ADVERTISEMENT

ಯಂಪಾಡ: ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಮಕ್ಕಳ ಸಂಖ್ಯೆಗನುಗುಣ ಬಸ್ ವ್ಯವಸ್ಥೆಗೆ ಪೋಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:47 IST
Last Updated 23 ಜೂನ್ 2023, 13:47 IST
ಗುರುಮಠಕಲ್ ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಶುಕ್ರವಾರ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.
ಗುರುಮಠಕಲ್ ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಶುಕ್ರವಾರ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.   

ಗುರುಮಠಕಲ್: ಬೆಳಿಗ್ಗೆ ಶಾಲಾ ಸಮಯಕ್ಕೆ ಬರುವ ಬಸ್‌ನಲ್ಲಿ ಸ್ಥಳವಿಲ್ಲದೆ, ಶಾಲಾ ವೇಳೆಗೆ ತಲುಪಲಾಗುತ್ತಿಲ್ಲ. ಬಸ್ ಸಂಜೆ ವೇಳೆ ಕೇವಲ ಒಂದೇ ಬಸ್ ಇರುವುದರಿಂದ ಗಾಜರಕೋಟ ಗ್ರಾಮದಿಂದ 6 ಕಿ.ಮೀ. ನಡೆದುಕೊಂಡು ಬರುತ್ತಿದ್ದೇವೆ. ಹಲವು ಬಾರಿ ಮನವಿ ಮಾಡಿದರೂ ನಮ್ಮ ಸಮಸ್ಯೆ ಹಗೆಹರಿಯುತ್ತಿಲ್ಲ ಎಂದು ಯಂಪಾಡ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಯಾದಗಿರಿ ನಗರದಿಂದ 8, 9 ಮತ್ತು 10 ಗಂಟೆಗೆ ಗುರುಮಠಕಲ್ ಪಟ್ಟಣಕ್ಕೆ 2 ಮತ್ತು ದೇವರಹಳ್ಳಿಗೆ 1 ಸೇರಿ ಮೂರು ಬಸ್ ವ್ಯವಸ್ಥೆಯೇನೋ ಇದೆ. ಆದರೆ, ಬಸ್ ಯಂಪಾಡ ಗ್ರಾಮಕ್ಕೆ ಬರುವಷ್ಟಕ್ಕೇ ತುಂಬಿರುತ್ತದೆ. ತುಂಬಿದ ಬಸ್ ಬಾಗಿಲಲ್ಲಿ ನಮ್ಮ ಮಕ್ಕಳು ತೂಗಾಡುತ್ತಾ ಶಾಲೆಗೆ ಹೋಗಬೇಕು. ಕೈಜಾರಿದರೆ ಅವರ ಗತಿಯೇನು? ಅದಕ್ಕೆ ಬದಲಾಗಿ ಮಕ್ಕಳು ಮನೆಯಲ್ಲೇ ಇರಲಿ ಎನ್ನುವಂತಾಗಿದೆ ಎಂದು ಪೋಷಕ ಮಾರ್ತಾಂಡಪ್ಪ ಬೇಸರ ವ್ಯಕ್ತಪಡಿಸಿದರು.

ಸಂಜೆವೇಳೆ ಗಾಜರಕೋಟ ಗ್ರಾಮದಿಂದ ನಡೆದ ನಮ್ಮ ನಡೆದು ಬರುತ್ತಿರುವುದರಿಂದ ‘ಮೊದಲೇ ಕಾಲ ಸರಿಯಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ಏನ್ಮಾಡೋದು, ಶಾಲೆಗೆ ಹೋಗುವುದು ಸಾಕು ಮಾಡು’ ಎಂದು ಮನೆಯಲ್ಲಿ ಹೇಳುತ್ತಾರೆ. ನಮಗೆ ಓದಬೇಕೆಂಬ ಹಂಬಲವಿದೆ. ಸಂಜೆ ಕತ್ತಲ ಸಮಯ ಹುಡುಗಿಯರಿಗೆ ಏನಾದರೂ ಆಗುತ್ತೆ ಅನ್ನೋ ಭಯ ನಮ್ಮ ತಂದೆ-ತಾಯಿಯರದು. ಜೊತೆಗೆ ಬಸ್ ಒಳಗೆ ಹತ್ತುವಾಗ ಎಲ್ಲರನ್ನೂ ಹತ್ತಿಸಿಕೊಳ್ಳಲು ನಿರ್ವಾಹಕರು ಪೆನ್ನಿಂದ ಚುಚ್ಚುವುದೂ ನಡೆದಿದೆ. ಇದರಿಂದ ಬಸ್ ಹತ್ತುವುದಕ್ಕೆ ಹಿಂಸೆಯೆನ್ನಿಸುತ್ತೆ ಎಂದು ವಿದ್ಯಾರ್ಥಿಯೊಬ್ಬಳು ಅಳಲು ತೋಡಿಕೊಂಡಳು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಯಾದಗಿರಿ ಸಾರಿಗೆ ಇಲಾಖೆ ಸಹಾಯಕ ವೃತ್ತ ನಿರೀಕ್ಷಕ ಮೋಯಿನ್ ಅವರು, ನಿಮ್ಮ ಸಮಸ್ಯೆ ಹಾಗೂ ಮನವಿಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಬಸ್ ಸಮಸ್ಯೆಯ ತೀವ್ರತೆ ನಮಗೆ ತಿಳಿಯುತ್ತಿದೆ. ಕೂಡಲೆ ನಿಮ್ಮ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.