ADVERTISEMENT

ಸುರಪುರ: ಸಂಕಷ್ಟದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ

ಸ್ಥಗಿತಗೊಂಡ ಕೇಂದ್ರದ ಪಿಂಚಣಿ ನೀಡುವಂತೆ ಸಿದ್ದಲಿಂಗಮ್ಮ ಅಳಲು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:27 IST
Last Updated 15 ಆಗಸ್ಟ್ 2025, 6:27 IST
ಸ್ವಾತಂತ್ರ್ಯ ಹೋರಾಟಗಾರ ಈರಯ್ಯಸ್ವಾಮಿಯೊಂದಿಗೆ ಪತ್ನಿ ಸಿದ್ಧಲಿಂಗಮ್ಮ  
ಸ್ವಾತಂತ್ರ್ಯ ಹೋರಾಟಗಾರ ಈರಯ್ಯಸ್ವಾಮಿಯೊಂದಿಗೆ ಪತ್ನಿ ಸಿದ್ಧಲಿಂಗಮ್ಮ     

ಅಶೋಕ ಸಾಲವಾಡಗಿ

ಸುರಪುರ: ಸ್ವಾತಂತ್ರ್ಯ ಹೋರಾಟಗಾರ ಈರಯ್ಯಸ್ವಾಮಿ ಹಿರೇಮಠ ಅವರ ಪತ್ನಿ ಸಿದ್ಧಲಿಂಗಮ್ಮ ಅವರಿಗೆ 2017ರಿಂದ ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಸೈನಿಕ ಸಮ್ಮಾನ ಯೋಜನೆಯಡಿ ದೊರಕುತ್ತಿದ್ದ ಪಿಂಚಣಿ ಸ್ಥಗಿತಗೊಂಡಿದೆ.

ಈರಯ್ಯಸ್ವಾಮಿ ಕೊಡೇಕಲ್ ಗ್ರಾಮದವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದವರು. ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದರು. ದೇವಪುರ ಗ್ರಾಮದ ಸಿದ್ದಲಿಂಗಮ್ಮ ಅವರನ್ನು ವಿವಾಹವಾಗಿದ್ದರು. ಸಂತಾನ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆಯುತ್ತಿದ್ದರು.  ಈರಯ್ಯಸ್ವಾಮಿ 2000ರಲ್ಲಿ ನಿಧನರಾದರು. ಅವರ ಪತ್ನಿಗೆ ಪಿಂಚಣಿ ಬರುತ್ತಿತ್ತು.

ADVERTISEMENT

ಪತಿ ನಿಧನಾನಂತರ ಪತ್ನಿ ತವರುಮನೆ ದೇವಪುರಕ್ಕೆ ಬಂದು ನೆಲೆಸಿದರು. ಕೊಡೇಕಲ್‍ದ ಮನೆ ಮಾರಾಟ ಮಾಡಿ ದೇವಪುರದಲ್ಲಿ ಚಿಕ್ಕ ಮನೆ ಕಟ್ಟಿಕೊಂಡು ಅಲ್ಲಿಯೇ ವಾಸಿಸತೊಡಗಿದರು. 2016ರಲ್ಲಿ ಮಳೆಗೆ ಮನೆ ಕುಸಿದು ಬಿತ್ತು. ಕಾಗದಪತ್ರಗಳು ಮನೆಯ ಅವಶೇಷಗಳಡಿ ಸಿಲುಕಿ ನಾಶವಾದವು. ಪ್ರತಿ ವರ್ಷ ಬ್ಯಾಂಕಿಗೆ ಜೀವಿತ ಪ್ರಮಾಣ ಪತ್ರ ನೀಡಬೇಕು. 2017ರಲ್ಲಿ ಟ್ರೇಜರಿ ಕಚೇರಿಯಿಂದ ರಾಜ್ಯ ಸರ್ಕಾರ ಮಂಜೂರು ಮಾಡಿದ ಪಿಂಚಣಿ ಪತ್ರದ ಜೆರಾಕ್ಸ್ ಪಡೆದು ಜೀವಿತ ಪ್ರಮಾಣ ಪತ್ರ ಸಲ್ಲಿಸಿದರು. ಹೀಗಾಗಿ ರಾಜ್ಯ ಸರ್ಕಾರದ ಪಿಂಚಣಿ ₹10 ಸಾವಿರ ಸಿಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಪಿಂಚಣಿ ಮಂಜೂರಿ ಪತ್ರ ಸಿಗಲೇ ಇಲ್ಲ. ಜೀವಿತ ಪ್ರಮಾಣ ಪತ್ರ ಸಲ್ಲಿಸದ ಕಾರಣ ಬ್ಯಾಂಕ್‍ನವರು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಕಚೇರಿಗೆ ಸಮರ್ಪಕ ದಾಖಲೆ ಸಲ್ಲಿಸಿಲ್ಲ ಎಂಬ ಪತ್ರ ಸಲ್ಲಿಸಿದರು. ಹೀಗಾಗಿ ಕೇಂದ್ರ ಸರ್ಕಾರದ ಪಿಂಚಣಿ ಸ್ಥಗಿತಗೊಳಿಸಿತು.

