ADVERTISEMENT

ಯಾದಗಿರಿ | 'ಅಚಾತುರ್ಯದಿಂದ ಕೈತಪ್ಪಿದ ಎಸ್‌ಟಿ ಸೇರ್ಪಡೆ'

‘ಕೋಲಿ– ಕಬ್ಬಲಿಗ ಸಮಾಜದ ಎಸ್‌ಟಿಗಾಗಿ ಹೋರಾಟ: ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 4:52 IST
Last Updated 6 ಡಿಸೆಂಬರ್ 2025, 4:52 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕೋಲಿ– ಕಬ್ಬಲಿಗ ಸಮಾಜದ ಎಸ್‌ಟಿಗಾಗಿ ಹೋರಾಟ ಮತ್ತು ಪ್ರಸ್ತುತ ಸ್ಥಿತಿ ಕುರಿತ ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕೋಲಿ– ಕಬ್ಬಲಿಗ ಸಮಾಜದ ಎಸ್‌ಟಿಗಾಗಿ ಹೋರಾಟ ಮತ್ತು ಪ್ರಸ್ತುತ ಸ್ಥಿತಿ ಕುರಿತ ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು   

ಯಾದಗಿರಿ: ‘ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆಯಾಗುವ ಅರ್ಹತೆ ಹಾಗೂ ಬ್ರಿಟಿಷರ ಕಾಲದಿಂದಲೂ ಸೂಕ್ತ ದಾಖಲಾತಿಗಳು ಇದ್ದರೂ ಅಚಾತುರ್ಯದಿಂದಾಗಿ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಕಿ ಸೇರಿ ಸಮುದಾಯದ ಇತರೆ ಪರ್ಯಾಯ ಪದಗಳು ಎಸ್‌ಟಿಗೆ ಸೇರಲು ಆಗಲಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಆಯೋಜಿಸಿದ್ದ ‘ಕೋಲಿ– ಕಬ್ಬಲಿಗ ಸಮಾಜದ ಎಸ್‌ಟಿಗಾಗಿ ಹೋರಾಟ ಮತ್ತು ಪ್ರಸ್ತುತ ಸ್ಥಿತಿ’ ಕುರಿತ ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

‘ಕೋಲಿ, ಕಬ್ಬಲಿಗ, ಅಂಬಿಗ, ವಾಲೀಕಾರ ಸೇರಿ ಇತರೆ ಪದಗಳು ಎಸ್‌ಟಿ ಪಟ್ಟಿಯಲ್ಲಿ ಇದ್ದರೂ ಸಹಿತ 1956ರಲ್ಲಿ ಅವುಗಳನ್ನು ಪಟ್ಟಿಯಿಂದ ಬಿಡಲಾಗಿದೆ. ನಮ್ಮ ಸಮುದಾಯ ಎಸ್‌ಟಿಗೆ ಅರ್ಹ ಎಂಬುದಕ್ಕೆ ಸಾಕಷ್ಟು ದಾಖಲಾತಿಗಳು ಇದ್ದರೂ ಮಾನ್ಯತೆ ಸಿಗುತ್ತಿಲ್ಲ. ಚುನಾವಣೆ ಬಂದಾಗ ಈ ಚರ್ಚೆಯಾಗುತ್ತದೆ. ಆ ಬಳಿಕ ಎಲ್ಲರೂ ಸುಮ್ಮನೆ ಆಗುತ್ತಾರೆ’ ಎಂದರು.

ADVERTISEMENT

‘ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕೆ ಪದಗಳು ಕೋಳಿ, ಟೋಕರೆ ಕೋಳಿ, ರಾಜ ಕೋಯಾದ ಪರ್ಯಾಯ ಪದಗಳಾಗಿವೆ. ಇವುಗಳು ಎಸ್‌ಟಿ ಪಟ್ಟಿಯಿಂದ ಬಿಟ್ಟು ಹೋಗಿವೆ ಎಂದು ದಾಖಲೆಗಳ ಸಮೇತ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಬೇಕಿದೆ. ಇದಕ್ಕಾಗಿ ಸಮಾಜದಿಂದ ಒತ್ತಡ ತರುವ ಕೆಲಸವೂ ಆಗಬೇಕು’ ಎಂದು ಹೇಳಿದರು.

‘ಕೋಯಾ ಎಂದರೆ ಛತ್ತೀಸಗಢ ಮತ್ತು ಮಧ್ಯಪ್ರದೇಶದ ಭಾಗದಲ್ಲಿನ ಬುಡಕಟ್ಟು ಜನಾಂಗದವರು. ಕಾಲಕ್ರಮೇಣ ಗೋದಾವರಿ, ವಾರಂಗಲ್ ಭಾಗಕ್ಕೆ ವಲಸೆ ಬಂದರು. ಕಾಡುಗಳಲ್ಲಿ ತಮ್ಮದೆಯಾದ ವೇಷಭೂಷಣ, ಆಚಾರ–ವಿಚಾರ, ಸಂಸ್ಕೃತಿಯನ್ನು ಹೊಂದಿದ್ದರು. ಮರಗಳನ್ನು ಕಡಿದು ಉಳುಮೆ ಮಾಡಿ, ಐದು ವರ್ಷಗಳ ಬಳಿಕ ಬೇರೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದರು. ಕಾಡುಗಳಿಂದ ಹೊರ ಬಂದು ಗ್ರಾಮ ಸೇವೆ, ಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದರು.

