ಯಾದಗಿರಿ: ಜಿಲ್ಲೆಯಲ್ಲಿ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4.16 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮೇ ತಿಂಗಳ 13ರವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 16.5 ಎಂಎಂ ಇದ್ದರೆ, 35.2 ಎಂಎಂ ಮಳೆಯಾಗಿದೆ. ಮೇ ತಿಂಗಳಲ್ಲಿ 9.4 ಎಂಎಂ ವಾಡಿಕೆ ಮಳೆ ಇದ್ದರೆ, ಮೇ 13ರವರೆಗೆ 2.5 ಎಂಎಂ ಮಳೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಮೇ ತಿಂಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ 4,16,474.8 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ರೈತರು ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗಿದ್ದು, ಭೂಮಿ ಸಿದ್ಧತೆಗೆ ಅನುಕೂಲವಾಗಿದೆ.
ಮುಂಗಾರಿನಲ್ಲಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ವಡಗೇರಾ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಉಳಿದ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಭತ್ತದ ಬೀಜ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿಲ್ಲ. ಈ ತಾಲ್ಲೂಕುಗಳಲ್ಲಿ ಕೃಷಿ ಇಲಾಖೆ ಪ್ರಕಾರ ಭತ್ತ ನಿಷೇಧಿತ ಪ್ರದೇಶ.
ಮುಂಗಾರಿನಲ್ಲಿ ಪ್ರಮುಖವಾಗಿ ಭತ್ತ, ಸಜ್ಜೆ, ತೊಗರಿ, ಉದ್ದು, ಹೆಸರು, ಹತ್ತಿ ಬಿತ್ತನೆ ಮಾಡಲಾಗುತ್ತಿದೆ.
ಮುಂಗಾರು ಬಿತ್ತನೆ ಬೀಜಗಳ ದಾಸ್ತಾನು: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಭತ್ತ, ಉದ್ದು, ಸಜ್ಜೆ 27,978.64 ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯ್ತಿ ದರದಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಲ್ಲಿ 3,877.75 ಕ್ವಿಂಟಲ್ ಬೀಜಗಳ ದಾಸ್ತಾನು ಲಭ್ಯವಿದ್ದು, ಬಿತ್ತನೆ ಬೀಜಗಳ ಯಾವುದೇ ಕೊರತೆ ಇಲ್ಲ.
ರಸಗೊಬ್ಬರ ದಾಸ್ತಾನು: ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಬೆಳೆಗಳ ಕ್ಷೇತ್ರಕ್ಕನುಗುಣವಾಗಿ ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ ಪೋಷಾಕಾಂಶಗಳ ಆಧಾರದ ಮೇಲೆ ಜಿಲ್ಲೆಗೆ ಬೇಕಾಗುವ ವಿವಿಧ ರಸಗೊಬ್ಬರಗಳ ಬೇಡಿಕೆ 1,44,911 ಮೆಟ್ರಿಕ್ ಟನ್ ಇದೆ. ಯಾವುದೇ ರೀತಿಯ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ 80–100 ಎಂಎಂ ಮಳೆ ಬಂದರೆ ಬಿತ್ತನೆಗೆ ಸೂಕ್ತ. ಜೂನ್ 5ರ ನಂತರ ಬಿತ್ತನೆ ಮಾಡಿದರೆ ಮಳೆ ಕೊರತೆಯಾಗದು. 4.16 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿದೆರತೇಂದ್ರನಾಥ ಸೂಗುರು ಜಂಟಿ ಕೃಷಿ ನಿರ್ದೇಶಕ
ಕಳೆದ ವರ್ಷ ತಾಲ್ಲೂಕಿನಲ್ಲಿ ಬಿತ್ತನೆ ಗುರಿ ಪೂರೈಸಲಾಗಿತ್ತು. ಈ ವರ್ಷ ಗುರಿ ತಲುಪುವ ಆಶಾಭಾವನೆ ಹೊಂದಲಾಗಿದೆ. ಹೆಚ್ಚಿನ ರೈತರು 26799 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಮಾಡುವ ಗುರಿ ಹೊಂದಿದ್ದಾರೆಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ
ಕಳೆದ ವರ್ಷ ಹತ್ತಿಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ ನಷ್ಟ ಅನುಭವಿಸಬೇಕಾಯಿತು. ಈ ವರ್ಷ ಹತ್ತಿ ಬಿತ್ತನೆ ಮಾಡಲು ಜಮೀನನ್ನು ಹದ ಮಾಡಿಕೊಂಡು ಮಳೆಗಾಗಿ ಮುಗಿಲು ನೋಡುತ್ತಿದ್ದೇನೆಶರಣಪ್ಪ ಜಡಿ ಪ್ರಗತಿಪರ ರೈತ ವಡಗೇರಾ