ನಂತರ ಮರು ವರ್ಷ ಕೇಂದ್ರ ಸರ್ಕಾರದ ಮಂಜೂರಿ ದಾಖಲೆ ಕಲೆ ಹಾಕಿ ಬ್ಯಾಂಕಿಗೆ ಕೊಡಲು ಹೋದರು. ಕೇಂದ್ರ ಸರ್ಕಾರದಿಂದ ಮತ್ತೇ ಆದೇಶ ಮಾಡಿಸಿದರೆ ಮಾತ್ರ ಪಿಂಚಣಿ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಆದರೆ ಆಗಿನಿಂದ ಇಲ್ಲಿಯವರೆಗೆ ಸಿದ್ದಲಿಂಗಮ್ಮ ಅವರ ಅಕ್ಕನ ಮಗ ಶರಣಯ್ಯ ಎಂಬುವವರು ಸಂಬಂಧಿಸಿದ ಎಲ್ಲ ಕಚೇರಿಗಳಿಗೆ ಅಲೆದಾಡಿದ್ದಾರೆ. ಎರಡು ಬಾರಿ ದೆಹಲಿಗೂ ಹೋಗಿ ಬಂದಿದ್ದಾರೆ. ಆದರೆ ಇದುವರೆಗೂ ಪಿಂಚಣಿ ಮತ್ತೆ ಆರಂಭವಾಗಿಲ್ಲ. 

ಸಿದ್ದಲಿಂಗಮ್ಮ ಅವರಿಗೆ ಜಮೀನು ಇಲ್ಲ. ಉಪಜೀವನಕ್ಕೆ ರಾಜ್ಯ ಸರ್ಕಾರದ ₹10 ಸಾವಿರ ಆಸರೆಯಾಗುತ್ತಿದೆ. ಆದರೆ ಆಸ್ಪತ್ರೆ ಇತರ ಹೆಚ್ಚಿನ ಖರ್ಚುಗಳು ಬಂದರೆ ಸಾಲ ಮಾಡಬೇಕಾಗುತ್ತದೆ. ಈಗಾಗಲೇ ಅಲೆದಾಟಕ್ಕೆ ₹3 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಅವರಿಗೆ ಮತ್ತೆ ಕೇಂದ್ರ ಸರ್ಕಾರದ ಪಿಂಚಣಿ ಆರಂಭಿಸಿದರೆ ಬದುಕು ಹಸನಾಗುತ್ತದೆ. ಇದು ಸ್ವಾತಂತ್ರ್ಯಕ್ಕಾಗಿ ಸೆರೆವಾಸ ಅನುಭವಿಸಿದ ಹೋರಾಟಗಾರರಿಗೂ ಗೌರವ ನೀಡಿದಂತಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.