ADVERTISEMENT

ಸುರಪುರ: 17ನೇ ಶತಮಾನದ ಅಪರೂಪದ ವೀರಗಲ್ಲು, ಮಾಸ್ತಿಗಲ್ಲು ಪತ್ತೆ

ಅಶೋಕ ಸಾಲವಾಡಗಿ
Published 7 ಜನವರಿ 2026, 5:36 IST
Last Updated 7 ಜನವರಿ 2026, 5:36 IST
<div class="paragraphs"><p>ಸುರಪುರ ತಾಲ್ಲೂಕಿನ ದೇವಿಕೇರಿ ಗ್ರಾಮದಲ್ಲಿ ಪತ್ತೆ ಆಗಿರುವ ಮಹಾಸತಿ ಕಲ್ಲು</p></div>

ಸುರಪುರ ತಾಲ್ಲೂಕಿನ ದೇವಿಕೇರಿ ಗ್ರಾಮದಲ್ಲಿ ಪತ್ತೆ ಆಗಿರುವ ಮಹಾಸತಿ ಕಲ್ಲು

   

ಸುರಪುರ: ನಗರದಿಂದ 7 ಕಿ.ಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮದಲ್ಲಿ ಐದು ವೀರಗಲ್ಲುಗಳನ್ನು ಸಂಶೋಧಕ ರಾಜಗೋಪಾಲ ವಿಭೂತಿ ಪತ್ತೆ ಹಚ್ಚಿದ್ದಾರೆ.

ದೇವಿಕೇರಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ನೆಲಮನೆ ತಿಮ್ಮಪ್ಪ ಮತ್ತು ಕಾಳಿಕಾದೇವಿ ದೇಗುಲಗಳಿವೆ. ಅಂತೆಯೆ ಈ ಗ್ರಾಮಕ್ಕೆ ದೇವಿಕೇರಿ ಎಂಬ ಹೆಸರು ಬಂದಿದೆ. ಸುರಪುರದ ಗೋಸಲ ಅರಸರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ. ದೇವಿಕೇರಿ ಗ್ರಾಮದಲ್ಲಿ ತಿಮ್ಮಪ್ಪನ ದೇಗುಲ ನಿರ್ಮಿಸಿ ನಿರ್ವಹಣೆಗೆ ರಾಜರು ಉಂಬಳಿ ನೀಡಿದರು. ಅದೇ ರೀತಿ ಕಾಳಿಕಾದೇವಿ ದೇವಸ್ಥಾನವೂ ನಿರ್ಮಾಣವಾಗಿದೆ ಎಂಬ ಉಲ್ಲೇಖಗಳಿವೆ.

ADVERTISEMENT

ದೇವಿಕೇರಿ ಗ್ರಾಮ ಸುರಪುರ ಸಂಸ್ಥಾನದ ಪ್ರಮುಖ ಗ್ರಾಮವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ಸುರಪುರ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಪ್ರಮುಖ ಶಾಸನಗಳನ್ನು ಸಂಶೋಧಕಿ ಹನುಮಾಕ್ಷಿ ಗೋಗಿ ಈ ಹಿಂದೆಯೇ ಪತ್ತಿಹಚ್ಚಿದ್ದರು. ಅವುಗಳಲ್ಲಿ 2 ದೇವಿಕೇರಿ ಗ್ರಾಮದಲ್ಲಿದ್ದು, ಇನ್ನು 2 ಶಾಸನಗಳು ಖಾಸಗಿ ವ್ಯಕ್ತಿಗಳ ಹೊಲದಲ್ಲಿವೆ. ಅವು ಅವಸಾನದ ಅಂಚಿನಲ್ಲಿವೆ.

ಪತ್ತೆಯಾಗಿರುವ ಐದು ವೀರಗಲ್ಲುಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ವ್ಯಕ್ತಿಗೆ ಸೇರಿದ ಹೊಲದಲ್ಲಿ ಒಕ್ಕೈ ಮಾಸ್ತಿಗಲ್ಲಿದೆ. ಇದು ಮಹಿಳೆ ತನ್ನ ಗಂಡನ ವೀರಮರಣದ ನಂತರ ಆತನ ನೆನಪಿಗಾಗಿ ಸತಿ ಹೋಗಿರುವ ಸ್ಮರಣಾರ್ಥವಾಗಿ ಕೆತ್ತಿರುವ ಕಲ್ಲು ಎಂಬುದು ರಾಜಗೋಪಾಲ ಅವರ ಅಂದಾಜು.

17ನೇ ಶತಮಾನದ ಈ ಮಹಾಸತಿ ಕಲ್ಲು ಕೆಂಪುಕಣ ಶಿಲೆಯಲ್ಲಿದೆ. ಮೂರು ಅಡಿ ಅಗಲ ಐದು ಅಡಿ ಉದ್ದದ ಈ ಕಲ್ಲಿನಲ್ಲಿ ಮೊದಲ ಹಂತದಲ್ಲಿ ಕುದುರೆಯ ಮೇಲೆ ಇಬ್ಬರು ಕುಳಿತಿದ್ದು, ಎರಡನೆಯ ಹಂತದಲ್ಲಿ
ಬಲಗೈ ಬಾಚಿಗೊಂಡಿದ್ದು ಕೈಗೆ ಬಳೆಗಳು ಇವೆ ಎಂದು ರಾಜಗೋಪಾಲ ತಿಳಿಸುತ್ತಾರೆ.

