ADVERTISEMENT

ಮೂಢನಂಬಿಕೆ ಹಿಂದಕ್ಕೆ ಎಳೆಯುತ್ತಿದೆ

5ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ: ಸಚಿವ ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:42 IST
Last Updated 30 ಡಿಸೆಂಬರ್ 2025, 7:42 IST
ಯಾದಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿದ್ಯಾರ್ಥಿಗಳ ಸಮೂಹ
ಯಾದಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿದ್ಯಾರ್ಥಿಗಳ ಸಮೂಹ   

ಯಾದಗಿರಿ: ‘ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದು ಮುನ್ನಡೆಯುತ್ತಿದ್ದರೆ ನಮ್ಮಲ್ಲಿನ ಮೂಢನಂಬಿಕೆಗಳು ನಮ್ಮನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಲ್ಲಿನ‌ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿರುವ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು‌ ಮಾತನಾಡಿದರು.

‘ನಮ್ಮಲ್ಲಿ ಗುಡಿ-ಗುಂಡಾರಗಳನ್ನು ಕಟ್ಟುವುದು ಕಡಿಮೆಯಾಗಿಲ್ಲ. ಅನ್ಯರು ಹೇಳಿದನ್ನು ಚಾಚೂತಪ್ಪದೆ ಮಾಡುತ್ತೇವೆ. ನಮ್ಮ ಮಕ್ಕಳನ್ನು ಓದಿಸುವುದಿಲ್ಲ. ಆದರೆ, ದೇವರ ಕಾರ್ಯಕ್ಕೆ ಸಾಲ ಮಾಡಿಯಾದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ’ ಎಂದರು.

ADVERTISEMENT

‘ಯಾವುದೋ ಒಂದು ಶಕ್ತಿ ತಮ್ಮ ಲಾಭಕ್ಕಾಗಿ ನಮ್ಮನ್ನು ಬೆದರಿಕೆ ಹಾಕಿ ಅನಗತ್ಯವಾಗಿ ಬಡತನದಲ್ಲಿ ಇರುವವರಿಂದ ಹಣವನ್ನು ಖರ್ಚು ಮಾಡಿಸುತ್ತಿದೆ. ಮನುಷ್ಯರು ಮನುಷ್ಯರಿಗೆ ಕೆಟ್ಟದ್ದು ಮಾಡುತ್ತಾರೆ ಹೊರತು ದೇವರು ಕೆಟ್ಟದ್ದು ಮಾಡುವುದಿಲ್ಲ. ವೇಗವಾಗಿ ಎಲ್ಲವನ್ನೂ ಮೆಟ್ಟಿ ನಿಲ್ಲುವಂತಹ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಇದೆ. ಬೇರೆ ಕಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳನ್ನು ಮಟ್ಟಹಾಕುವ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾಡಬೇಕಿದೆ’ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಬೋಧನೆಗಳ ಮೂಲಕ ಬುದ್ಧ, ಸಾಮಾಜಿಕ ಕ್ರಾಂತಿ ಮುಖೇನ ಬಸವಣ್ಣ, ಸಂವಿಧಾನದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜದ ಬದಲಾವಣೆಗೆ ಹೋರಾಟ ಮಾಡಿದ್ದರು. ಅವರ ಮುಂದುವರಿದ ಭಾಗವಾಗಿ ಸಮ್ಮೇಳನದ ಮೂಲಕ ಮೌಢ್ಯ, ಕಂದಾಚಾರದ ಕತ್ತಲಲ್ಲಿ ಇರುವವರನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ರಾಜ್ಯದಲ್ಲಿ ಮೌಢ್ಯ, ಕಂದಾಚಾರ ನಿಲ್ಲುತ್ತಿಲ್ಲ. ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹುಲಿಕಲ್ ಅವರ ತಂಡಕ್ಕೆ ಸಹಕಾರ ಮಾಡಬೇಕಿದೆ. ಧರ್ಮ, ಜಾತಿಯ ಹೆಸರಿನಲ್ಲಿ ಲಾಭ ಮಾಡಿಕೊಂಡು, ನಾನಾ ಬಗೆಯ ಭಯವನ್ನು ಹುಟ್ಟಿಸುತ್ತಿದ್ದಾರೆ. ಎಷ್ಟೊ ಜನರು ಭಯದಿಂದ ತಮ್ಮ ಗ್ರಾಮಗಳನ್ನೇ ತೊರಿದಿದ್ದಾರೆ. ಇಂತಹ ಮೌಢ್ಯದ ಅಂಧಕಾರವನ್ನು ತ್ಯಜಿಸಿ ತಂತ್ರಜ್ಞಾನದ ಮಾರ್ಗದಲ್ಲಿ ಸಾಗಬೇಕು’ ಎಂದು ಹೇಳಿದರು.

