ADVERTISEMENT

ಶಹಾಪುರ: ಕಿರಾಣಿ ಅಂಗಡಿ ವ್ಯಾಪಾರಸ್ಥರ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 16:39 IST
Last Updated 12 ಜೂನ್ 2021, 16:39 IST

ಶಹಾಪುರ: ಲಾಕ್‌ಡೌನ್ ನಿಯಮ ಜಾರಿ ಇದ್ದರೂ ಕಿರಾಣಿ ಅಂಗಡಿ ತೆರೆದು ವ್ಯಾಪಾರ ಮಾಡುವ ವಿಚಾರವಾಗಿ ಶನಿವಾರ ಎರಡು ಕಿರಾಣಿ ಅಂಗಡಿಯವರು ಪರಸ್ಪರ ಕೈಮಿಲಾಯಿಸಿ ಬಡಿದಾಡಿಕೊಂಡ ಘಟನೆ ನಡೆದಿದೆ.

ನಗರದ ಮಾರುತಿ ರಸ್ತೆಯಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿ ತೆರೆದು ಆಹಾರ ಧಾನ್ಯದ ಕಿಟ್ ಸಿದ್ಧಪಡಿಸುತ್ತಿದ್ದರು. ಅದೇ ಅಂಗಡಿಯ ಪಕ್ಕದಲ್ಲಿರುವ ಮಸಾಲಿ ಅಂಗಡಿ ವ್ಯಕ್ತಿಯೊಬ್ಬರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. ಆಗ ಅಲ್ಲಿಗೆ ನಗರಸಭೆಯ ಸಿಬ್ಬಂದಿ ತೆರಳಿ ಮಸಾಲಿ ಅಂಗಡಿಯನ್ನು ಬಂದ್ ಮಾಡುವಂತೆ ದಬಾಯಿಸಿದರು. ಆಗ ಮಸಾಲಿ ಅಂಗಡಿಯ ಮಾಲೀಕ ಬಾಜು ಕಿರಾಣಿ ಅಂಗಡಿ ತೆರೆದರು ಸಹ ಅದನ್ನು ಪ್ರಶ್ನಿಸುತ್ತಿಲ್ಲ. ನಗರಸಭೆಯ ಇಬ್ಬಗೆಯ ನೀತಿ ಸರಿಯಲ್ಲ. ಮೊದಲು ಕಿರಾಣಿ ಅಂಗಡಿ ಬಂದ್ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಆಗ ಪಕ್ಕದ ಕಿರಾಣಿ ಅಂಗಡಿಯವರೊಂದಿಗೆ ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಿರಾಣಿ ಅಂಗಡಿ ತೆರೆದ ವಿಚಾರವಾಗಿ ಗುಂಡಪ್ಪ ತುಂಬಿಗಿ ಎಂಬುವರ ತಲೆಗೆ ಪೆಟ್ಟಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ತೆರಳಿ ಇಬ್ಬರು ಅಂಗಡಿಯವರನ್ನು ಶಾಂತಗೊಳಿಸಲಾಗಿದೆ. ಇನ್ನೂ ಠಾಣೆಗೆ ಬಂದು ಒಬ್ಬರೂ ದೂರು ನೀಡಿಲ್ಲ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಚೆನ್ನಯ್ಯ ಹಿರೇಮಠ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.