ಸುರಪುರ: ‘ಶಿಕ್ಷಣಕ್ಕಾಗಿ ನೀಡುವ ದಾನ ಸರ್ವಶ್ರೇಷ್ಠ. ಉಳ್ಳವರು ತಮ್ಮ ಗಳಿಕೆಯ ಅಲ್ಪ ಹಣವನ್ನಾದರೂ ವಿದ್ಯೆಗೆ ದೇಣಿಗೆ ನೀಡಬೇಕು. ಅದರಿಂದ ಸಿಗುವ ಸಂತೃಪ್ತಿಗೆ ಮಿತಿಯಿಲ್ಲ’ ಎಂದು ದಾನಿ ಡಾ.ಸತ್ಯನಾರಾಯಣ ಅಲದರ್ತಿ ಹೇಳಿದರು.
ತಾಲ್ಲೂಕಿನ ದೇವಿಕೇರಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಈ ಶಾಲೆಯ ಮಕ್ಕಳು ಚೆನ್ನಾಗಿ ಅಭ್ಯಸಿಸಿ ಐಎಎಸ್, ಎಂಜಿನಿಯರ್, ವೈದ್ಯರಾಗಬೇಕು. ಅದುವೇ ನೀವು ನನಗೆ ನೀಡುವ ಉಡುಗೊರೆ. ದೇವರು ನಿಮಗೆ ಉಜ್ವಲ ಭವಿಷ್ಯ ನೀಡಲಿ’ ಎಂದು ಹಾರೈಸಿದರು.
ವಕೀಲ ಹಣಮಂತ ಗೋಗಿ ಮಾತನಾಡಿ, ‘ವೈದ್ಯರಾಗಿ ಅಮೋಘ ಸೇವೆ ಸಲ್ಲಿಸಿರುವ ಡಾ.ಸತ್ಯನಾರಾಯಣ ಅಲದರ್ತಿ ತಮ್ಮ ಬೆಲೆ ಬಾಳುವ 1 ಎಕರೆ 8 ಗುಂಟೆ ಜಮೀನನ್ನು ಶಾಲೆಗೆ ದೇಣಿಗೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿದ್ದಾರೆ. ಗ್ರಾಮ ಅವರ ಹೆಸರನ್ನು ಚಿರಸ್ಥಾಯಿಯಾಗಿ ಸ್ಮರಿಸುತ್ತದೆ’ ಎಂದರು.
ಸತ್ಯನಾರಾಯಣ ದಂಪತಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಗ್ರಾಮಸ್ಥರು 100 ಗ್ರಾಂ ಚಿನ್ನವನ್ನು ನೀಡಿ ಸನ್ಮಾನಿಸಿದರು.
ಶಾಂತಮೂರ್ತಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮಲ್ಕಪ್ಪ ಯಾದವ ನಿರೂಪಿಸಿದರು. ರಾಜು ಅಜ್ಜಕೊಲ್ಲಿ ವಂದಿಸಿದರು.
ಗ್ರಾಮದ ಮುಖಂಡರಾದ ಸಾಹೇಬಗೌಡ ಮಾಲಿಪಾಟೀಲ, ತಿಮ್ಮಣ್ಣ ಪುಜಾರಿ, ನಾಗಪ್ಪ ಪತ್ತಾರ, ತಿಮ್ಮಣ್ಣ ಆಡಿನ್, ಸಾಯಬಣ್ಣ ದೊರೆ, ಹಣಮಂತ ರಸ್ತಾಪುರ, ಮಹಾದೇವ ಗಡ್ಡದರ ನಾಗರಾಜ ಸಜ್ಜನ, ದ್ಯಾವಪ್ಪ ವೈ., ಹಣಮಂತ ತಳವಾರ, ಯಂಕಪ್ಪ ಹೊಸಮನಿ, ಹಣಮಂತ ಬಿಲ್ಲವ, ಅಮರೇಶ ಸಾಲಕ್ಕಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.