ADVERTISEMENT

ಅದ್ಧೂರಿ ಗವಿಸಿದ್ದಲಿಂಗೇಶ್ವರ ರಥೋತ್ಸವ

ಚಿಂತನಹಳ್ಳಿ: ಸಂಭ್ರಮದಿಂದ ಸಂಪನ್ನಗೊಂಡ ಗವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:15 IST
Last Updated 11 ಫೆಬ್ರುವರಿ 2020, 10:15 IST
ಗುರುಮಠಕಲ್ ಹತ್ತಿರದ ಚಿಂತನಹಳ್ಳಿಯಲ್ಲಿ ಜರುಗಿದ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ರಥದ ಅಲಂಕಾರದಲ್ಲಿ ನಿರತರಾದ ದೇವಸ್ಥಾನದ ಸ್ವಯಂಸೇವಕರು
ಗುರುಮಠಕಲ್ ಹತ್ತಿರದ ಚಿಂತನಹಳ್ಳಿಯಲ್ಲಿ ಜರುಗಿದ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ರಥದ ಅಲಂಕಾರದಲ್ಲಿ ನಿರತರಾದ ದೇವಸ್ಥಾನದ ಸ್ವಯಂಸೇವಕರು   

ಗುರುಮಠಕಲ್: ಸುತ್ತಲೂ ವನಸಿರಿಯ ಸೊಬಗು, ಜುಳು ಜುಳು ಎನ್ನುವ ನೀರಿನ ತೊರೆ, ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳ ನಡುವೆ ಗವಿಸಿದ್ದಲಿಂಗೇಶ್ವರ ಮಹರಾಜ್ ಕೀ ಜೈ ಎನ್ನುವ ಜಯಘೋಷಗಳೊಂದಿಗೆ ಮೈ ಜುಮ್ ಎನ್ನಿಸುವಂತೆ ಭಾನುವಾರ ರಾತ್ರಿ ಹತ್ತಿರದ ಚಿಂತನಹಳ್ಳಿಯ ಗವಿಸಿದ್ದಲಿಂಗೇಶ್ವರರ ರಥೋತ್ಸವವು ಸಂಭ್ರಮದಿಂದ ಸಂಪನ್ನಗೊಂಡಿತು.

ಚಿಂತನಹಳ್ಳಿ, ಹಿಮಾಲಪುರ, ಹಿಮಾಲಪುರ ತಾಂಡಾಗಳ ನಡುವೆ ಕಾಡಿನ ಮಧ್ಯಭಾಗದಲ್ಲಿರುವ ಗವಿಸಿದ್ದಲಿಂಗೇಶ್ವರ ದೇವಸ್ಥಾನವೂ ಭಾನುವಾರ ಬೆಳಗ್ಗೆಯಿಂದಲೆ ಭಕ್ತ ಸಮೂಹ ದೇವಸ್ಥಾನದತ್ತ ಜಮಾವಣೆಗೊಳ್ಳಲಾರಂಭಿರಾತ್ರಿಯ ರಥೋತ್ಸವದವರೆಗೂ ದೇವಸ್ಥಾನದ ಆವರಣ ಜನಸಮೂಹದಿಂದ ಕಿಕ್ಕಿರಿದ ದೃಶ್ಯ ಕಂಡುಬಂದಿತು.

ಶಿವಶರಣ ಸಿದ್ದಲಿಂಗೇಶ್ವರರು ನೆಲೆಸಿದ್ದರೆನ್ನಲಾಗುವ ಗವಿಯಲ್ಲಿನ (ಗುಹೆ) ಸಿದ್ದಲಿಂಗೇಶ್ವರರ ಪುತ್ಥಳಿಗೆ ಜಾತ್ರೆಯ ಅಂಗವಾಗಿ ಬೆಳಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಆರತಿ ನಡೆಯಿತು.

ADVERTISEMENT

ಚಿಂತನಹಳ್ಳಿಯಿಂದ ಪಲ್ಲಕ್ಕಿಹಾಗೂ ನಂದಿಕೋಲಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದ ನಂತರ ಜಾತ್ರೆಯು ಕಳೆಗಟ್ಟಿದ್ದು, ಭಜನೆ, ಕೀರ್ತನೆ, ಪ್ರಸಾದ ವಿತರಣೆ, ವಿಶೇಷ ಪೂಜೆಗಳು, ರಥಕ್ಕೆ ಅಲಂಕಾರ ನಡೆಯಿತು.

ಭಕ್ತರಿಗೆ ಗುಹೆಯಲ್ಲಿನ ಸಿದ್ದಲಿಂಗೇಶ್ವರರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನ ಮಂಡಳಿ ಕಲ್ಪಿಸಿತ್ತು. ವಾಹನ ದಟ್ಟಣೆ ನಿಯಂತ್ರಣಕ್ಕೆಪೊಲೀಸ್‌ಇಲಾಖೆಯ ಕಾರ್ಯವೈಖರಿಯು ಭಕ್ತರಲ್ಲಿ ಸಂತಸವನ್ನುಂಟು ಮಾಡಿತ್ತು.

ಸಿಹಿ ತಿನಿಸುಗಳ ಖರೀದಿ

ಜಾತ್ರೆಯಲ್ಲಿ ಮಕ್ಕಳಿಗೆ ಆಟಿಕೆಗಳ ಖರೀದಿ ಹಾಗೂ ಸಿಹಿ ತಿನಿಸುಗಳನ್ನು ಖರೀದಿ ಮಾಡುವ ದೃಶ್ಯಗಳು ಕಂಡುಬಂದವು. ಮೈಸೂರ್ ಪಾಕ್, ಬತ್ತಾಸು, ಚುರುಮುರಿ, ಬಿಸಿ ಬಿಸಿ ಜಿಲೇಬಿ, ಪೇಡಾ, ಲಾಡು ಹಾಗೂ ಮಂಡಕ್ಕಿ ಖರೀದಿ ಜೋರಾಗಿ ನಡೆದದ್ದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.