ADVERTISEMENT

ಶಿಕ್ಷಕ ದೇಶ ನಿರ್ಮಾಣದ ರೂವಾರಿ; ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 4:57 IST
Last Updated 6 ಸೆಪ್ಟೆಂಬರ್ 2022, 4:57 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜರಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜರಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಯಾದಗಿರಿ/ಶಹಾಪುರ: ಕಲಿಸಿದ ಗುರುವಿಗೆ ಜಿಲ್ಲೆಯ ವಿವಿಧೆಡೆ ಜನರು ಸೋಮವಾರ ಗೌರವ ಹಾಗೂ ಆದರಗಳಿಂದ ನಮನ ಸಲ್ಲಿಸಿದರು. ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗಾಗಿ ಅಭಿನಂದನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಬೋಧಿಸಿ, ಸರ್ಕಾರಿ ಶಾಲೆಗಳ ಮೌಲ್ಯ ಹೆಚ್ಚಿಸುತ್ತಿರುವುದರ ಜತೆಗೆ ಗ್ರಾಮೀಣ ಭಾಗದ ವಿಕಾಸಕ್ಕೆ ಕಾರಣಿಕರ್ತರಾಗಿರುವ ಶಿಕ್ಷಕರು ರಾಷ್ಟ್ರ ನಿರ್ಮಾಣದ ರುವಾರಿಗಳು’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗ ಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಸರ್ಕಾರಿ ಶಾಲೆಗಳ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತೇರ್ಗೆಡೆಯಾಗಿ ಬೋಧನಾ ವೃತ್ತಿಯಲ್ಲಿದ್ದಾರೆ. ಪ್ರತಿಭಾವಂತರಿಂದ ಕಲಿತ ಶಿಕ್ಷಣದಿಂದ ಉನ್ನತ ಸ್ಥಾನಮಾನ ಪಡೆಯಬಹುದು. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆದು ಶಿಕ್ಷಕ ಸಮುದಾಯ ಶೈಕ್ಷಣಿಕ ವ್ಯವಸ್ಥೆಯ ಜಾಗೃತಿಗೆ ಹೆಚ್ಚು ಕಾಳಜಿವಹಿಸಬೇಕು’ ಎಂದರು.

‘ಶಾಲೆಗಳಿಗೆ ಬೇಕಾಗುವ ಮೂಲಸೌಕರ್ಯ ಒದಗಿಸಲಾಗುವುದು. ಸಮಸ್ತ ಗುರು ವೃಂದವರು ಏನೇ ಸಮಸ್ಯೆಗಳು ಇದ್ದರೂ ಸಂಕೋಚ ಪಡದೆ ನನ್ನ ಗಮನಕ್ಕೆ ತರಬಹುದು. ಅವುಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಭರವಸೆ ನೀಡಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಕರಾಗಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಸ್ಫೂರ್ತಿ, ಸಾಮರ್ಥ್ಯ ನೀಡುವವರೇ ಶಿಕ್ಷಕರು. ಪ್ರಸ್ತುತ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಅನೇಕ ಸವಾಲುಗಳಿವೆ. ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಸಮುದಾಯ ಸರ್ಕಾರದ ಭಾಗವಾಗಿ ಹಲವು ಕಾರ್ಯಗಳಲ್ಲಿಯೂ ಅವರ ಹೊಣೆಗಾರಿಕೆ ಹೆಚ್ಚಾಗಿದೆ’ ಎಂದರು.

