೂಕಿನ ಆಶನಾಳ ತಾಂಡಾ, ವರ್ಕನಳ್ಳಿ ತಾಂಡಾ, ಯರಗೋಳ, ಮುದ್ನಾಳ ದೊಡ್ಡ ತಾಂಡಾ, ಮುಂಡರಗಿ, ಅಲ್ಲಿಪುರ, ವೆಂಕಟೇಶ ನಗರ, ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ನೃತ್ಯವೇ ಇಲ್ಲಿ ಆಕರ್ಷಣೆಯಾಗಿದೆ.

ಪಟಾಕಿ ಸದ್ದಿನ ಬದಲಿಗೆ ಬ್ಯಾಂಡ್ ಬಾಜಿ ನಾದದ ಸ್ವರ, ತಮಟೆ ತಾಳಕ್ಕೆ ತಕ್ಕಂತೆ ಯುವತಿಯರು ನೃತ್ಯ ಮಾಡಿ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿದರು. ಲಂಬಾಣಿ ಸಮುದಾಯದ ಸಂಪ್ರಾದಾಯಿಕ ಬಣ್ಣಬಣ್ಣದ ಉಡುಪು ಧರಿಸಿ ನೃತ್ಯ ಮಾಡುತ್ತಿರುವ ನಾರಿಯರ ನೃತ್ಯ ಎಲ್ಲರ ಕಣ್ಮನ ಸೆಳೆಯಿತು.

ADVERTISEMENT

ದೀಪಾವಳಿ ಅಂದರೆ ಅದು ಬರೀ ಬಾಣ, ಬಿರುಸುಗಳ ಸದ್ದಲ್ಲ. ಆದರಾಚೆಯೂ ಸಾಂಪ್ರದಾಯಿಕವಾದ ವಿಶಿಷ್ಟ ಆಚರಣೆ ಇದೆ. ಬಂಜಾರ ಸಮುದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ ಪ್ರಸಿದ್ಧಿ ಪಡೆದಿದ್ದಾರೆ. ದೀಪಾವಳಿಯು ಬಂಜಾರ ಸಮುದಾಯದ ಯುವತಿಯರ ಹಬ್ಬವೆಂದೂ ಕರೆಯುತ್ತಾರೆ.

ತಾಂಡಾಗಳಲ್ಲಿ ಎಲ್ಲಾ ಮಹಿಳೆಯರು ಯಾವುದೇ ಭೇದ–ಭಾವವಿಲ್ಲದೇ ಕುಣಿಯುವುದು ನೋಡುಗರಿಗೆ ಹಬ್ಬ. ‘ನಮಗೆ ದೀಪಾವಳಿ ದೊಡ್ಡ ಹಬ್ಬವಾಗಿದ್ದು, ಸಂಜೆ ವೇಳೆ ನೃತ್ಯ ಮಾಡಿ ನಮ್ಮ ಸಂಪ್ರದಾಯವನ್ನು ಆಚರಿಸುತ್ತೇವೆ’ ಎಂದು ಲಂಬಾಣಿ ಯುವತಿಯರು ಹೇಳುತ್ತಾರೆ.

ಬೆಟ್ಟ–ಗುಡ್ಡದಲ್ಲಿ ವಿವಿಧ ಬಗೆಯ ಹೂಗಳನ್ನು ಯುವತಿಯರು ಸಂಗ್ರಹಿಸುವುದು, ಮನೆ ಮನೆಗೆ ತೆರಳಿ ಸಗಣಿ ಮೇಲೆ ಹೂವುಗಳಿಂದ ಅಲಂಕಾರ ಮಾಡುವುದು, ಬಳಿಕ ಸಾಂಪ್ರದಾಯಿಕ ಬಟ್ಟೆ ಧರಿಸಿ ವಾದ್ಯಗೋಷ್ಠಿಗೆ ಹೆಜ್ಜೆ ಹಾಕುವ ಹೆಂಗೆಳೆಯರು... ಇದು ದೀಪಾವಳಿ ಸಂದರ್ಭದಲ್ಲಿ ಕಾಣಸಿಗುವ ದೃಶ್ಯಗಳಾಗಿವೆ.

