ADVERTISEMENT

ಹೆಚ್ಚು ಹಣ ಪಡೆದರೆ ಕ್ರಮ: ಎಚ್ಚರಿಕೆ

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:57 IST
Last Updated 10 ಜೂನ್ 2021, 17:57 IST
ಗುರುಮಠಕಲ್ ಪಟ್ಟಣದ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕೃಷಿ ಇಲಾಖೆ ಜಾರಿದಳದ ಸಹಾಯಕ ನಿರ್ದೇಶಕಿ ರೂಪಾ. ಎಂ.
ಗುರುಮಠಕಲ್ ಪಟ್ಟಣದ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕೃಷಿ ಇಲಾಖೆ ಜಾರಿದಳದ ಸಹಾಯಕ ನಿರ್ದೇಶಕಿ ರೂಪಾ. ಎಂ.   

ಗುರುಮಠಕಲ್: ಬುಧವಾರ ಪಟ್ಟಣದ ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟದ ಅಂಗಡಿಗಳಿಗೆ ಕೃಷಿ ಇಲಾಖೆಯ ಜಾರಿದಳದ ಸಹಾಯಕ ನಿರ್ದೇಶಕಿ ರೂಪ.ಎಂ. ಹಾಗೂ ತಂಡದವರು ಭೇಟಿ ನೀಡಿ, ಅಲ್ಲಿನ ರಸಗೊಬ್ಬರಗಳ ದಾಸ್ತಾನು, ದರ, ಮಾರಾಟದ ಮಾಹಿತಿ, ರಸೀದಿಗಳು, ಬಿತ್ತನೆ ಬೀಜದ ಮಾದರಿಗಳನ್ನು ಪರಿಶೀಲನೆ ನಡೆಸಿದರು.

ಯಾವ ಕಂಪೆನಿ (ಬ್ರಾಂಡ್) ರಸಗೊಬ್ಬರ ಎಷ್ಟೆಷ್ಟು ದಾಸ್ತಾನಿನಲ್ಲಿದೆ. ಅದನ್ನು ಖರೀದಿಸಿದ್ದು ಹಾಗೂ ಮಾರಾಟ ಮಾಡಿದ ಕುರಿತ ಲೆಕ್ಕ ಮತ್ತು ಉಳಿದ ದಾಸ್ತಾನು ಎಷ್ಟು? ಈ ಭಾಗದ ಹೆಚ್ಚಿನ ಬೇಡಿಕೆ ಸ್ಪಿಕ್ ಬ್ರಾಂಡ್ ಡಿಎಪಿ. ಆದರೆ, ಈವರೆಗೆ ಯಾಕೆ ಇನ್ನೂ ತರಿಸಲಾಗಿಲ್ಲ ಎನ್ನುವ ಕುರಿತು ವ್ಯಾಪಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಸರಬರಾಜು ಮಾಡುವಲ್ಲಿಯೇ ದಾಸ್ತಾನು ಕೊರತೆಯಿದ್ದರಿಂದ ಏಪ್ರಿಲ್ ತಿಂಗಳಲ್ಲಿಯೇ ಹಣ ಪಾವತಿಸಿದ್ದೂ ಇನ್ನು ಸರಕು ಬಂದಿಲ್ಲ ಎಂದು ವ್ಯಾಪಾರಿಗಳು ಹೇಳಿದರು.

ರಸಗೊಬ್ಬರದ ದರ ದಿಢೀರನೆ ಏರಿಕೆಯಾಗಿದ್ದರಿಂದ ಸರ್ಕಾರ ರೈತರ ಅನುಕೂಲಕ್ಕಾಗಿ 50 ಕೆ.ಜಿ. ತೂಕದ ರಸಗೊಬ್ಬರದ ಚೀಲಗಳನ್ನು ₹ 1200 ಮಾರಾಟ ಮಾಡುವಂತೆ ನಿಗದಿಪಡಿಸಿದೆ. ಈಗ ಹೆಚ್ಚಿನ ದರದಲ್ಲಿ ಖರೀದಿಸಿದ್ದ ದಾಸ್ತಾನಿನ ವಿವರವನ್ನು ಆಯಾ ಸಂಸ್ಥೆಗಳ ಸರಬರಾಜುದಾರರಿಂದ ಪಡೆದುಕೊಂಡಿದ್ದು, ಅದಕ್ಕೂ ಸರ್ಕಾರ ಸಹಾಯಧನವನ್ನು ಕೊಡಲಿದೆ. ಆದ್ದರಿಂದ ನಿಗದಿ ಪಡಿಸಿದ ಹಣವನ್ನು ರೈತರಿಂದ ಪಡೆದು ರಸಗೊಬ್ಬರದ ಚೀಲ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಗಡಿ ಭಾಗವಾಗಿದುದರಿಂದ ಆಂಧ್ರ ಪ್ರದೇಶ, ತೆಲಂಗಾಣದಿಂದ ಹತ್ತಿ ಬಿತ್ತನೆ ಬೀಜವನ್ನು ಮಾರಾಟ ಮಾಡುವ ತಂಡಗಳು ಬರಲಿದ್ದು, ಕಳಪೆ ಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಅಂತಹ ಅನಧಿಕೃತ ಮಾರಾಟಗಾರರಲ್ಲಿ ಬೀಜ ಖರೀದಿ ಮಾಡಬಾರದು ಎಂದು ಅವರು ರೈತರಿಗೆ ಮನವಿ ಮಾಡಿದ್ದಾರೆ.

‘ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ಅಧಿಕೃತ ರಸೀದಿಯನ್ನು ಪಡೆಯಬೇಕು. ನಿಮ್ಮಿಂದ ಹೆಚ್ಚುವರಿ ಹಣ ಪಡೆದರೆ ಕೂಡಲೆ ಕೃಷಿ ಇಲಾಖೆಯಲ್ಲಿ ದೂರು ನೀಡಬೇಕು‘ ಎಂದೂ ಹೇಳಿದರು.

ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್, ಸಂಜೀವಿನಿ ತಾತ್ರಿಕ ಸಹಾಯಕ ಶಿವಪುತ್ರ, ರೈತ ಸಂಪರ್ಕಕ ಕೇಂದ್ರದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.