ಹಾಲಿಡ ಭಂಗಿಯಲ್ಲಿ ವೀರನೊಬ್ಬ ಧನಸ್ಸನ್ನು ಹಿಡಿದು ನಿಂತಿರುವ ಕಪ್ಪು ಗ್ರಾನೈಟ್ ಶಿಲೆಯ ವೀರಗಲ್ಲಿನಲ್ಲಿ ಆ ಸೈನಿಕ ಯಾವುದೋ ಘನ ಕಾರ್ಯಕ್ಕೆ ಪ್ರಾಣವನ್ನು ತ್ಯಾಗ ಮಾಡಿದ್ದು, ಆತನ ಸ್ಮರಣಾರ್ಥವಾಗಿ ನಿಲ್ಲಿಸಿರಬಹುದು ಎಂದು ಅಂದಾಜಿಸಿದ್ದಾರೆ.

ಊರಿನ ಹನುಮಂತ ದೇವರಗುಡಿ ಮುಂದೆ 10 ರಿಂದ 12 ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಅವುಗಳಲ್ಲಿ ಮೂರು ಮೂರ್ತಿಗಳು ಪ್ರಮುಖವಾಗಿವೆ. ಒಂದು ಶಿಲೆಯಲ್ಲಿ ವೀರನು ಧನುಸ್ಸನ್ನು ಹಿಡಿದು ಎದುರಿಗಿರುವ ವೈರಿಯ ಮೇಲೆ ದಾಳಿ ಮಾಡುವ ಭಂಗಿಯಲ್ಲಿದೆ ಎಂದು ತಿಳಿಸಿದ್ದಾರೆ.

ಎರಡನೆಯ ಕಲ್ಲಿನಲ್ಲಿ ವೀರಮರಣ ಅಪ್ಪಿದ ಯೋಧ ಸುರಂಗನೆಯ ಜೊತೆಗೆ ಸ್ವರ್ಗಕ್ಕೆ ಹೋಗುತ್ತಿರುವ ಭಂಗಿಯಲ್ಲಿದೆ. ಇನ್ನೊಂದು ಕಲ್ಲಿನಲ್ಲಿ ವೀರನು ಶಿವಲಿಂಗದ ಮುಂದೆ ವಜ್ರಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವಂತೆ ಕೆತ್ತಲಾಗಿದೆ.ಶಿವಲಿಂಗದ ಹಿಂದೆ ವಿಷ್ಣುವಿನ ಮೂರ್ತಿ ಇದೆ. ಇದು ಸಾಮರಸ್ಯದ ಪ್ರತೀಕವಾಗಿದೆ ಎಂದು ರಾಜಗೋಪಾಲ ವಿವರಿಸಿದ್ದಾರೆ.

ಕೆಲವು ವೀರಗಲ್ಲುಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಎಣ್ಣೆ ಹಾಕಿ, ಕುಂಕುಮ ಹಚ್ಚುತ್ತಾರೆ. ಹೀಗಾಗಿ ಅವೂ ಅಳಿವಿನ ಅಂಚಿನಲ್ಲಿವೆ. ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲುಗಳು ಇತಿಹಾಸದ ಕುರುಹಾಗಿವೆ. ಅವುಗಳನ್ನು ರಕ್ಷಿಸದಿದ್ದರೆ ನಾವೆಲ್ಲ ನಮ್ಮ ಭವ್ಯ ಇತಿಹಾಸದಿಂದ ವಂಚಿತರಾದಂತೆ ಎಂದು ರಾಜಗೋಪಾಲ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುರಪುರ ಇತಿಹಾಸಕ್ಕೆ ಸಂಬಂಧಿಸಿದಂತೆ ಎರಡು ಅಪರೂಪದ ಶಾಸನಗಳು ದೇವಿಕೇರಿಯಲ್ಲಿವೆ. ಸಂಶೋಧಿಸಿದಷ್ಟು ಮಾಹಿತಿ ಸಿಗುವ ವಿಪುಲ ಅವಕಾಶಗಳು ಇವೆ.
ಹನುಮಾಕ್ಷಿ ಗೋಗಿ, ಶಾಸನ ತಜ್ಞೆ
ಅಪರೂಪದ ಶಾಸನ, ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕು. ಅಲ್ಲಿಯವರೆಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಇವುಗಳನ್ನು ಪಂಚಾಯಿತಿ ಕಚೇರಿಯಲ್ಲಿ ರಕ್ಷಿಸಿ ಇಡಬೇಕು
ರಾಜಗೋಪಾಲ ವಿಭೂತಿ, ಸಂಶೋಧಕ ಮತ್ತು ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.