ADVERTISEMENT

ಸುರಪುರ: ಶೋಷಿತರ ಪರ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:42 IST
Last Updated 10 ಮಾರ್ಚ್ 2025, 15:42 IST
ಸುರಪುರದಲ್ಲಿ ಸೋಮವಾರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ಸೋಮವಾರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು   

ಸುರಪುರ: ದಬ್ಬಾಳಿಕೆಯಿಂದ ಮಾಡುತ್ತಿರುವ ಸಾಲ ವಸೂಲಾತಿಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ತಾಲ್ಲೂಕಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‍ಗಳು ರೈತರು ಸೇರಿದಂತೆ ಇತರರಿಗೆ ಸಾಲದ ಕಂತು ನೀಡಲು ದಬ್ಬಾಳಿಕೆ ನಡೆಸುತ್ತಿವೆ. ಇದರಿಂದ ರೈತರು ಹತಾಶರಾಗಿದ್ದು ಈಗಾಗಲೇ ತಾಲ್ಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಮತ್ತು ಇತರ ವಲಯ ಅಧೋಗತಿಗೆ ಇಳಿಯುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಂಗಂಪೇಟೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಬೇಕು. ಅರ್ಹ ಫಲಾನುಭವಿಗಳಿಗೆ ಮತ್ತು ರೈತರಿಗೆ ಸಾಲ ನೀಡಬೇಕು. ಸಾಲ ಪಾವತಿಸಿದವರಿಗೆ ಮರು ಸಾಲ ನೀಡಬೇಕು. ಕಳೆದ 4 ವರ್ಷಗಳಿಂದ ಸಾಲ ನೀಡಿದ ವಿವರವನ್ನು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಿರ್ಲಕ್ಷ್ಯ ತೋರಿದಲ್ಲಿ ರಂಗಂಪೇಟೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸಲ್ಲಿಸಲಾಯಿತು.

ನಾಗರಾಜ ದರಬಾರಿ, ದೇವಪ್ಪ ರತ್ತಾಳ, ಶಿವು ಹಸನಾಪುರ, ಅಂಬರೀಶ ಹಸನಾಪುರ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.