ADVERTISEMENT

ಹೆಗಲ ಮೇಲೆ ನೀರು ಹೊತ್ತು ಗಿಡ ಬೆಳೆಸಿದ ಭಗೀರಥ: ಮೋಸಂಬಿ ಕೃಷಿಯಲ್ಲಿ ಯಶಸ್ಸು

ಸುರಪುರದ ತಿಪ್ಪನಟಗಿ ಗ್ರಾಮದ ರೈತ ಮಲ್ಲಣ್ಣ 

ಅಶೋಕ ಸಾಲವಾಡಗಿ
Published 11 ಫೆಬ್ರುವರಿ 2026, 7:05 IST
Last Updated 11 ಫೆಬ್ರುವರಿ 2026, 7:05 IST
ಸುರಪುರ ತಾಲ್ಲೂಕಿನ ತಿಪ್ಪನಟಗಿ ಗ್ರಾಮದ ತಮ್ಮ ಮೋಸಂಬಿ ತೋಟದಲ್ಲಿ ರೈತ ಮಲ್ಲಣ್ಣ
ಸುರಪುರ ತಾಲ್ಲೂಕಿನ ತಿಪ್ಪನಟಗಿ ಗ್ರಾಮದ ತಮ್ಮ ಮೋಸಂಬಿ ತೋಟದಲ್ಲಿ ರೈತ ಮಲ್ಲಣ್ಣ   

ಸುರಪುರ: ವನದುರ್ಗ ರಸ್ತೆಯ ಪಕ್ಕದಲ್ಲಿ ಇರುವ ತಾಲ್ಲೂಕಿನ ತಿಪ್ಪನಟಗಿ ಗ್ರಾಮದ ಮಲ್ಲಣ್ಣ ಹಣಮಂತ್ರಾಯ ಮಾವಿನಮಟ್ಟಿ ಅವರ ಹೊಲ ಸಮೃದ್ಧ ಮೋಸಂಬಿ ಬೆಳೆಯಿಂದ ಕಂಗೊಳಿಸುತ್ತಿದೆ. ಪತ್ನಿ 5 ಮಕ್ಕಳ ತುಂಬು ಕುಟುಂಬಕ್ಕೆ ಕೇವಲ ಎರಡುವರೆ ಎಕರೆ ಜಮೀನು ಆಸರೆ.

ನೀರಿಲ್ಲದಿದ್ದರೂ ಕಷ್ಟಪಟ್ಟು ಹತ್ತಿ, ಜೋಳ, ಶೇಂಗಾ ಬೆಳೆಯುತ್ತಿದ್ದರು. ಮೂರು ವರ್ಷಗಳ ಹಿಂದೆ ಮೋಸಂಬಿ ಕೃಷಿ ಕೈಗೊಂಡಿದ್ದಾರೆ. ದುಡಿತದ ಪ್ರತಿಫಲವಾಗಿ ಗಿಡಗಳು ಹುಲುಸಾಗಿ ಬೆಳೆದಿವೆ. ಮೋಸಂಬಿ ಕಾಯಿಗಳು ಜೋತಾಡುತ್ತಿದ್ದು ಎಲ್ಲರನ್ನೂ ಆಕರ್ಷಿಸುತ್ತಿವೆ.

ಪ್ರತಿ ಗಿಡಕ್ಕೆ 16 ಚದರಡಿ ಅಂತರದಲ್ಲಿ ಒಂದುವರೆ ಎಕರೆಯಲ್ಲಿ 250 ‘ರಂಗಪುರ ತಳಿ’ ಯ ಮೋಸಂಬಿ ಬೆಳೆದಿದ್ದಾರೆ. ಒಂದೊಂದು ಗಿಡಕ್ಕೆ 50 ರಿಂದ 100 ಕಾಯಿಗಳು ಬಿಟ್ಟಿವೆ. 150ರಿಂದ 200 ಗ್ರಾಂ ವರೆಗೂ ತೂಗುತ್ತವೆ. 30 ಟನ್ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ದರ ₹ 4 ಸಾವಿರದಿಂದ ₹ 5 ಸಾವಿರದವರೆಗೆ ಇದೆ. ಒಟ್ಟು ₹ 1.5 ಲಕ್ಷ ಆದಾಯ ಬರಬಹುದು.‌

ADVERTISEMENT

ಫೆಬ್ರುವರಿ ಮತ್ತು ಜುಲೈ ತಿಂಗಳಲ್ಲಿ ಫಸಲು ತೆಗೆಯಲಾಗುತ್ತದೆ. ಹೈದರಾಬಾದ್ ಮತ್ತು ನಾಗಪುರದಲ್ಲಿ ಮಾರುಕಟ್ಟೆ ಇದೆ. ತಕ್ಷಣವೇ ಹಣ ಪಾವತಿಯಾಗುತ್ತದೆ. ಸ್ಥಳೀಯವಾಗಿಯೂ ಮಾರಾಟ ಮಾಡಬಹುದು.
ಕಳೆದ ಮೂರು ವರ್ಷಗಳಿಂದ ಗಿಡಗಳ ಮಧ್ಯೆ ಹತ್ತಿ, ಶೇಂಗಾ ಬೆಳೆದು ಲಾಭ ಮಾಡಿಕೊಂಡಿದ್ದಾರೆ. ಮೋಸಂಬಿ ಗಿಡಗಳ ಜೊತೆಗೆ 5 ಗಜನಿಂಬೆ, 4 ನೆಲ್ಲಿಕಾಯಿ, 100 ಸೀಬೆ, 20 ತೆಂಗಿನಗಿಡ ಬೆಳೆದು ಮಿಶ್ರ ಬೇಸಾಯ ಅನುಸರಿಸುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳು ರೈತನಿಗೆ ಕೃಷಿ ಕಾರ್ಯದಲ್ಲಿ ಸಾಥ್ ನೀಡುತ್ತಾರೆ.