ವಿಜ್ಞಾನ ವಸ್ತು ಪ್ರದರ್ಶನ ಮಳಿಗೆ, ಸಂಚಾರಿ ಡಿಜಿಟಲ್ ತಾರಾಲಯ ವೀಕ್ಷಣೆಗೆ ಚಾಲನೆ ಕೊಡಲಾಯಿತು. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅವರ ಆರು ಸಂಪುಟ ಪುಸ್ತಕಗಳು, ವಿಜ್ಞಾನ ಗಿರಿ ಸ್ಮರಣ ಸಂಚಿಕೆ, ಕ್ಯಾಲೆಂಡರ್, ದಿನಚರಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಚಿಗರಹಳ್ಳಿಯ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣಗೋಪಾಲ ನಾಯಕ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಪರಿಷತ್ತು ಜಿಲ್ಲಾ ಅಧ್ಯಕ್ಷ ಗುಂಡಪ್ಪ ಕಲಬುರಗಿ, ಡಿಡಿಪಿಐ ಚನ್ನಬಸಪ್ಪ ಮುಧೋಳ, ಮುಖಂಡರಾದ ಎ.ಸಿ. ಕಾಡ್ಲೂರು, ಭೀಮಣ್ಣ ಮೇಟಿ, ಹನುಮೇಗೌಡ ಬಿರನಕಲ್, ಮಹೇಶರೆಡ್ಡಿ ಮುದ್ನಾಳ, ಚಿಕ್ಕಹನುಮಂತೇಗೌಡ, ಎಸ್.ಕೆ. ಉಮೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮಾನವ ಬಂಧುತ್ವ ವೇದಿಕೆ, ಇಸ್ರೊ, ಜವಾಹರಲಾಲ್ ನೆಹರೂ ತಾರಾಲಯ, ವಾಯು ಪಡೆ, ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ಮ್ಯೂಸಿಯಂ, ಮೊಬೈಲ್ ಪ್ಲಾನಿಟೊರಿಯಂ, ಕೆ.ಸ್ಪೆಪ್ಸ್, ನ್ಯಾಷನಲ್ ಏರೊನಾಟಿಕ್ಸ್ ಲ್ಯಾಬೋರೇಟರಿ ಮತ್ತು ಡಿಆರ್‌ಡಿಒ, ಮೈಸೂರಿನ ಸಿಎಫ್‌ಟಿಆರ್‌ಐ ಸಹಕಾರ ನೀಡಿವೆ.

ಯಾದಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಂಚಾರಿ ಡಿಜಿಟಿಲ್ ತಾರಾಲಯ ವೀಕ್ಷಿಸಿಲು ಸೇರಿದ ವಿದ್ಯಾರ್ಥಿಗಳು

‘ಕಲ್ಯಾಣದ ತುಂಬ ಅಂಧಕಾರ’ ‘ನಮ್ಮ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯುತ್ತೇವೆ. ಆದರೆ ಕಲ್ಯಾಣ ಕರ್ನಾಟಕದ ತುಂಬ ಅಂಧಕಾರ ಆವರಿಸಿಕೊಂಡಿದೆ. ನಿತ್ಯದ ಜೀವನದಲ್ಲಿ ವಾರ ತಿಥಿಗಳೇ ತುಂಬಿ ನಾರುತ್ತಿವೆ. ಅವುಗಳಿಂದ ಹೊರ ಬರಬೇಕಿದೆ’ ಎಂದು ಸಮ್ಮೇಳನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು. ‘ಹರಿಕತೆಗಳನ್ನು ಕೇಳಿ ಮಂದಿರ ಮಸೀದಿ ಚರ್ಚ್‌ಗಳಿಗೆ ಹೋಗುವುದರಿಂದ ನಮಗೆ ಯಾವುದೇ ಲಾಭವಿಲ್ಲ. ಅಲ್ಲಿಗೆ ಹೋಗುವ ಬದಲು ಶಾಲೆಗೆ ಹೋಗಬೇಕಿದೆ. ಒಳಗಣ್ಣು ತೆರೆದು ಸಮಾಜವನ್ನು ಗ್ರಹಿಸಬೇಕು. ವಿಚಾರ ಮತ್ತು ವಿಜ್ಞಾನ ಜತೆಗೆ ಹೋಗದಿದ್ದರೆ ಬದುಕು ನರಕವಾಗುತ್ತದೆ’ ಎಂದರು. ‘ದೇವರು ಮತ್ತು ಧರ್ಮದ ಬಗ್ಗೆ ನಮ್ಮಲ್ಲಿ ಸ್ಪಷ್ಟವಾದ ಪರಿಕಲ್ಪನೆ ಇಲ್ಲ. ಮನುಷ್ಯತ್ವಕ್ಕೆ ಒಳಿತಾಗಬೇಕು ಎಂಬುದು ಎಲ್ಲ ಧರ್ಮಗಳ ಮೂಲವಾಗಿದೆ. ಆದರೆ ನಮ್ಮಲ್ಲಿ ಒಳಿತನ ಆಲೋಚನೆಗಳು ಇಲ್ಲದೆ ಇರುವುದು ದುರಂತ’ ಎಂದು ಹೇಳಿದರು.

ಯಾರು ಏನೆಂದರು? ರಾಜ್ಯದ ಎಲ್ಲ ಮಕ್ಕಳಿಗೆ ವಿಜ್ಞಾನದ ವಿಚಾರಗಳನ್ನು ತಲುಪಿಸುವುದು ಅವಶ್ಯವಿದೆ.‌ ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಂದ ಹಿರಿಯರವರೆಗೆ ತಿಳಿಸುವಂತಹ ಕಾರ್ಯವಾಗಬೇಕಿದೆ –ಡಾ.ಎ.ಎಸ್. ಕಿರಣ್‌ಕುಮಾರ್ ವಿಜ್ಞಾನಿ   ಅಂಧ ನಂಬಿಕೆಗಳನ್ನು ಒಂದೇ ಬಾರಿ ಅಳಿಸಿ ಹಾಕುವುದು ಕಷ್ಟ. ವೈಜ್ಞಾನಿಕ ಚಿಂತನೆ ಜಾಗೃತಿ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲಬಹುವುದು –ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ ಗುರುಮಠಕಲ್‌ನ ಖಾಸಾಮಠ ಮೌಢ್ಯತೆ ಹೆಚ್ಚಿರುವ ಯಾದಗಿರಿಯಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ಸರ್ಕಾರವು ಬಜೆಟ್‌ನಲ್ಲಿ ಒಂದಿಷ್ಟು ಅನುದಾನವನ್ನು ಸಮ್ಮೇಳನಕ್ಕೆ ಮೀಸಲಿಡಬೇಕು –ಹುಲಿಕಲ್ ನಟರಾಜ್ ‌ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.