ADVERTISEMENT

ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಗೊಳಿಸಿ: ಡಾ.ರಾಗಪ್ರಿಯಾ

ಕೊರೊನಾ ನಿಯಂತ್ರಣ ಕುರಿತು ವಿಡಿಯೋ ಸಂವಾದ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:26 IST
Last Updated 4 ಮೇ 2021, 5:26 IST
ರಾಗಪ್ರಿಯಾ
ರಾಗಪ್ರಿಯಾ   

ಯಾದಗಿರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಗ್ರಾಮಮಟ್ಟದ ಕಾರ್ಯಪಡೆ (ಟಾಸ್ಕ್‌ಪೋರ್ಸ್) ಸಮಿತಿ ಸಭೆಯನ್ನು ಕಾಲಕಾಲಕ್ಕೆ ಕರೆದು, ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅನಾವಶ್ಯಕವಾಗಿ ಓಡಾಡುವ ಜನರಿಗೆ ದಂಡ ವಿಧಿಸಬೇಕು ಹೇಳಿದರು.

ADVERTISEMENT

ಗ್ರಾಮಗಳಲ್ಲಿ ಅಂಗಡಿ ಮಾಲೀಕರು ನಿಯಮ ಉಲ್ಲಂಘಿಸಿ ವ್ಯಾಪಾರ-ವಹಿವಾಟು ಮಾಡುತ್ತಿದ್ದರೆ ಅಂಥ ಅಂಗಡಿ ಮಾಲೀಕರ ವಿರುದ್ಧ ದಂಡ ಜೊತೆಗೆ ಎಫ್‍ಐಆರ್ ದಾಖಲಿಸಬೇಕು ಎಂದು ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು.

ಪ್ರತಿದಿನ ಕ್ವಾರಾಂಟೈನ್‍ನಲ್ಲಿರುವವರ ಮನೆ-ಮನೆಗಳಿಗೆ ಭೇಟಿ ನೀಡಿ ಕ್ಯಾರೆಂಟೈನ್ಸ್ ವಾಚ್ ಆ್ಯಪ್‍ನಲ್ಲಿ ಅವರ ಪೋಟೋಗಳನ್ನು ಅಪಲೋಡ್ ಮಾಡಿ ಶೇ 100 ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಇನ್ನು ನಗರ ಪ್ರದೇಶಗಳಲ್ಲೂ ಇಂಥ ಕ್ರಮಗಳನ್ನು ಕೈಗೊಳ್ಳಬೇಕು. ತರಕಾರಿ-ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ವರೆಗೆ ಮಾತ್ರ ತೆರೆಯಲು ಅವಕಾಶ ನೀಡಬೇಕು. ಅಂಗಡಿಗಳ ಮುಂದೆ ಜನದಟ್ಟಣೆಯಾಗದಂತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರು ಮತ್ತು ಪುರಸಭೆಗಳ ಮುಖ್ಯಾಧಿಕಾರಿಗೆ ಸೂಚಿಸಿದರು.

ವಿಡಿಯೋ ಸಂವಾದದಲ್ಲಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ.ಜಿ. ರಜಪೂತ, ನಗರಸಭೆ ಪೌರಾಯುಕ್ತರು, ಪುರಸಭೆಗಳ ಮುಖ್ಯಾಧಿಕಾರಿ, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯ
ನಿರ್ವಹಣಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.