
ಸುರಪುರ: ಸುರಪುರ ಏಳು ಸುತ್ತು ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದೆ. ಬೆಟ್ಟದ ತುಂಬೆಲ್ಲ ಸೀತಾಫಲ ಗಿಡಗಳು ನೈಸರ್ಗಿಕವಾಗಿ ಬೆಳೆದಿವೆ. ಉತ್ತಮ ಮಳೆಯಿಂದ ಈ ವರ್ಷ ಇಳುವರಿಯೂ ಭರ್ಜರಿಯಾಗಿ ಬಂದಿದೆ.
ಇಲ್ಲಿನ ಸೀತಾಫಲ ಮಧುರ ರುಚಿಗೆ ಪ್ರಸಿದ್ಧ. ದೊಡ್ಡ ಕಣ್ಣುಗಳಿಂದ ಕೂಡಿದ್ದು, ತಿರುಳು ಅಧಿಕವಾಗಿರುತ್ತದೆ. ಉಬ್ಬು ಉಬ್ಬಾಗಿರುವ ಹಸಿರು ಸಿಪ್ಪೆ, ಬಿಳಿ ತಿರುಳು ಮತ್ತು ಕಪ್ಪು ಬೀಜಗಳು ಇಲ್ಲಿನ ಹಣ್ಣಿನ ಖ್ಯಾತಿ ಹೆಚ್ಚಿಸಿವೆ. ನೆರೆ ರಾಜ್ಯಗಳಿಗೂ ಈ ಹಣ್ಣು ರವಾನೆಯಾಗುತ್ತದೆ.
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿಂದ ಡಿಸೆಂಬರ್‌ವರೆಗೆ ಇಳುವರಿ ಇರುತ್ತದೆ. ಈ ಬಾರಿ ಬೆಲೆ ಜಾಸ್ತಿ. ಮಾಗಿದ ಕಾಯಿ ತುಂಬಿದ ಒಂದು ಗಂಟಿಗೆ ₹ 600 ರಿಂದ ₹ 1,000 ವರೆಗಿದೆ. ಒಂದು ಹಣ್ಣು ₹10 ರಿಂದ ₹ 20 ವರೆಗೂ ಬಿಕರಿಯಾಗುತ್ತಿದೆ. ಖರೀದಿಯಲ್ಲಿ ಜನರ ಉತ್ಸಾಹ ಕುಗ್ಗಿಲ್ಲ.
ಅರಣ್ಯ ಇಲಾಖೆಯ ಸುಪರ್ದಿಗೆ ಸೀತಾಫಲ ಬರುತ್ತದೆ. ನೈಸರ್ಗಿಕ ಬೆಳೆಯಾದ ಇದಕ್ಕೆ ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸುವುದಿಲ್ಲ. ಹೀಗಾಗಿ ತಿನ್ನಲು ಭಯವಿಲ್ಲ. ಅರಣ್ಯ ಇಲಾಖೆ ಪ್ರತಿ ಎರಡು ವರ್ಷಕ್ಕೆ ಒಮ್ಮೆ ಟೆಂಡರ್ ನಡೆಸುತ್ತದೆ. ಈ ವರ್ಷ ₹ 5 ಲಕ್ಷಕ್ಕೂ ಹೆಚ್ಚಿಗೆ ಸಗಟು ಮಾರಾಟಗಾರರು ಟೆಂಡರ್ ಪಡೆದಿದ್ದಾರೆ.
ನಗರದ ಜನನಿಬಿಡ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ತಲೆ ಮೇಲೆ ಹೊತ್ತು ಮನೆ ಮನೆಗೂ ಬಿಕರಿ ಮಾಡುತ್ತಾರೆ. ಮೂರು ತಿಂಗಳುಗಳ ಕಾಲ ಈ ಹಣ್ಣು ಬೀದಿಬದಿ ವರ್ತಕರ, ಸಗಟು ಮಾರಾಟಗಾರರ ಹೊಟ್ಟೆ ತುಂಬಿಸುತ್ತದೆ.