ಹುಲುಸಾಗಿ ಬೆಳೆದ ಮೋಸಂಬಿ
ಮಲ್ಲಣ್ಣ ಮೋಸಂಬಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಅವರಿಗೆ ಇಲಾಖೆಯಿಂದ ಸಹಾಯಧನದಲ್ಲಿ ಹನಿ ನೀರಾವರಿ ಮತ್ತು ಪಾಲಿಹೌಸ್ ಒದಗಿಸಲಾಗುವುದು
ಸಂತೋಶ ಶೇಷುಲು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು
ಮೋಸಂಬಿ ಕೃಷಿ ಲಾಭದಾಯಕ ನಿರ್ವಹಣೆ ವೆಚ್ಚ ತುಂಬಾ ಕಡಿಮೆ. ಒಳ್ಳೆಯ ಮಾರುಕಟ್ಟೆ ಇದೆ. ಮೂರು ವರ್ಷಕ್ಕೆ ಫಸಲು ಆರಂಭಿವಾಗುತ್ತದೆ. 30 ವರ್ಷ ಗಿಡದ ಬಾಳಿಕೆ
ಹಣಮಂತ ತಮಿನೇನಿ ಪ್ರಗತಿಪರ ರೈತ

ಹೆಗಲ ಮೇಲೆ ನೀರು ಹೊತ್ತ ಭಗೀರಥ

ಮಳೆ ಆಶ್ರಿತ ಜಮೀನಿನಲ್ಲಿ ಮೋಸಂಬಿ ಗಿಡ ಹಚ್ಚಿದಾಗ ಮೂಗು ಮುರಿದವರೆ ಹೆಚ್ಚು. ನೀರಿಲ್ಲದೆ ಗಿಡಗಳು ಹೇಗೆ ಬೆಳೆಯುತ್ತವೆಂದು ಪಕ್ಕದ ರೈತರು ವ್ಯಂಗವಾಡಿದರು. ಅನತಿ ದೂರದಲ್ಲಿ ಇದ್ದ ನೀರಿನ ಗುಂಡಿಯಿಂದ ಪತಿ ಪತ್ನಿ ಇಬ್ಬರು ದಿನವಿಡೀ ನೀರು ಹೊತ್ತು ಗಿಡಗಳನ್ನು ಮಕ್ಕಳಂತೆ ಸಾಕಿದರು. ಎಲ್ಲ 250 ಗಿಡಗಳು ಉಳಿದುಕೊಂಡವು. ತೋಟಗಾರಿಕೆ ಇಲಾಖೆಯವರು ನರೇಗಾ ಯೋಜನೆಯಲ್ಲಿ ಜಮೀನಿನಲ್ಲಿ ಕೆಲಸ ನೀಡಿದರು. ಅದರಲ್ಲಿ ಹಣ ಉಳಿಸಿಕೊಂಡು ಬೋರವೆಲ್ ಕೊರೆಸಿದ್ದಾರೆ.

ಮೋಸಂಬಿ ಕೃಷಿ ಕಾರಣವಾದ ನೆಂಟಸ್ತನ

  ಈ ಭಾಗದಲ್ಲಿ ಮೋಸಂಬಿ ಕೃಷಿ ಇಲ್ಲ. ಅನಂತಪುರ ಜಿಲ್ಲೆಯ ಕಡಪ ನಲಗೊಂಡ ಪ್ರದೇಶಗಳಲ್ಲಿ ಮತ್ತು ನಾಗಪುರದಲ್ಲಿ ಮೋಸಂಬಿ ಬೆಳೆಯಲಾಗುತ್ತದೆ. ಅನಂತಪುರ ಸೀಮಾಂತರದ ರೈತರಿಗೆ ಸುರಪುರದ ಹಲವು ವಧುಗಳ ನೆಂಟಸ್ತನವಾಗಿದೆ. ಹಣಮಂತ ತಮಿನೇನಿ ಎಂಬ ಪ್ರಗತಿಪರ ರೈತನಿಗೆ ಮಲ್ಲಣ್ಣ ಸುರಪುರದ ಬಿಚ್ಚಗತ್ತಕೇರಿ ಬಡಾವಣೆಯ ವಧುವಿನೊಂದಿಗೆ ಮದುವೆ ಮಾಡಿಸಿದರು. ಹಣಮಂತ ತಮಿನೇನಿ ಅವರ ಮಾರ್ಗದರ್ಶನದಲ್ಲಿ ಮಲ್ಲಣ್ಣ ಮೋಸಂಬಿ ಕೃಷಿ ಮಾಡುವಂತಾಯಿತು. ಜಿಲ್ಲೆಯ ಮೊದಲ ಮೋಸಂಬಿ ಬೆಳೆಗಾರ ಎಂಬ ಖ್ಯಾತಿಗೂ ಪಾತ್ರರಾಗುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.