ADVERTISEMENT

ಹುಣಸಗಿ ತಾಲ್ಲೂಕಿನಲ್ಲಿ ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

ತಾಲ್ಲೂಕು ಕೇಂದ್ರದಲ್ಲಿಲ್ಲ ಸಮರ್ಪಕ ವ್ಯವಸ್ಥೆ

ಭೀಮಶೇನರಾವ ಕುಲಕರ್ಣಿ
Published 31 ಜನವರಿ 2021, 2:15 IST
Last Updated 31 ಜನವರಿ 2021, 2:15 IST

ಹುಣಸಗಿ: ತಾಲ್ಲೂಕಿನೆಲ್ಲೆಡೆ ಸರ್ಕಾರದ ಮಾರ್ಗಸೂಚಿ ಹಾಗೂ ಆದೇಶದಂತೆ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 5 ಪದವಿ ಕಾಲೇಜು, 5 ಐಟಿಐ ಕಾಲೇಜು, 3 ಸರ್ಕಾರಿ ಪದವಿ ಪೂರ್ವ ಕಾಲೇಜು, ಸುಮಾರು 22ಕ್ಕೂ ಹೆಚ್ಚು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿವೆ. ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ನಲ್ಲಿಯೇ ಶಾಲೆಗಳಿಗೆ ತೆರಳಿ ತಮ್ಮ ವ್ಯಾಸಂಗ ಮುಂದುವರಿಸುತ್ತಿದ್ದಾರೆ. ಆದರೆ, ಬಸ್‌ಗೆ ತೆರಳಲು ಪಾಸ್ ಅವಶ್ಯಕವಿದ್ದರಿಂದಾಗಿ ಅದನ್ನು ಪಡೆಯಲು ಸಾಕಷ್ಟು ಗೊಂದಲ ಹಾಗೂ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದ್ದಾರೆ.

‘ಈ ಹಿಂದೆ ಪಟ್ಟಣ ಸೇರಿದಂತೆ ಕೊಡೇಕಲ್ಲ, ನಾರಾಯಣಪುರದಿಂದ ವಿವಿಧ ಶಾಲಾ–ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಬಸ್ ಪಾಸ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಸಕಾಲದಲ್ಲಿ ಆನ್‌ಲೈನ್‌ನಲ್ಲಿಯೇ ವಿದ್ಯಾರ್ಥಿಗಳು ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಿ ಬಳಿಕ ಅದರ ಪ್ರಿಂಟ್ ಕಾಪಿಯನ್ನು ಸಂಬಂಧಿಸಿದ ಪ್ರಾಂಶುಪಾಲರಿಂದ ದೃಢೀಕರಿಸಿ ಸುರಪುರಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ’ ಎಂದು ಹುಣಸಗಿಯ ಸ್ವಾಮಿ ವಿವೇಕಾನಂದ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಸಂಗೀತಾ ಮತ್ತು ಬಸಮ್ಮ, ಅಕ್ಷತಾ ತಿಳಿಸಿದರು.

ADVERTISEMENT

‘ಸುರಪುರದಲ್ಲಿ ದಿನ ಪೂರ್ತಿ ನಿಲ್ಲುವಂತಾಗಿದ್ದು, ಬಹುತೇಕ ವಿದ್ಯಾರ್ಥಿಗಳ ಸಮಯ ಮತ್ತು ಶ್ರಮ ವ್ಯರ್ಥವಾಗುವಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ನೀರಲಗಿ ಹೇಳಿದರು.

‘ಹುಣಸಗಿ ಪಟ್ಟಣವು ಈಗಾಗಲೇ ತಾಲ್ಲೂಕು ಕೇಂದ್ರವಾಗಿದ್ದು, ಇಲ್ಲಿನ ತಾಲ್ಲೂಕು ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳಿಗೆ ಇಲ್ಲಿಯೇ ಬಸ್ ಪಾಸ್ ನೀಡುವಂತಾಗಲು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹಾಗೂ ಮಾದಿಗ ದಂಡೋರ ಮತ್ತು ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಪ್ರಮುಖ ಬಸವರಾಜ ಹಗರಟಗಿ ಹೇಳಿದರು.

‘ಕೊಡೇಕಲ್ಲ ಹಾಗೂ ನಾರಾಯಣಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ವರ್ಷಗಳು ಕಳೆದರೂ ಸಂಚಾರ ನಿಯಂತ್ರಕರಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಪರದಾಡುವಂತಾಗಿದೆ. ಆದ್ದರಿಂದ ಸಂಚಾರ ನಿಯಂತ್ರಕರನ್ನು ನಿಯೋಜಿಸುವ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಪಾಸ್ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಕೊಡೇಕಲ್ಲ ಕರವೇ ಅಧ್ಯಕ್ಷ ರಮೇಶ ಬಿರಾದಾರಹೇಳಿದ್ದಾರೆ.

ಈ ಕುರಿತು ಹುಣಸಗಿ ಸಂಚಾರ ನಿಯಂತ್ರಕ ಕಲ್ಲಣ್ಣ ಪ್ಯಾಟಿ ಮಾಹಿತಿ ನೀಡಿ, ‘ಪ್ರತಿ ಬಾರಿಯೂ ವಿದ್ಯಾರ್ಥಿಗಳಿಗೆ ಇಲ್ಲಿಯೇ ಬಸ್ ಪಾಸ್ ವಿತರಿಸಲಾಗುತ್ತಿತ್ತು. ಆದರೆ, ಆನ್ ಲೈನ್ ವ್ಯವಸ್ಥೆ ಇರುವುದರಿಂದಾಗಿ ಕಂಪ್ಯೂಟರ್ ಒದಗಿಸಲಾಗಿದ್ದು, ಸೂಕ್ತ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಕೋರಲಾಗಿದೆ’ ಎಂದು ವಿವರಿಸಿದರು.

* ಆನ್ ಲೈನ್ ವ್ಯವಸ್ಥೆಯಿಂದಾಗಿ ಹುಣಸಗಿಯಲ್ಲಿ ಇನ್ನೂ ವಿದ್ಯಾರ್ಥಿಗಳಿಗೆ ಪಾಸ್ ನೀಡಲು ಸಾಧ್ಯವಾಗಿಲ್ಲ. ಎರಡು ದಿನದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು

-ಭದ್ರಪ್ಪ, ಡಿಪೋ ಮ್ಯಾನೇಜರ್ ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.