‘ಕಾಡಿನಿಂದ ನಾಡಿನ ಸಂಪರ್ಕಕ್ಕೆ ಬಂದ ಬಳಿಕ ಕೋಯಾ ಕಬ್ಬಲಿಗವಾಗಿ ವಾಲೀಕಾರ, ತಳವಾರ, ನಾಟೀಕಾರ ಜಾತಿಯ ಹೆಸರುಗಳಿಂದಲೂ ಕರೆಯಿಸಿಕೊಂಡರು. ಹೀಗಾಗಿ, ಗುಡ್ಡುಗಾಡು ಪ್ರದೇಶವಾದ ಚಿಂಚೋಳಿ, ಚಿತ್ತಾಪುರ, ಸೇಡಂ, ಗುರುಮಠಕಲ್‌ ವ್ಯಾಪ್ತಿಯ ಗ್ರಾಮಗಳಲ್ಲಿ ಶೇ 50ರಿಂದ 90ರಷ್ಟು ಕಬ್ಬಲಿಗ ಜನಾಂಗದವರೇ ಇದ್ದಾರೆ. ದೇಹದ ಮೈಕಟ್ಟು, ಬಣ್ಣ, ವೇಷಭೂಷಣಗಳು ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ಹೋಲುತ್ತವೆ’ ಎಂದರು.‌

ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮುಕ್ಕಾ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಗೋಸಿ, ನಾಗರತ್ನ ಅನಪುರ, ಮಲ್ಲು ಪೂಜಾರಿ, ಲಲಿತಾ ಅನಪುರ, ಸುರೇಶ ಅಂಬಿಗೇರ, ನಿಂಗಪ್ಪ ಜಾಲಗರ, ಮುದಕಪ್ಪ ಚಾಮನಹಳ್ಳಿ, ಸಿ.ಎಂ. ಪಟ್ಟೇದಾರ, ವೆಂಕಟೇಶ ಬಿಎಸ್‌ಎನ್‌ಎಲ್‌, ರಾಜಪ್ಪ ಸೈದಾಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ಬ್ರಿಟಿಷ್ ಮುಂಬೈ ಪ್ರೆಸಿಡೆನ್ಸಿಗಳಲ್ಲಿ ಉಲ್ಲೇಖ’‌

‘1936ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಬಂದಿದ್ದ ಮೀಸಲಾತಿ ನೋಟಿಫಿಕೇಶನ್‌ನಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಭಾಗದಲ್ಲಿ ನಮ್ಮ ಸಮಾಜದ ಬಾರಿಕೆ ಮಚ್ಚಿ ಎಸ್‌ಸಿ ಪಟ್ಟಿಯಲ್ಲಿತ್ತು. ಬಾಂಬೆ ಪ್ರೆಸಿಡೆನ್ಸಿಯ ನೋಟಿಫಿಕೇಷನ್‌ನಲ್ಲಿ ಡೋರ ಕೋಳಿ ಟೋಕರೆ ಕೋಳಿಯೂ ಎಸ್‌ಸಿ ಪಟ್ಟಿಯಲ್ಲಿದ್ದವು’ ಎಂದು ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ ಹೇಳಿದರು. ‘ಸ್ವಾತಂತ್ರ್ಯದ ಬಳಿಕ 1950ರ ಪ್ರಥಮ ಮೀಸಲಾತಿ ನೋಟಿಫಿಕೇಶನ್‌ ಬಂದ ನಂತರ ಆಗಿನ ಮೈಸೂರು ಸರ್ಕಾರದಲ್ಲಿ ನಮ್ಮ ಸಮಾಜದ ಪರ್ಯಾಯ ಪದಗಳು ಎಸ್‌ಟಿ ಪಟ್ಟಿಯಲ್ಲಿ ಇರಲಿಲ್ಲ. 1956ರಲ್ಲಿ ಬಂದ ಮತ್ತೊಂದು ಗೆಜೆಟ್ ನೋಟಿಫಿಕೇಶನ್‌ನಲ್ಲಿ ಟೋಕರೆ ಕೋಳಿ ಹೊಲ್ಚ ಕೋಯಾ ಭೀಮ್ ಕೋಯಾ ರಾಜ್ ಕೋಯಾ ಎಸ್‌ಟಿ ಪಟ್ಟಿಯಲ್ಲಿದ್ದವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.