ರೈತರು ಅಧಿಕೃತ ಮಾರಾಟಗಾರರ ಹತ್ತಿರ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಬೇಕು. ಅಸಲಿ ಬಿಲ್ ಕೇಳಿ ಪಡೆದುಕೊಳ್ಳಬೇಕುರಾಮನಗೌಡ ಪಾಟೀಲ ಎಡಿಎ ಸುರಪುರ
ಬೇಸಿಗೆ ಹಂಗಾಮಿನ ಭತ್ತದ ಫಸಲು ಪಡೆದುಕೊಳ್ಳಲು ಅನ್ನದಾತ ಕಣ್ಣೀರು ಸುರಿಸುವಂತಾಯಿತು. ಅಧಿಕಾರಿಗಳು ಜನಪ್ರತಿನಿಧಿಗಳು ರೈತರ ಹಿತ ಕಾಪಾಡಬೇಕುಶಿವಪ್ಪ ಸಕ್ರಿ ರೈತ ಕುಂಬಾರಪೇಟ
ಮುಂಗಾರು ಬೆಳೆ ಬಿತ್ತಲು ಸಿದ್ಧತೆ
ವಡಗೇರಾ: ಕಳೆದ ವಾರ ಬಂದ ಅಲ್ಪಸ್ವಲ್ಪ ಮಳೆಗೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡಿದ್ದಾರೆ. ಮುಂಗಾರು ಬೆಳೆ ಬಿತ್ತಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ತಾಲ್ಲೂಕಿನ ಶೇಂಗಾ ಎಳ್ಳು ಸೂರ್ಯಕಾಂತಿ ಹೆಸರು ತೊಗರಿ ಹತ್ತಿ ಹೀಗೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. 2025-26ರಲ್ಲಿ ನೀರಾವರಿ ಕ್ಷೇತ್ರ 34174 ಹೆಕ್ಟೇರ್ ಖುಷ್ಕಿ ಕ್ಷೇತ್ರ 23111 ಹೆಕ್ಟೇರ್ ಸೇರಿದಂತೆ 57285 ಹೆಕ್ಟೇರ್ ಜಮೀನಿನಲ್ಲಿ ವಿವಿಧ ತಳಿಯ ಬೆಳೆಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಕಳೆದ ವರ್ಷ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಹತ್ತಿಯನ್ನು ಬಿತ್ತನೆ ಮಾಡಿದ್ದರು.
ಬಿತ್ತನೆಗೆ ಸಕಲ ಸಿದ್ಧತೆ
ಸುರಪುರ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಬೇಗನೇ ಆರಂಭವಾಗಿದೆ. ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 19.4 ಮಿ.ಮೀ ಮಳೆ ಬರಬೇಕಿತ್ತು. ಆದರೆ 30.6 ಮಿ.ಮೀ ಮಳೆ ಬಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ ಮೇ ತಿಂಗಳಲ್ಲಿ ಕೇವಲ 1.5 ಮಿ.ಮೀ ಮಳೆ ಸುರಿದಿದ್ದು 64 ಮಿ.ಮೀ ಮಳೆ ಕೊರತೆಯಾಗಿದೆ. ಆದರೂ ರೈತ ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಬಿತ್ತನೆ ಆರಂಭವಾಗಿದ್ದರೂ ಭೂಮಿ ಹಸನುಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿರುವುದು ಕಂಡುಬರುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 168550 ಹೆಕ್ಟೇರ್ ಕೃಷಿ ಕ್ಷೇತ್ರ ಇದೆ. ಅದರಲ್ಲಿ 155000 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಭತ್ತ 55000 ಹೆಕ್ಟೇರ್ ಹತ್ತಿ 49000 ಹೆಕ್ಟೇರ್ ತೊಗರಿ 42000 ಹೆಕ್ಟೇರ್ ಸಜ್ಜೆ 8 ಸಾವಿರ ಹೆಕ್ಟೇರ್ ಸೂರ್ಯಕಾಂತಿ 150 ಹೆಕ್ಟೇರ್ ಹೆಸರು 500 ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಇತರ ಬೆಳೆಗಳು 350 ಹೆಕ್ಟೇರ್ ಬಿತ್ತನೆ ನಿರೀಕ್ಷಿಸಲಾಗಿದೆ. 55 ಸಾವಿರ ಟನ್ ರಸಗೊಬ್ಬರದ ಬೇಡಿಕೆ ಇದೆ. ತಾಲ್ಲೂಕಿನಲ್ಲಿ ಸುರಪುರ ಕಕ್ಕೇರಾ ಕೆಂಭಾವಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸುರಪುರದಲ್ಲಿ ಇದೆ. ರೈತರು ಅಗತ್ಯ ಸಲಹೆ ಸೂಚನೆ ಕೃಷಿ ಅಧಿಕಾರಿಗಳಿಂದ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರಕ ವರದಿ: ಅಶೋಕ ಸಾಲವಾಡಗಿ, ವಾಟ್ಕರ್ ನಾಮದೇವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.