ADVERTISEMENT

ಸುರಪುರ | ‘ಇಲಾಖೆ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ’

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:14 IST
Last Updated 18 ಜುಲೈ 2025, 6:14 IST
ಸುರಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು
ಸುರಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು   

ಸುರಪುರ: ‘ಯಾವುದೇ ಇಲಾಖೆಗಳಲ್ಲಿ ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದರೆ ಅದನ್ನು ಇತ್ಯರ್ಥಪಡಿಸಲಾಗುವುದು. ಅನುದಾನದ ಕೊರತೆ ಇದ್ದಲ್ಲಿ ತಿಳಿಸಿದರೆ ಮಂಜೂರು ಮಾಡಿಸಿ ಕೊಡಲಾಗುವುದು. ಸಿಬ್ಬಂದಿ ಕೊರತೆಗೆ ಭರ್ತಿಗೆ ಕ್ರಮಕೈಗೊಳ್ಳಲಾಗುವುದು. ಪ್ರತಿಯೊಂದು ಕೆಲಸ, ಕಾಮಗಾರಿಗಳು ಜನತೆಗೆ ಮುಟ್ಟುವ ನಿಟ್ಟಿನಲ್ಲಿ ಸೇವೆ ನೀಡಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿಯೊಂದು ಇಲಾಖೆಯ ಕಾಮಗಾರಿಗಳು, ಯೋಜನೆಗಳು ಸಮರ್ಪಕವಾಗಿರಬೇಕು. ಆಯಾ ಇಲಾಖೆ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ADVERTISEMENT

ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕರು, ಸಂಬಂಧಿಸಿದ ಇಲಾಖೆ ಅನುಷ್ಠಾನಾಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.

‘11 ಮಾರಕ ರೋಗಗಳಿಗೆ ಲಸೀಕಾಕರಣ ಗುರಿ ಸಾಧಿಸಲಾಗಿದೆ. ಯಾವ ಮಕ್ಕಳೂ ವಂಚಿತರಾಗದಂತೆ ಕ್ರಮಕೈಗೊಳ್ಳಲಾಗಿದೆ. ಶೇ 99ರಷ್ಟು ವಾಕ್ಸಿನೇಷನ್ ಮಾಡಲಾಗಿದೆ. 4 ಕುಷ್ಠರೋಗದ, 31-ಹಾವು ಕಡಿತ, 857 ನಾಯಿ ಕಡಿತ ಪ್ರಕರಣಗಳಿವೆ. ಆರೋಗ್ಯ ಕೇಂದ್ರಗಳಲ್ಲಿ ರೇಬಿಸ್‌ ವ್ಯಾಕ್ಸಿನ್ ವ್ಯವಸ್ಥೆ ಇರುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಮ್ಮ ಇಲಾಖೆಯ ಮಾಹಿತಿ ನೀಡಿದರು.

ಡೆಂಗಿ-4, ಚಿಕೂನ್‌ಗುನ್ಯಾ-2 ಪ್ರಕರಣಗಳು ಕಂಡುಬಂದಿದ್ದು ಚಿಕಿತ್ಸೆ ಒದಗಿಸಲಾಗಿದೆ. 2177 ಕ್ಷಯ ರೋಗಿಗಳಿದ್ದು ಉಚಿತ ಚಿಕಿತ್ಸೆ, ಔಷಧ ನೀಡಲಾಗಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗೃಹ ಆರೋಗ್ಯ ಕಾರ್ಯಕ್ರಮದಡಿಯಲ್ಲಿ 40 ತಂಡಗಳು ಮನೆ ಮನೆಗೆ ಭೇಟಿ ನೀಡಿ ಸಕ್ಕರೆ, ಬಿಪಿ, ಬಾಯಿ ಕ್ಯಾನ್ಸರ್, ಉಸಿರಾಟ ತೊಂದರೆ ಸೇರಿ 14 ರೋಗಗಳ ಬಗ್ಗೆ ತಪಾಸಣೆ ಮಾಡುತ್ತಿದ್ದಾರೆ. ನಿತ್ಯ 5 ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡುವರು. ಕೆಲ ಹೃದಯಾಘಾತ ಪ್ರಕರಣಗಳಲ್ಲಿ ಇಂಜೆಕ್ಷನ್‍ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ವಿವರಿಸಿದರು.

‘ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 65,312 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇ 75ರಷ್ಟು ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಹೆಸರು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಜುಲೈ ತಿಂಗಳು ಮಳೆ ಕೊರತೆ ಎದುರಿಸುತ್ತಿದೆ. ಪಿಎಂ ಕಿಸಾನ್ ಯೋಜನೆಯಡಿ 30,711 ಜನರಿಗೆ ಹಣ ಜಮೆಯಾಗುತ್ತಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ ತಿಳಿಸಿದರು.

‘ಕಳೆದ ಸಾಲಿಗೆ ಹೋಲಿಸಿದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವರ್ಷ ಚೇತರಿಕೆ ಕಂಡಿದೆ. 2204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 62 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ 906 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 45 ಶಾಲೆಗಳು ಶೂನ್ಯ ಶಿಕ್ಷಕರ ಶಾಲೆಗಳಾಗಿವೆ. ಅಂತಹ ಶಾಲೆಗಳಿಗೆ ಬೇರೆ ಕಡೆಯಿಂದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ಮಾತನಾಡಿದರು. ಟಿಎಚ್‍ಒ ಡಾ.ಆರ್.ವಿ.ನಾಯಕ, ಜೆಸ್ಕಾಂ ಇಇ ರಾಜಶೇಖರ ಬಿಳವಾರ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಜಿ.ಪಾಟೀಲ್, ಪಶು ಇಲಾಖೆ ಎಡಿ ಡಾ.ಸುರೇಶ್ ಹಚ್ಚಡ, ಕೃಷಿ ಇಲಾಖೆ ಎಡಿ ರಾಮನಗೌಡ ಮಾಲಿ ಪಾಟೀಲ್, ಬಿಇಒ ಯಲ್ಲಪ್ಪ ಕಾಡ್ಲೂರು, ಆಹಾರ ಇಲಾಖೆಯ ಶಿರಸ್ತೇದಾರ್ ಅವರುಗಳು ತಮ್ಮ ಇಲಾಖೆಗಳ ಪ್ರಗತಿ ನೀಡಿದರು. ತಹಸೀಲ್ದಾರ್ ಹೆಚ್.ಎ.ಸರಕಾವಸ್, ಹುಣಸಗಿ ತಾಪಂ ಇಒ ಬಸಣ್ಣ ನಾಯಕ ಭಾಗಿಯಾಗಿದ್ದರು. 

ಪ್ರಸೂತಿ ತಜ್ಞರ ನೇಮಕ  ‘ಸುರಪುರದ ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರ ನೇಮಕಾತಿಗೆ ಸದನದಲ್ಲಿ ನಾನು ಧ್ವನಿ ಎತ್ತಿದ್ದು ಸರ್ಕಾರ ನನ್ನ ಮನವಿಗೆ ಸ್ಪಂದಿಸಿ ತಕ್ಷಣವೇ ಆಸ್ಪತ್ರೆಗೆ ಪ್ರಸೂತಿ ತಜ್ಞರನ್ನು ಒದಗಿಸಿದೆ. ಜತೆಗೆ ರೆಡಿಯೋಲಾಜಿಸ್ಟ್ ತಜ್ಞರು ಮತ್ತು ಅತ್ಯಾಧುನಿಕ ಆರೋಗ್ಯ ಸಲಕರಣೆಗಳ ಸೌಲಭ್ಯ ನೀಡಲಾಗಿದೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.