
ಯಾದಗಿರಿ: ‘ಡಿಸೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆ ನಡೆಸಿ ಅವರು ಮಾತನಾಡಿದರು.
‘ಯುವಜನೋತ್ಸವಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ, ಮುಖ್ಯ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಯುವಜನೋತ್ಸವದಲ್ಲಿ ಸುಮಾರು 10 ಸಾವಿರ ಜನ ಸೇರುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಶಿಷ್ಟಾಚಾರದಂತೆ ಅತಿಥಿ, ಗಣ್ಯರನ್ನು ಆಹ್ವಾನಿಸುವ ಜೊತೆಗೆ ವೇದಿಕೆ ಸಿದ್ಧತೆ, ಶಾಮಿಯಾನ, ಕುಡಿಯುವ ನೀರು, ಆಸನಗಳ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಕಾರ್ಯಕ್ರಮ ನಡೆಯುವ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು. ಅಗ್ನಿ ಶಾಮಕ ಇಲಾಖೆ ವಾಹನ, ನುರಿತ ವೈದ್ಯರೊಂದಿಗೆ ಆಂಬ್ಯುಲೆನ್ಸ್ ವಾಹನ, ಸಿದ್ಧವಾಗಿ ಇರಿಸಿಕೊಳ್ಳಬೇಕು. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸಾ ಕೊಠಡಿ ಕಾಯ್ದಿರಿಸಬೇಕು’ ಎಂದರು.
‘ಯುವಜನೋತ್ಸವ ಅಂಗವಾಗಿ 900ಕ್ಕೂ ಹೆಚ್ಚು ಸ್ಪರ್ಧಿಗಳು, 40ಕ್ಕೂ ಹೆಚ್ಚು ನಿರ್ಣಾಯಕರು, ಕ್ರೀಡಾ ಇಲಾಖೆ ಅಧಿಕಾರಿಗಳು, ವಿವಿಧ ತಂಡಗಳ ವ್ಯವಸ್ಥಾಪಕರು ಬರುವರು. 6 ವೇದಿಕೆಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲ ಸ್ಪರ್ಧಿ, ಅತಿಥಿ, ಗಣ್ಯರ ವಾಸ್ತವ್ಯಕ್ಕೆ ವಸತಿ ನಿಲಯ, ವಸತಿ ಶಾಲೆ, ಹೋಟೆಲ್‌ಗಳನ್ನು ಗುರುತಿಸಬೇಕು’ ಎಂದು ಹೇಳಿದರು.
‘ವಸತಿ, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಈಗಾಗಲೇ ರಚಿಸಲಾಗಿರುವ ಆಯಾ ಸಮಿತಿಗಳ ಮುಖ್ಯಸ್ಥರು, ಆಯಾ ವಸತಿನಿಲಯಗಳು ಮತ್ತು ವೇದಿಕೆವಾರು ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಹಣಕಾಸು, ಶಿಷ್ಟಾಚಾರ ಸಮಿತಿ, ವೇದಿಕೆ ನಿರ್ಮಾಣ, ಅಲಂಕಾರ ಸಮಿತಿ, ತೀರ್ಪುಗಾರರು, ರಕ್ಷಣಾ ಸಮಿತಿ, ಆರೋಗ್ಯ ಸಮಿತಿ, ಪ್ರಚಾರ ಸಮಿತಿ, ವಿಜ್ಞಾನ ಮತ್ತು ವಸ್ತುಪ್ರದರ್ಶನ ಸಮಿತಿ, ಸ್ವಯಂಸೇವಕರು, ಸ್ವಾಗತ ಸಮಿತಿ ಮುಖ್ಯಸ್ಥರು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಅಧಿಕಾರಿ ರಾಜು ಬಾವಿಹಳ್ಳಿ ಸ್ವಾಗತಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.