ADVERTISEMENT

ವಸತಿ ನಿಲಯ ಆರಂಭಿಸಲು ಆಗ್ರಹ

ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ, ಮಾನವ ಸರಪಳಿ ರಚಿಸಿ ಎಐಡಿಎಸ್‌ಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:32 IST
Last Updated 23 ಜನವರಿ 2021, 1:32 IST
ಯಾದಗಿರಿಯಲ್ಲಿ ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು
ಯಾದಗಿರಿಯಲ್ಲಿ ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು   

ಯಾದಗಿರಿ: ವಿದ್ಯಾರ್ಥಿವೇತನ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ಸರ್ಕಾರಿ ಹಾಸ್ಟೆಲ್‌ಗಳಿಗೆ ಕೂಡಲೇ ಅರ್ಜಿ ಆಹ್ವಾನಿಸಿ ಪ್ರವೇಶಾತಿ ನೀಡಬೇಕು ಎಂದು ಆಗ್ರಹಿಸಿ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಶುಕ್ರವಾರ ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಲಾಯಿತು.

ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಒದಗಿಸಿ ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು. ಹೆಚ್ಚುವರಿ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕು ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಸೈದಪ್ಪ ಮಾತನಾಡಿ, ‘ಕಾಲೇಜುಗಳಲ್ಲಿ ಅವಶ್ಯಕ ಬೋಧಕರನ್ನು ನೇಮಕಾತಿ ಮಾಡಬೇಕು. ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹಾಸ್ಟೆಲ್ ಹಾಗೂ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನಿಸದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಹಲವು ಕಡೆ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ADVERTISEMENT

ಜನವರಿ 31ರ ವರೆಗೆ ಸಾರಿಗೆ ಇಲಾಖೆಯು ಉಚಿತ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿಕೊಟ್ಟಿತ್ತು. ಬಸ್ ಪಾಸ್ ಸಂಬಂಧಿತ ಗೊಂದಲ ನಿವಾರಿಸುವುದು ಅವಶ್ಯಕ. ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳುತ್ತಿದ್ದು, ಕಾಲೇಜುಗಳಲ್ಲಿ ಪಾಠಗಳು ಇನ್ನೂ ಪ್ರಾರಂಭವಾಗುತ್ತಿಲ್ಲ. ಬೋಧಕರಿಲ್ಲದೇ ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಈಗಾಗಲೇ ಈ ವರ್ಷದ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸರ್ಕಾರ ಘೋಷಿಸಿದೆ. ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆಗಳು ನಿಗದಿಯಾಗಿವೆ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಸುಭಾಶಚಂದ್ರ ಮಾತನಾಡಿ, ಕೊರೊನಾ ಲಾಕ್‌ಡೌನ್ ಪ್ರಭಾವದಿಂದ ವಿದ್ಯಾರ್ಥಿಗಳ ಕುಟುಂಬಗಳು ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬಗಳಿಗೆ ಸಹಾಯಮಾಡಲು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ದುಡಿಮೆಯಲ್ಲಿ ತೊಡಗಿದ್ದಾರೆ. ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಧ್ವನಿಗೆ ಓಗೊಟ್ಟು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಶಿವುಕುಮಾರ, ನಾಗರಾಜ, ಅನಿಲ, ತಿಮ್ಮಯ್ಯ, ಮೌನೇಶ, ಭಾಗ್ಯ, ರೇಣುಕಾ, ಸಾವಿತ್ರಿ, ದೀಪಿಕಾ, ವಿಜಯಲಕ್ಷ್ಮಿ, ರೇಷ್ಮಾ, ಭವಾನಿ, ಹಳ್ಳೆಪ್ಪ, ರವಿ, ದೇವರಾಜ, ವಂಕಟೇಶ, ಮಲ್ಲಿಕಾರ್ಜುನ್, ಹಣಮಂತ, ಶಿವುರಾಜ, ಬಸಲಿಂಗ, ಬಸವರಾಜ, ಯಲ್ಲಪ್ಪ, ಕಾಶಪ್ಪ ಇದ್ದರು.

***

ಸರ್ಕಾರ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳಿಗೆ ಕೂಡಲೇ ಅರ್ಜಿ ಆಹ್ವಾನಿಸಿ ಪ್ರವೇಶಾತಿ ನೀಡಿ ಮತ್ತು ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಎಲ್ಲ ಇಲಾಖೆಗಳ ಶಿಷ್ಯವೇತನಕ್ಕಾಗಿ ಅರ್ಜಿ ಕರೆದು ಬಿಡುಗಡೆಗೊಳಿಸಬೇಕು.
-ಸಿಂಧೂ.ಬಿ, ಜಿಲ್ಲಾ ಉಪಾಧ್ಯಕ್ಷೆ, ಎಐಡಿಎಸ್‍ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.