ಕಲಬುರಗಿಯ ಡಾ.ಡಿ.ಎನ್.ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನರಾದ ವಿಶ್ವನಾಥ ಯರಗೋಳ, ಪ್ರಾಥಮಿಕ ವಿಭಾಗದಲ್ಲಿ ಬೀರಪ್ಪ ಟೊಣ್ನೂರು, ಸಿದ್ದಪ್ಪ ಚಂದಾಪುರ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರ ಮತ್ತು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಚನ್ನಬಸವಣ್ಣ, ತಾ.ಪಂ ಅಧಿಕಾರಿ ಸೋಮಶೇಖರ, ಬಿಇಒ ರುದ್ರಗೌಡ ಪಾಟೀಲ, ರಾಯಪ್ಪಗೌಡ ಹುಡೇದ, ಅಕ್ಷರ ದಾಸೋಹದ ಸೂರ್ಯವಂಶಿ, ಸಮನ್ವಯಾಧಿಕಾರಿ ರೇಣುಕಾ ಪಾಟೀಲ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ, ಭೀಮಣ್ಣಗೌಡ ತಳೆವಾಡ, ಚಂದ್ರಶೇಖರ ವೈದ್ಯ, ಶಂಕ್ರಪ್ಪ ಗೊಂದೆನೋರ, ಶರಣಪ್ಪ ಪಾಟೀಲ, ಪಂಪಣ್ಣಗೌಡ ಪಾಟೀಲ, ಜಗದೀಶ ಗೋಟ್ಲಾ, ಶಾಂತರೆಡ್ಡಿ, ಮುರ್ತುಜಾ, ಸಾಹೇಬರೆಡ್ಡಿ, ವೀರಭದ್ರ ಬಡಿಗೇರ, ಶರಣುಗೌಡ ಬಿರಾದಾರ, ಶರಣು ಜಾಲಹಳ್ಳಿ, ಚಂದ್ರಶೇಖರ ಗೋಗಿ, ಕಾವೇರಿ ಪಾಟೀಲ ಲಕ್ಷ್ಮಣ ಲಾಳಸೇರಿ ಇದ್ದರು.

ಗುರುವನ್ನು ಗೌರವಿಸುವ ದಿನ: ದಂಡಿಗಿಮಠ
ಸೈದಾಪುರ:
ಜ್ಞಾನವನ್ನು ಧಾರೆ ಎರೆದು ಪ್ರತಿಯೊಬ್ಬರ ಯಶಸ್ಸಿ ಜೀವನದ ಏಳಿಗೆಗೆ ಕಾರಣರಾದ ಗುರು ವೃಂದ ವನ್ನು ನೆನಪಿಸಿ ಗೌರವಿಸುವ ದಿನವೇ ಶಿಕ್ಷಕರ ದಿನ ಎಂದು ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠಹೇಳಿದರು.

ಇಲ್ಲಿನ ವಿದ್ಯಾವರ್ಧಕ ಡಿಎಲ್‌ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

‘ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿ ಶಿಕ್ಷಕ ಸಮುದಾಯವನ್ನು ಗೌರವಿಸುವಂತೆ ಮಾಡಿದ್ದಾರೆ. ಅದರ ಮಹತ್ವ ಹೆಚ್ಚಾಗುವಂತೆ ಮಾಡಲು ಶಿಕ್ಷಕರು ಸಮರ್ಪಣಾ ಭಾವನೆಯೊಂದಿಗೆ ಕೆಲಸ ಮಾಡಬೇಕು’ ಎಂದರು.

‘ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠವಾದದು. ಸಮಾಜದ ಉತ್ತಮ ಸಂಪನ್ಮೂಲವಾಗಿ ನಮ್ಮನ್ನು ಗುರುತಿಸಿಕೊಳ್ಳಬೇಕು. ಅದಕ್ಕಾಗಿ ನಿರಂತರ ಅಭ್ಯಾಸ ಹಾಗೂ ಪ್ರಾಮಾಣಿಕ ಪ್ರಯತ್ನ ಮುಖ್ಯವಾಗಿದೆ’ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳ ವಿಜೇತಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ರಾಚಮ್ಮ, ಸಾನಿಯಾ, ಪವಿತ್ರ, ಸೇರಿದಂತೆ ಇದ್ದರು.

ಪ್ರಶಿಕ್ಷಣಾರ್ಥಿ ರೇಣುಕಾ ಮಹೇಶ್ವರಿ ಪ್ರಾರ್ಥಾಗೀತೆ ಹಾಡಿದರು. ಗೌರಶ್ರೀ ಸ್ವಾಗತಿಸಿದರು. ಮಹೇಶ್ವರಿ ನಿರೂಪಿಸಿ, ಭೂಮಿಕಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.