ಬೆಳಕಿನ ಹಬ್ಬ ದೀಪಾವಳಿಯು ಬಂಜಾರ ಸಮುದಾಯದವರಿಗೆ ವಿಶೇಷ ಹಾಗೂ ಸಂಭ್ರಮದ ಹಬ್ಬ. ದೀಪಾವಳಿಯ ಮರು ದಿನದಂದು ಯುವತಿಯರು ಬೆಳಿಗ್ಗೆಯೇ ಕಾಡು ಜಾತಿಯ ವಿವಿಧ ಹೂವುಗಳನ್ನು ತಂದು ಪರಸ್ಪರ ನೀಡಿ ಶುಭಾಷಯ ಕೋರುತ್ತಾರೆ. ಬಳಿಕ ಬಂಜಾರ ಸಮುದಾಯದ ಹಾಡುಗಳನ್ನು ಹಾಡುತ್ತ ತಾಂಡಾದ ಮನೆಗಳಿಗೆ ತೆರಳಿ ಸಗಣಿಯ ಮೇಲೆ ಬಗೆ ಬಗೆಯ ಹೂವುಗಳನ್ನು ಹಾಕಿ ಅಲಂಕಾರ ಮಾಡುತ್ತಾರೆ. ಇದಾದ ಬಳಿಕ ತಾಂಡಾದ ದೇವಸ್ಥಾನದ ಬಳಿ ತೆರಳಿ ತಮಟೆ ಸದ್ದಿಗೆ ವಿಶೇಷ ರೀತಿಯ ಹೆಜ್ಜೆಗಳನ್ನು ಹಾಕುತ್ತ ಸಂಭ್ರಮಿಸುತ್ತಾರೆ.

‘ಬಾಪು ತೋನ ಮೇರಾ, ವರ್ಷದಾಡೇರ ಕೋರ್ ದವಾಳಿ, ಯಾಡಿ ತೋನ ಮೇರಾ, ಭೀಯಾ ತೋನ ಮೇರಾ’ ಎಂದು ದೇವರ ನಾಮಸ್ಮರಣೆಯೊಂದಿಗೆ ಅಪ್ಪ–ಅಮ್ಮ, ಅಣ್ಣ–ತಮ್ಮ, ಗುರು–ಹಿರಿಯರ ಗುಣಗಾನ ಮಾಡಿ, ಅವರಿಗೆ ನಮಸ್ಕಾರ ಸಲ್ಲಿಸುವುದು ಬಂಜಾರ ಸಮುದಾಯದ ತಾಂಡಾಗಳಲ್ಲಿ ಕಂಡು ಬರುವ ಚಿತ್ರಣ.

‘ದೀಪಾವಳಿ ಬಂಜಾರ ಸಮುದಾಯಕ್ಕೆ ವಿಶೇಷ ಹಬ್ಬ. ತಮ್ಮ ಪರಂಪರೆ ಪರಿಚಯಿಸುವ ಮೂಲಕ ಬೇರೆ ಬೇರೆ ಊರು, ನಗರಗಳಿಗೆ ವಲಸೆ ಹೋಗಿದ್ದರೂ ವಾಪಸ್‌ ತಾಂಡಾಗಳಿಗೆ ಬಂದು ಆಚರಣೆ ಮಾಡುತ್ತಾರೆ’ ಎನ್ನುತ್ತಾರೆ ತಾಂಡಾದ ಹಿರಿಯರು.

