ಸುರಪುರ: ‘ಮಲ ಹೊರುವ ಪದ್ಧತಿಯನ್ನು ನಿಷೇಧಗೊಳಿಸಿದ ಬಿ.ಬಸವಲಿಂಗಪ್ಪನವರ ಮೂರ್ತಿ ಪ್ರತಿಷ್ಠಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದವರು ಶುಕ್ರವಾರ ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಪೌರ ಕಾರ್ಮಿಕರು ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಗೊಳಿಸಿದ ಬಿ.ಬಸವಲಿಂಗಪ್ಪನವರ ಮೂರ್ತಿ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
‘ಸುರಪುರ ನಗರಸಭೆ ಅವರಣ, ಕಕ್ಕೇರಾ, ಕೆಂಭಾವಿ ಪುರಸಭೆ ಮುಂದೆ ಮತ್ತು ಹುಣಸಗಿ ಪಟ್ಟಣ ಪಂಚಾಯತಿ ಆವರಣದಲ್ಲಿ ಪ್ರತಿಷ್ಠಾಪಿಸುವಂತೆ ಕಳೆದ 30 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿರುತ್ತೇವೆ. ಆದರೆ ಇದುವರೆಗೂ ಕೂಡ ನಮ್ಮ ಬೇಡಿಕೆಗೆ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ’ ಎಂದರು.
‘ಗೌತಮ ಬುದ್ಧ ವೃತ್ತದಿಂದ ಬುದ್ಧ ವಿಹಾರಕ್ಕೆ ಹೋಗುವ ರಸ್ತೆಯ ಎಡಗಡೆ ಬರುವ ಬಡಾವಣೆಗೆ ಡಾ.ಬಿ.ಆರ್.ಅಂಬೇಡ್ಕರ್ ನಗರ ಎಂದು ನಾಮಕರಣ ಮಾಡಬೇಕು. ನಗರಸಭೆ ಆವರಣದಲ್ಲಿ ಬಿ.ಬಸವಲಿಂಗಪ್ಪನವರ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.
ದೋಬಿಗಲ್ಲಿಯ ಪಶ್ಚಿಮ ದಿಕ್ಕಿನಿಂದ ಸರ್ಕಾರಿ ಆಸ್ಪತ್ರೆಯವರೆಗೆ ಬರುವ ಬಡಾವಣೆಗೆ ಸಿದ್ದಾರ್ಥ ನಗರವೆಂದು ನಾಮಕರಣ ಮಾಡಬೇಕು. ತಹಶೀಲ್ದಾರ್ ಕ್ವಾಟರ್ಸ್ ಮತ್ತು ಕೃಷಿ ಕಚೇರಿ ಮಧ್ಯದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯ ವೃತ್ತಕ್ಕೆ ಸಾಮ್ರಾಟ್ ಅಶೋಕ್ ಚಕ್ರವರ್ತಿ ಹೆಸರಿಟ್ಟು ಮೂರ್ತಿ ಸ್ಥಾಪನೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು.
ಈಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸದೆ ನಿರ್ಲಕ್ಷ್ಯಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಮಾನು ಗುರಿಕಾರ, ರವಿಚಂದ್ರ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಆಶಿನಾಳ, ಮಲ್ಲಿಕಾರ್ಜುನ ಕುರಕುಂದಿ, ಅಜೀಜ್ ಸಾಬ್ ಐಕೂರು, ಮಲ್ಲಿಕಾರ್ಜುನ ಶಾಖನವರ್, ವೀರಭದ್ರಪ್ಪ ತಳವಾರಗೇರಾ, ಮಲ್ಲಿಕಾರ್ಜುನ ತಳ್ಳಳ್ಳಿ, ಮಹಾದೇವಪ್ಪ ಬಿಜಾಸಪೂರ, ಮೂರ್ತಿ ಬೊಮ್ಮನಳ್ಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.