ಯಾದಗಿರಿ: ಗುರುಮಠಕಲ್ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಮತ್ತು ಸೌದಾಗರ್ ಜಲಾಶಯಗಳ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಲು ಬೇಕಾದ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸುವಂತೆ ಶಾಸಕ ಶರಣಗೌಡ ಕಂದಕೂರು ಅವರು ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಸಾವಿರಾರು ಎಕರೆ ಜಮೀನು ಈ ಎರಡು ಡ್ಯಾಂಗಳ ವ್ಯಾಪ್ತಿಗೆ ಬರುತ್ತವೆ. ಸಕಾಲದಲ್ಲಿ ನೀರಿನ ಕೊರತೆ ಬಹಳ ವರ್ಷಗಳಿಂದ ಕಾಡುತ್ತಿದೆ. ಹೀಗಾಗಿ, ಸಾಕಷ್ಟು ಬೆಳೆ ಬೆಳೆಯಬೇಕಾದ ರೈತರಿಗೆ ಅನುಕೂಲವಾಗಲು ಬೇಕಾದ ಅನುದಾನ ಮಂಜೂರು ಮಾಡುವಂತೆ ಕೋರಿದ್ದಾರೆ.
ಕಡೆಚೂರ್ - ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರೈಲು ಕೋಚ್ ತಯಾರಿಕೆ ಸಾಮರ್ಥ್ಯವನ್ನು ಹೆಚ್ಚಿಸವೇಕು. ಆ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು. ತಾಂತ್ರಿಕ ಶಿಕ್ಷಣ ಸೇರಿದಂತೆ ವಿವಿಧ ಪದವಿ ಮತ್ತು ಪಿಯುಸಿ ಪಾಸಾದ ಸಾವಿರಾರು ಯುವಕರು ಕೆಲಸವಿಲ್ಲದೆ ತೊಂದರೆಯಲ್ಲಿದ್ದಾರೆ. ಅನಿವಾರ್ಯವಾಗಿ ಗುಳೆ ಹೋಗುವಂತಹ ಸ್ಥಿತಿ ಇದೆ. ಹೀಗಾಗಿ, ನಮ್ಮಲ್ಲಿಯೇ ಇರುವ ರೈಲು ಕೋಚ್ ತಯಾರಿಕೆ ಹೆಚ್ಚಿಸಿದರೆ ಅನೇಕರಿಗೆ ಕೆಲಸ ಸಿಗುತ್ತದೆ ಎಂದಿದ್ದಾರೆ.
ಜನರು ಕೂಡ ಸ್ವಗ್ರಾಮಗಳಲ್ಲಿ ಉಳಿದುಕೊಂಡು ಉದ್ಯೋಗದ ಜೊತೆಗೆ ಕೃಷಿ ಕಾಯಕ ಮಾಡಿಕೊಂಡು ಬದುಕಬಹುದು. ಅದಕ್ಕಾಗಿ ಈ ಬೇಡಿಕೆ ಕಾರ್ಯರೂಪಕ್ಕೆ ತರಬೇಕು ಎಂದು ಸಚಿವರಿಗೆ ಮನವರಿಕೆ ಮಾಡಿದ್ದರು.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಕಲಬುರಗಿ - ರಾಯಚೂರು ಇಂಟರ್ ಸಿಟಿ ರೈಲು ಸಂಚಾರ ಮತ್ತೆ ಆರಂಭಿಸಬೇಕು ಎಂದು ಸಹ ಮನವಿ ಮಾಡಿದ್ದರು. ಶಾಸಕರ ಮನವಿ ಸ್ವೀಕರಿಸಿದ ಸಚಿವರು, ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ.
‘ಅನಾರೋಗ್ಯದ ನಡುವೆಯೂ ರೈತರ ಕಷ್ಟ ಕೇಳಿದ ದೇವೇಗೌಡರು’
‘ಸತತ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಳಾದ ಬೆಳೆಗಳ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಇತರೆ ಜಿಲ್ಲೆಗಳಲ್ಲಿ ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟವಾದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮಾಹಿತಿ ಪಡೆದಿದ್ದಾರೆ’ ಎಂದು ಶಾಸಕ ಶರಣಗೌಡ ಕಂದಕೂರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಸದ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಶಾಸಕರೂ ಭೇಟಿ ಮಾಡಿದರು. ಆರೋಗ್ಯವನ್ನು ಸಹ ವಿಚಾರಿಸಿದರು. ‘ಅತಿವಷ್ಟಿ ಮತ್ತು ಹಾನಿ ಬಗ್ಗೆ ಸಮಗ್ರ ಮಾಹಿತಿ ಪಡೆದು ರೈತರು ಕಷ್ಟಕ್ಕೆ ಸಿಲುಕಿದ್ದಕ್ಕೆ ಮರುಗಿದರು. ಆರೋಗ್ಯ ಸರಿಯಿದ್ದರೆ ನೆರೆ ಹಾವಳಿ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಲು ಬರುತ್ತಿದೆ. ಆದರೆ ಅನಾರೋಗ್ಯ ಕಾಡಿದ್ದರಿಂದ ಬರಲು ಆಗಿಲ್ಲ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ. ‘ರೈತರಿಗೆ ಕಷ್ಟಗಳು ಬರಬಾರದು. ಆತ ನಗುತ್ತ ಇದ್ದರೆ ನಮ್ಮ ಹೊಟ್ಟೆ ತುಂಬುತ್ತದೆ. ಆದರೆ ವಿಧಿಯಾಟದಿಂದ ವಿಪರೀತ ಮಳೆಯಾಗಿ ಪ್ರವಾಹ ಬಂದು ಅನ್ನದಾತರ ಬದುಕು ನರಕವಾಗಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಚಿಂತನೆ ಮಾಡಿ ರೈತರ ನೆರವಿಗೆ ಕೂಡಲೇ ಧಾವಿಸಬೇಕು. ಸಚಿವರು ಸಂಸದರು ಸರ್ಕಾರದ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದ್ದಾರೆ ಎಂದಿದ್ದಾರೆ. ಜೆಡಿಎಸ್ ಪರವಾಗಿ ರೈತರ ಕಷ್ಟಕ್ಕೆ ಧ್ವನಿ ಎತ್ತುವಂತೆ ಶಾಸಕರಿಗೆ ಸಲಹೆಯೂ ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.