ಆಧುನಿಕ ಭರಾಟೆಯಲ್ಲಿ ಜಾನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು, ಕಲೆಗಳು ಮರೆಯಾಗುತ್ತಿವೆ. ಆದರೆ, ಬಂಜಾರ ಸಮುದಾಯದವರು ಇಂದಿಗೂ ತಮ್ಮ ಸಂಪ್ರಾದಯದ ನೃತ್ಯಗಳನ್ನು ಉಳಿಸಿಕೊಂಡು ಬರುತ್ತಿರುವುದೇ ವಿಶೇಷ.

ಯಾದಗಿರಿ ತಾಲ್ಲೂಕಿನ ಅರಕೇರಾ (ಬಿ) ತಾಂಡಾದಲ್ಲಿ ಬಂಜಾರ ಸಮುದಾಯದ ಯುವತಿಯರು ಮನೆಮನೆಗೆ ದೀಪ ಬೆಳಗಿದರು

ಮನೆಮನೆಗೆ ದೀಪ ಹಚ್ಚುವ ಕೆಲಸ ದೀಪಾವಳಿ ಆರಂಭಕ್ಕೂ 15 ದಿನಗಳ ಮುಂಚೆಯೇ ಪ್ರತಿದಿನ ಸಂಜೆ ಬಂಜಾರ ಸಮುದಾಯ ಯುವತಿಯರು ದೇವಸ್ಥಾನದ ಬಳಿ ನೃತ್ಯ ಮಾಡುತ್ತಾರೆ. ಬೆಳಕಿನ ಹಬ್ಬ ದೀಪಾವಳಿಯ ದಿನ ತಾಂಡಾದ ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ. ಸಂಪ್ರದಾಯದಂತೆ ತಾಂಡಾದ ಎಲ್ಲ ಯುವತಿಯರು ಹಾಗೂ ಮಹಿಳೆಯರು ತಾಂಡಾದಿಂದ ದೂರ ಗುಡ್ಡಕ್ಕೆ ಹೋಗಿ ಹೂವುಗಳನ್ನು ಹುಡುಕಿ ತರುತ್ತಾರೆ. ತಂದು ಮೊದಲು ತಾಂಡಾಕ್ಕೆ ಹಿರಿಯ ಎನ್ನಿಸಿಕೊಂಡ ನಾಯಕನಿಗೆ ಹೂವುಗಳನ್ನು ನೀಡಿ ಶುಭ ಕೋರುತ್ತಾರೆ. ಇದಾದ ಬಳಿಕ ತಾಂಡಾದ ನಿವಾಸಿಗಳು ದೀಪಾವಳಿಯನ್ನು ಆಚರಿಸಬೇಕಾದರೆ ನಾಯಕನ ಅನುಮತಿ ಪಡೆಯುತ್ತಾರೆ. ನಾಯಕ ಈ ಬಾರಿ ಎಲ್ಲರಿಗೂ ಒಳ್ಳೆಯದಾಗುತ್ತದೆ. ಸಂಭ್ರಮದಿಂದ ದೀಪಾವಳಿ ಆಚರಿಸಿ ಎಂದು ಹೇಳಿದ ಮೇಲೇನೆ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಇನ್ನೊಂದು ವಿಶೇಷ ಅಂದರೆ ಮುಂದಿನ ವರ್ಷ ಬೇಸಿಗೆ ಕಾಲದ ಹೊತ್ತಿಗೆ ಎಷ್ಟು ಮಂದಿ ಯುವತಿಯರು ಮದುವೆ ಆಗುತ್ತೆ ಎಂದು ಎಲ್ಲರೂ ದೀಪಾವಳಿ ಆಚರಣೆ ವೇಳೆ ಕಣ್ಣೀರಿಡುತ್ತಾರೆ. ಯಾಕೆಂದರೆ ಮುಂದಿನ ವರ್ಷ ನಾವು ನಮ್ಮ ತಾಂಡಾದಲ್ಲಿ ದೀಪಾವಳಿಯನ್ನು ಆಚರಿಸುವುದಕ್ಕೆ ಆಗಲ್ಲ ಎಂದು ದುಃಖಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.