
ಯಾದಗಿರಿ: ‘ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 28 ರಿಂದ 30ರವರೆಗೆ ರಾಜ್ಯದ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು.
‘ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಆಯ್ಕೆಯಾಗಿದ್ದು, 28ರ ಮಧ್ಯಾಹ್ನ 2.30ಕ್ಕೆ ಮೈಲಾಪುರ ಅಗಸಿಯಿಂದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನದಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಸತೀಶ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಹಿಂದಿನ ಸಮ್ಮೇಳನದ ಅಧ್ಯಕ್ಷೆ ಉಮಾಶ್ರೀ, ಶಾಸಕರು, ಅಧಿಕಾರಿ ವೃಂದ ಸೇರಿದಂತೆ ಹಲವರು ಪಾಲ್ಗೊಳ್ಳುವರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಸಮ್ಮೇಳನದಲ್ಲಿ ನಿಜಗುಣಾನಂದ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 109 ಜನ ವಿಜ್ಞಾನಿಗಳು, ದೇಶದ 8 ವಿಜ್ಞಾನ ಕೇಂದ್ರಗಳು ವಿಜ್ಞಾನದ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಿವೆ. ಜೀವಮಾನ ಶ್ರೇಷ್ಠ ಸಾಧನೆ, ಎಚ್‌ಎನ್ ಪ್ರಶಸ್ತಿಗಳ ಪ್ರದಾನ, ಪುಸ್ತಕಗಳ ಬಿಡುಗಡೆ, ಸಂಪನ್ಮೂಲ ವ್ಯಕ್ತಿಗಳಿಂದ ವೈಜ್ಞಾನಿಕ ವಿಚಾರಗಳ ಮಂಡನೆ, ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ, ನಾಟಕ ಪ್ರದರ್ಶನದಂತಹ ಹಲವು ಕಾರ್ಯಕ್ರಮಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.
‘ಮೂರು ದಿನಗಳ ಸಮ್ಮೇಳನಕ್ಕೆ ಸಿ.ಎಂ ಸಿದ್ದರಾಮಯ್ಯ ಆದಿಯಾಗಿ ಹಲವು ಸಚಿವ, ಶಾಸಕ, ಗಣ್ಯರನ್ನು ಆಹ್ವಾನಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಗಣ್ಯರ ಪಟ್ಟಿ ಅಂತಿಮಗೊಳ್ಳಲಿದೆ. ಸಂಪೂರ್ಣ ಊಟದ ವ್ಯವಸ್ಥೆಯನ್ನು ಸಚಿವ ಸತೀಶ ಜಾರಕಿಹೊಳಿ ವಹಿಸಿಕೊಂಡಿದ್ದು, ಸಮ್ಮೇಳನಕ್ಕೆ ₹ 1.55 ಕೋಟಿ ಖರ್ಚು ಆಗಬಹುದು. ಸರ್ಕಾರವೂ ಅನುದಾನದ ಭರವಸೆ ನೀಡಿದ್ದು, ದಾನಿಗಳಿಂದಲೂ ಹಣ ಸಂಗ್ರಹಿಸಲಾಗುತ್ತಿದೆ’ ಎಂದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಎಲ್ಲವನ್ನು ಒರೆಗೆ ಹಚ್ಚಿಸಿ, ಪ್ರಶ್ನಿಸುವ ಮನೋಭಾವ ಬೆಳೆಸಿ, ಸತ್ಯ–ಅಸತ್ಯವನ್ನು ಸ್ವೀಕರಿಸುವಂತೆ ಮಾಡುವ ಸಮ್ಮೇಳನವಿದು. ವಾಮಾಚಾರ, ಬಾನಾಮತಿ, ಮೌಢ್ಯತೆ ಹೆಚ್ಚಾಗಿರುವ ಯಾದಗಿರಿಯಲ್ಲಿ ನಡೆಯುವ ವೈಜ್ಞಾನಿಕ ಸಮ್ಮೇಳನವು ಹೊಸ ಚಿಂತನೆ ಮೂಡಿಸಲಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ವಿವಿಧ ಸಮುದಾಯಗಳ ಮುಖಂಡರಾದ ಮರೆಪ್ಪ ಚಟ್ಟರಕಿ, ಭೀಮಣ್ಣ ಮೇಟಿ, ಹಣುಮೇಗೌಡ ಮರಕಲ್, ಲಿಂಗಪ್ಪ ಹತ್ತಿಮನಿ, ರವಿ ಪಾಟೀಲ ರಾಯಚೂರು, ಸುದರ್ಶನ ನಾಯಕ, ಲಕ್ಷ್ಮಣ ರಾಠೋಡ್, ಮಹಮದ್ ಶಫಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.