ಈ ವರ್ಷ ಇಳುವರಿ ಚೆನ್ನಾಗಿ ಬಂದಿದೆ. ಲಕ್ಷಾಂತರ ಹಣ ಕೊಟ್ಟು ಟೆಂಡರ್ ಹಿಡಿದಿದ್ದೇವೆ. ಬೆಳಿಗ್ಗೆ ವಾಯುವಿಹಾರಕ್ಕೆ ಬರುವವರು ಮಕ್ಕಳು ಹಣ್ಣು ಹರಿದುಕೊಂಡು ಹೋಗುತ್ತಾರೆ. ಗಿಡಗಳನ್ನು ಕಾಯುವುದು ದೊಡ್ಡ ಕೆಲಸವಾಗಿದೆಹಣಮಂತ ಡೊಣ್ಣಿಗೇರಿ ಸಗಟು ವರ್ತಕ
ಪ್ರತಿ ವರ್ಷ ನಾವು ಸಾಕಷ್ಟು ಸೀತಾಫಲ ಖರೀದಿಸುತ್ತೇವೆ. ನಮ್ಮ ನೆಂಟರಿಗೂ ಕಳಿಸುತ್ತೇವೆ. ಇಲ್ಲಿಯ ಸೀತಾಫಲ ರುಚಿ ಮತ್ತು ಗುಣಮಟ್ಟದಲ್ಲಿಉತ್ಕೃಷ್ಟತೆ ಹೊಂದಿದೆ ಕೆ.ಟಿ. ಜೋಶಿ ಗ್ರಾಹಕ
ಸ್ಕ್ಯಾಮೋಸಾ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಸೀತಾಫಲದ ಮೂಲ ವೆಸ್ಟ್ ಇಂಡೀಸ್. ಕಡಿಮೆ ಕ್ಯಾಲೋರಿ ಹೊಂದಿದೆ. ವಿಟಾಮಿನ್ ಪ್ರೋಟಿನ್ ಮಿನರಲ್ಸ್ ಸೋಡಿಯಂ ಪೊಟ್ಯಾಶ್ ಮ್ಯಾಂಗ್‍ನೀಸ್‍ಗಳಿಂದ ಸಮೃದ್ಧವಾಗಿದೆ. ಸೀತ ನೆಗಡಿ ಬರುವುದಿಲ್ಲ. ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ತೂಕ ಹೆಚ್ಚಳ ಅಗುವುದಿಲ್ಲ. ಕಾಯಿಗಳನ್ನು ಗೋಣಿ ಚೀಲದಲ್ಲಿ ಇಟ್ಟರೆ ಎರಡು ದಿನದಲ್ಲಿ ಮಾಗುತ್ತವೆ. ಗಿಡದಲ್ಲಿ ಬಿಡುವ ಹಣ್ಣು ಬಲು ಸ್ವಾದಿಷ್ಟ.
ಶ್ರೀರಾಮ ವನವಾಸದ ಸಮಯದಲ್ಲಿ ಒಮ್ಮೆ ಈ ಭಾಗಕ್ಕೆ ಬರುತ್ತಾನೆ. ನಡೆದು ನಡೆದು ಸುಸ್ತಾಗಿ ಬೆಟ್ಟದ ಗಿಡದ ಕೆಳಗೆ ವಿರಮಿಸುತ್ತಾನೆ. ಹಸಿವಾಗುತ್ತದೆ. ಅನತಿ ದೂರದಲ್ಲಿದ್ದ ಗಿಡದಲ್ಲಿ ಸುಂದರ ಹಣ್ಣುಗಳ ನೇತಾಡುತ್ತಿರುತ್ತವೆ. ಸೀತೆ ಆ ಹಣ್ಣುಗಳನ್ನು ತಂದು ಪತಿಗೆ ಕೊಡುತ್ತಾಳೆ. ಹಣ್ಣಿನ ಸ್ವಾದಿಷ್ಟ ರುಚಿಗೆ ಮಾರುಹೋದ ಶ್ರೀರಾಮ ಹಣ್ಣಿಗೆ ‘ಸೀತಾಫಲ’ ಎಂಬ ಅಭಿದಾನ ನೀಡುತ್ತಾನೆ.
ಇಡೀ ಬೆಟ್ಟಗುಡ್ಡಗಳಿಗೆ ಪಸರಿಸಲು ಅಳಿಲುಗಳ ಕೊಡುಗೆ ಇದೆ. ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಅಳಿಲುಗಳ ಸಂತತಿ ವ್ಯಾಪಕವಾಗಿದೆ. ಹಣ್ಣುಗಳನ್ನು ತಿನ್ನುವ ಅಳಿಲು ಬೀಜಗಳನ್ನು ಎಲ್ಲೆಡೆ ಪಸರಿಸುತ್ತವೆ. ಆ ಬೀಜಗಳು ಅಂಕುರಗೊಂಡು ಮಳೆಗಾಲದಲ್ಲಿ ಬೆಳೆಯುತ್ತವೆ. ಹೀಗೆ ಈ ಇಡೀ ಬೆಟ್ಟ ಪ್ರದೇಶದಲ್ಲಿ ಅಳಿಲುಗಳು ಸೀತಾಫಲದ ಅಭಿವೃದ್ಧಿಗೆ ಕಾರಣವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.