ಶಹಾಪುರ: ‘ಸಂವಿಧಾನದ ಆಶಯದಂತೆ ಶೋಷಿತರು ನೆಲದ ವಾರಸುದಾರರು ಆಗಿದ್ದಾರೆ. ಶೋಷಿತ ವರ್ಗ ಒಗ್ಗೂಡಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.
ನಗರದ ಆರಬೋಳ ಕಲ್ಯಾಣ ಮಂಟದಲ್ಲಿ ಭಾನುವಾರ ದಲಿತ ಸಂಘಟನೆಗಳ ಒಕ್ಕೂಟ, ಹಿಂದುಳಿದ ವರ್ಗಗಳ ಒಕ್ಕೂಟ, ಸಮ ಸಮಾಜ ಚಿಂತನಾ ವೇದಿಕೆ,ಶೋಷಿತ ವರ್ಗಗಳ ಒಕ್ಕೂಟ, ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ನೌಕರರ ಕಲ್ಯಾಣ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಸಮ ಸಮಾಜ ನಿರ್ಮಾಣದ ಗುರಿ ನಮ್ಮೆಲ್ಲರದು ಆಗಿದೆ. ರಾಜಕಾರಣಿಗಳು ಹೆದರುವುದು ಓಟಿಗೆ ಮಾತ್ರ. ದುಡ್ಡು ಕೊಟ್ಟರೆ ವೋಟು ಪಡೆಯುತ್ತೇವೆ ಎಂಬ ಮನೋಭಾವ ಹೆಚ್ಚಾಗುತ್ತಲಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು’ ಎಂದರು.
‘ಅಸಮಾನತೆ ತೊಡೆದು ಹಾಕಲು ಹಾಗೂ ಸಮ ಸಮಾಜ ನಿರ್ಮಾಣ ಮಾಡಲು ಮೀಸಲಾತಿ ಅಗತ್ಯವಾಗಿದೆ. ಆದರೆ ಇಂದು ಸರ್ವಾಧಿಕಾರ ಧೋರಣೆ, ಜಾತಿ ನಂಜು ಹಚ್ಚುತ್ತಿದೆ. ವ್ಯಕ್ತಿಪೂಜೆ ಸರ್ವಾಧಿಕಾರಿಯನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವದ ನಮ್ಮ ಹಕ್ಕಿನ ಮೇಲೆ ಸವಾರಿ ಮಾಡುತ್ತಿದೆ. ನಾವೆಲ್ಲರೂ ಇದಕ್ಕೆ ಕಡಿವಾಣ ಹಾಕಬೇಕು ಎಂದರೆ ಜಾಗೃತರಾಗಬೇಕು. ಜಾತಿ ಬೆಂಬಲವಿಲ್ಲದೆ ಎಲ್ಲಾ ಶೋಷಿತ ಸಮುದಾಯಗಳ ಹಿತ ಕಾಪಾಡಿದ ಶ್ರೇಯಸ್ಸು ದಿ.ದೇವರಾಜು ಅರಸು ಅವರಿಗೆ ಸಲ್ಲುತ್ತದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಲೋಕೋಪಯೋಗಿ ಇಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಕೊಡ್ಲಾ ಉರಿಪೆದ್ದಿ ಸಂಸ್ಥಾನಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಡಿ.ಜಿ.ಸಾಗರ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಫೀಜ್ ಸಯ್ಯದ್ ಮೊಹಮ್ಮದ ಅಲಿ, ಗೋಗಿಯ ಹಜರತ್ ಸಯ್ಯದ್ ಷಾಹ್ ಇಸ್ಮಾಯಿಲ್ ಹುಸೇನಿ, ಕೆ.ಎಂ. ರಾಮಚಂದ್ರಪ್ಪ, ನಿಕೇತರಾಜ್ ಮೌರ್ಯ, ಶೋಷಿತ ವರ್ಗಗಳ ಮುಖಂಡರಾದ ಹನುಮೇಗೌಡ ಬಿರಣಕಲ್, ತಿಮ್ಮಯ್ಯ ಪುರ್ಲೆ, ದೇವಿಂದ್ರಪ್ಪಗೌಡ ಗೌಡಗೇರಿ, ಶರಣಪ್ಪ ಸಲಾದಪುರ, ಅಯ್ಯಣ್ಣ ಕನ್ಯಾಕೊಳ್ಳೂರ, ಇಸ್ಮಾಯಿಲ್ ಚಾಂದ್, ಮಲ್ಲಿಕಾರ್ಜುನ ಪೂಜಾರಿ,ಸಿದ್ದಣ್ಣ ಆರಬೋಳ, ಶ್ರೀಶೈಲ್ ಹೊಸಮನಿ, ಭೀಮಣ್ಣ ಮೇಟಿ ಭಾಗವಹಿಸಿದ್ದರು.
