ADVERTISEMENT

ಬಡತನದಲ್ಲಿ ಅರಳಿದ ಜನಪದ ಪ್ರತಿಭೆ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಣಮಂತ ಈರಗೋಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:57 IST
Last Updated 24 ಡಿಸೆಂಬರ್ 2025, 5:57 IST
ಹಣಮಂತ ಈರಗೋಟ
ಹಣಮಂತ ಈರಗೋಟ   

ಸುರಪುರ: ನಗರಸಭೆ ವ್ಯಾಪ್ತಿಯ ನಗರಸಿಂಗನಪೇಟೆ ಬಡಾವಣೆಯ ಹಣಮಂತ ತಿಮ್ಮಯ್ಯ ಈರಗೋಟ ಎಂಬ ಅದ್ವಿತೀಯ ಜನಪದ ಕಲಾವಿದರಿಗೆ 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಹಣಮಂತ ತಮ್ಮ ಇಡೀ ಜೀವನವನ್ನು ಭಜನೆ, ಮೊಹರಂ, ಗೀಗಿಪದ, ಬಯಲಾಟ, ಪೌರಾಣಿಕ ನಾಟಗಳಲ್ಲಿ ಅಭಿನಯಕ್ಕೆ ಮೀಸಲಿಟ್ಟಿದ್ದಾರೆ. ಅವರಿಗೆ ಆಗಿನ್ನೂ ಮಾತು ಬಾರದ ವಯಸ್ಸು. ತಮ್ಮ ಮನೆಯ ಹತ್ತಿರದ ಹನುಮಂತ ದೇವರ ಗುಡಿಯಲ್ಲಿ ನಿತ್ಯ ನಡೆಯುತ್ತಿದ್ದ ಭಜನೆ ನೋಡಲು ಹೋಗುತ್ತಿದ್ದರು.

ಎರಡು ಮೂರು ತಾಸು ಅಲ್ಲಿಯೇ ಕಳೆಯುತ್ತಿದ್ದರು. ಮನೆಯವರು ಹುಡುಕತೊಡಗಿದಾಗ ಪಕ್ಕದವರು ನಿಮ್ಮ ಹುಡುಗ ಎಲ್ಲಿ ಹೋಗುತ್ತಾನೆ ಭಜನೆ ಕೇಳಲು ಗುಡಿಗೆ ಹೋಗಿರುತ್ತಾನೆ ಬಿಡಿ ಎಂದು ಸಮಾಧಾನ ಪಡಿಸುತ್ತಿದ್ದರು.

ADVERTISEMENT

ಮಾತು ಬರಲು ಆರಂಭಿಸಿದ ಮೇಲೆ ಭಜನೆ ಹಾಡನ್ನೂ ಹಾಡಲು ಹಣಮಂತ ಪ್ರಾರಂಭಿಸಿದರು. ಯೌವ್ವನಕ್ಕೆ ಬಂದಾಗ ಓದು ರುಚಿಸಲಿಲ್ಲ. ಕೃಷಿ ಕೆಲಸಕ್ಕೆ ಹೋಗಲಿಲ್ಲ. ಭಜನೆಯಲ್ಲಿದ್ದ ಆಸಕ್ತಿ ನೋಡಿ ಭೀಮಣ್ಣ ಸಾಧು ಎಂಬುವುವರು ಭಜನೆ, ದೇವರ ಹಾಡುಗಳು ಹಾಡುವುದನ್ನು ಕಲಿಸಿಕೊಟ್ಟರು. ಹಣಮಂತ ಜೊತೆಗೆ ಹಾರ್ಮೋನಿಯಂ, ತಬಲಾ, ಡೋಲಕ್, ತಾಳ ಬಾರಿಸುವುದರಲ್ಲೂ ಪರಿಣತಿ ಪಡೆದರು.

ಕ್ರಮೇಣ ಮೊಹರಂ ಪದಗಳು, ಮೊಹರಂ ಹೆಜ್ಜೆ ಕುಣಿತ, ಗೀಗಿ ಪದ ಹಾಡುವುದನ್ನು ಕರಗತ ಮಾಡಿಕೊಂಡರು. ಕೆಲ ವರ್ಷಗಳಲ್ಲಿ ಇವರ ಖ್ಯಾತಿ ಸುತ್ತಮುತ್ತಲೂ ಹರಡಿತು. ಪಕ್ಕದ ಊರುಗಳ ಜನರು ಶ್ರಾವಣ ಮಾಸ, ಖಾಂಡ, ಇತರ ಕಾರ್ಯಕ್ರಮಗಳಿಗೆ ಭಜನೆ ಮಾಡಲು ಆಹ್ವಾನ ನೀಡತೊಡಗಿದರು. ಬಯಲಾಟ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವುದರಲ್ಲೂ ಎತ್ತಿದ ಕೈ. ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ರಂಜಿಸುವುದನ್ನು ಸಿದ್ಧಹಸ್ತ ಮಾಡಿಕೊಂಡರು.

ನೂರಾರು ಭಜನೆ ಪದಗಳನ್ನು ಹಾಡುವ ಹಣಮಂತ ಧ್ವನಿಯಲ್ಲಿ ಏರಿಳಿತ, ಮಾಡಿ ಪ್ರೇಕ್ಷಕರು ರೋಮಾಂಚನಗೊಳ್ಳುವಂತೆ ಮಾಡುತ್ತಾರೆ. ಹಣಮಂತ ಭಾಗವಹಿಸುವ ಭಜನೆ ಕೇಳಲು ಜನ ಆಸಕ್ತಿಯಿಂದ ಸೇರುತ್ತಾರೆ.

65ರ ಹರೆಯದ ಹಣಮಂತ ಅವರಿಗೆ ಜನಪದ ಬಿಟ್ಟು ಬೇರೆನೂ ಗೊತ್ತಿಲ್ಲ. ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರ ತುಂಬು ಸಂಸಾರ. ಜೀವಿಸಲು ಕೇವಲ ಒಂದೂವರೆ ಎಕರೆ ಹೊಲದ ಮೇಲೆ ಅವಲಂಬನೆ.

ಗಂಡು ಮಕ್ಕಳು ಐಟಿಐ ಮುಗಿಸಿದ್ದು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡತೊಡಗಿದ ಮೇಲೆ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಎಲ್ಲ ಮಕ್ಕಳ ಮದುವೆ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಜನಪದ ಬಿಟ್ಟಿಲ್ಲ.

ಪ್ರಶಸ್ತಿ ದೊರಕಿದ ಬಗ್ಗೆ ‘ಪ್ರಜಾವಾಣಿ’ ತಿಳಿಸುವ ತನಕ ಈ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಮುಗ್ಧ ವ್ಯಕ್ತಿತ್ವದ ಹಣಮಂತ ಎಂಬ ಅನನ್ಯ ಜನಪದ ಕಲಾವಿದರಿಗೆ ಇನ್ನಷ್ಟು ಪ್ರಶಸ್ತಿ ದೊರಕಲಿ ಎಂಬುದು ಗ್ರಾಮಸ್ಥರ ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.