Highlights - ‘ವೋಟಿಗೆ ಹೆದರುವ ರಾಜಕಾರಣಿಗಳು’ ‘ಸರ್ವಾಧಿಕಾರಿ ರೂಪಿಸುವ ವ್ಯಕ್ತಿ ಪೂಜೆ’ ‘ನಮ್ಮ ಹಕ್ಕಿನ ಮೇಲೆ ಸವಾರಿ ಮಾಡಬೇಡಿ’
Quote - ಸಮಾನತೆ ಸಾಧಿಸಬೇಕಾದರೆ ಬಡವರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಸಂವಿಧಾನ ಉಳಿಯಬೇಕಾದರೆ ಶೋಷಿತರು ರಾಜಕೀಯವಾಗಿ ಬಲಿಷ್ಠವಾಗಬೇಕು. ಶೈಕ್ಷಣಿಕ ಉನ್ನತಿ ಸಾಧಿಸಬೇಕು. ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
Cut-off box - ‘ಮೀಸಲಾತಿ: ಒಗ್ಗಟ್ಟಾಗಿ ಇರೋಣ’ ‘ಮೀಸಲಾತಿ ಪಾಲು ಹಂಚಿಕೆಯನ್ನು ಡಾ.ಅಂಬೇಡ್ಕರ್ ಅವರು ಬಯಸಿರಲಿಲ್ಲ. ಎಲ್ಲರ ಆಶೋತ್ತರದಂತೆ ಕಾಂಗ್ರೆಸ್ ಪಕ್ಷದ ಸರ್ಕಾರ ಮೀಸಲಾತಿಯ ಪಾಲು ಹಂಚಿಕೆ ಮಾಡಿದೆ. ಎಲ್ಲರೂ ಒಗ್ಗಟ್ಟಾಗಿ ಇರೋಣ. ನಮ್ಮ ನಿಮ್ಮ ಎದೆಯ ನೋವು ಒಂದೇ ಆಗಿದೆ. ನಾವು ಕಚ್ಚಾಡಿಕೊಂಡು ಕುಳಿತರೆ ನಾಶವಾಗುತ್ತೇವೆ. ಮತ್ತೆ ಮನುವಾದಿಗಳು ನಮ್ಮ ಮೇಲೆ ಸವಾರಿ ಮಾಡುತ್ತಾರೆ ಎಂಬುದು ಮರೆಯಬೇಡಿ’ ಎಂದು ಸಚಿವ ಮಹದೇವಪ್ಪ ತಿಳಿಸಿದರು.
Cut-off box - ಶಹಾಪುರದಿಂದ ಮೊದಲ ಪ್ರಯೋಗ ‘ಇತಿಹಾಸವನ್ನು ಕೆದಕಿ ನೋಡಿದಾಗ ಏಕಲವ್ಯ ಬೇಡರ ಕಣ್ಣಪ್ಪ ಅವರು ಬೇಡಿದ್ದನ್ನು ಕೊಟ್ಟು ಕಳೆದುಕೊಂಡಿದ್ದಾರೆ. ಸಂವಿಧಾನದಲ್ಲಿ ಕಳೆದು ಹೋದ ಹಕ್ಕು ಪಡೆಯುವ ಕಾಲ ಬಂದಿದೆ. ಶೋಷಿತರು ಒಗ್ಗೂಡಿದರೆ ಹೊಸ ನಾಯಕತ್ವಕ್ಕೆ ಅವಕಾಶವಿದೆ. ಮುಂದೆ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ರಾಜ್ಯದಾದ್ಯಂತ ಸಮಾವೇಶ ನಡೆಸಲಾಗುವುದು. ಶಹಾಪುರದಿಂದ ಮೊದಲ ಪ್ರಯೋಗ ಇದಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
Cut-off box - ‘ಸಂಸತ್ತಿಗಿಂತ ಸಂವಿಧಾನ ದೊಡ್ಡದು’ ಶಹಾಪುರ: ದೇಶದ ಚರಿತ್ರೆಯಲ್ಲಿ ಮನುವಾದಿಗಳ ಕುಟಿಲ ನೀತಿಯಿಂದ ಜಾತಿ ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಆಳ್ವಿಕೆ ನಡೆಸಿದ್ದಾರೆ. ನಾವು ಸಂವಿಧಾನದ ಆಶಯದಂತೆ ಬದುಕಬೇಕು. ದೇಶಕ್ಕಿಂತ ಧರ್ಮ ದೊಡ್ಡದಲ್ಲ. ಧರ್ಮ ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಸಂಸತ್ತಿಗಿಂತ ಸಂವಿಧಾನ ದೊಡ್ಡದು’ ಎಂದು ಕೊಡ್ಲಾ ಉರಿಪೆದ್ದಿ ಸಂಸ್ಥಾನಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು. ‘ನಮ್ಮದು ಬೇಡುವ ಸಮುದಾಯ ಆಗಬಾರದು. ನೀಡುವ ಹಾಗೂ ಆಳ್ವಿಕೆ ನಮ್ಮದಾಗಬೇಕು. ಪ್ರಜಾಪ್ರಭುತ್ವದಲ್ಲಿ ನಾವು ಮಾಲೀಕರಾಗಬೇಕು. ಶೋಷಿತ ವರ್ಗ ಒಂದೇ ಸೂರಿನಲ್ಲಿ ಕೂಡಿಕೊಂಡು ಜಾತಿರಹಿತ ಸಮಾಜ ನಿರ್ಮಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.