ADVERTISEMENT

ಯಾದಗಿರಿ: ನೀರಿನಲ್ಲಿ ಚಲಿಸುವ ಬೈಸಿಕಲ್ ರೂಪಿಸಿದ ಸಾಹಿಲ್

ಚಿಕ್ಕ ವಯಸ್ಸಿನಲ್ಲಿಯೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಸಾಹಿಲ್

ಅಶೋಕ ಸಾಲವಾಡಗಿ
Published 12 ಸೆಪ್ಟೆಂಬರ್ 2020, 20:00 IST
Last Updated 12 ಸೆಪ್ಟೆಂಬರ್ 2020, 20:00 IST
ಸುರಪುರದ ದೇವರಬಾವಿಯಲ್ಲಿ ಬೈಸಿಕಲ್ ನಡೆಸುತ್ತಿರುವ ಸಾಹಿಲ್
ಸುರಪುರದ ದೇವರಬಾವಿಯಲ್ಲಿ ಬೈಸಿಕಲ್ ನಡೆಸುತ್ತಿರುವ ಸಾಹಿಲ್   

ಸುರಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯಸ್ಸಿನಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅನನ್ಯ ಆಸಕ್ತಿ ಹೊಂದಿರುವ ನಗರದ ಸಾಹಿಲ್ ಮುನ್ನಳ್ಳಿ ನೀರಿನಲ್ಲಿ ಚಲಿಸುವ ಬೈಸಿಕಲ್ ಆವಿಷ್ಕರಿಸಿ ಮನೆ ಮಾತಾಗಿದ್ದಾರೆ.

ಗಿರೀಶ ಕುಲಕರ್ಣಿ ಮುನ್ನಳ್ಳಿ ಮತ್ತು ಶೈಲಜಾ ದಂಪತಿಯ ಪುತ್ರ ಸಾಹಿಲ್ 5-6 ವರ್ಷದವನಿದ್ದಾಗಲೇ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ. ಪ್ರಾಥಮಿಕ ಶಾಲಾ ಹಂತದಲ್ಲೇ ಅನೇಕ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ಓದುತ್ತಿರುವ ಸಾಹಿಲ್ ಈಗ ಹೊಸ ಆವಿಷ್ಕಾರಗಳಿಗೆ ಕೈ ಹಾಕಿದ್ದಾರೆ. ಕಡಿಮೆ ವೆಚ್ಚದಲ್ಲಿ ಉಪಯುಕ್ತ ಸಾಮಾನುಗಳನ್ನು ತಯಾರಿಸುತ್ತಿದ್ದಾರೆ. ವಿಜ್ಞಾನ ಶಿಕ್ಷಕಿಯಾಗಿರುವ ತಾಯಿ ಶೈಲಜಾಸಾಹಿಲ್‌ಗೆ ಪ್ರೇರಕ ಶಕ್ತಿ. ತಂದೆ ಗಿರೀಶ ಮಗನ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ.

ADVERTISEMENT

ಈಜು ಬಾರದ ಸಾಹಿಲ್‌ಗೆ ಬೈಸಿಕಲ್‍ ಅನ್ನು ನೀರಿನಲ್ಲಿ ಓಡಿಸುವ ಯೋಚನೆ ಬಂತು. ವಿಜ್ಞಾನ ಪುಸ್ತಕಗಳನ್ನು ಓದಿ ಒಂದಿಷ್ಟು ತಯಾರಿ ನಡೆಸಿದರು. ಒಂದು ಹೊಸ ಬೈಸಿಕಲ್ ಖರೀದಿಸಿದರು. ಮುಂದುಗಡೆ 35 ಲೀ.ನ ಎರಡು ಪ್ಲಾಸ್ಟಿಕ್ ಕ್ಯಾನ್ ಮತ್ತು ಹಿಂದೆ 4 ಕ್ಯಾನ್‍ಗಳನ್ನು ಅಳವಡಿಸಿದರು.

ಪೆಡಲ್ ಹೊಡೆದರೆ ಕೆಳಗಿನಿಂದ ಮೇಲೆ ತಿರುಗುವಂತೆ ಹಿಂದೆ ಪಟ್ಟಿಯನ್ನು ಜೋಡಣೆ ಮಾಡಿದರು. ಪಟ್ಟಿ ನಾವೆಯ ಹುಟ್ಟಿನಂತೆ ಕೆಲಸ ಮಾಡುತ್ತದೆ. ನೀರನ್ನು ತಳ್ಳುವುದರಿಂದ ಬೈಸಿಕಲ್ ಮುಂದೆ ಚಲಿಸುತ್ತದೆ. ಪ್ಲಾಸ್ಟಿಕ್ ಕ್ಯಾನ್‍ಗಳು ಬೈಸಿಕಲ್ ಮುಳುಗದಂತೆ ತೇಲಿಸುತ್ತವೆ. ಎಷ್ಷು ವೇಗದಲ್ಲಿ ಪೆಡಲ್ ತುಳಿಯುತ್ತೇವೋ ಅಷ್ಟು ವೇಗದಲ್ಲಿ ಬೈಸಿಕಲ್ ಮುಂದೆ ಚಲಿಸುತ್ತದೆ.

ರಿವರ್ಸ್ ಪೆಡಲ್ ತುಳಿದಾಗ ಬೈಸಿಕಲ್ ಹಿಂದಕ್ಕೆ ಹೋಗುತ್ತದೆ. ಈ ಬೈಸಿಕಲ್‍ನ್ನು ಬಾವಿ, ಕೆರೆ ಮತ್ತು ಸರೋವರಗಳಲ್ಲಿ ಓಡಿಸಬಹುದು. ₹ 6 ಸಾವಿರ ವೆಚ್ಚದಲ್ಲಿ ಈ ಬೈಸಿಕಲ್ ಆವಿಷ್ಕರಿಸಲಾಗಿದೆ. ಬೈಸಿಕಲ್ ಮುಂದೆ ಜೆಸಿಬಿಗೆ ಇರುವಂತೆ ಬಕೆಟ್ ಅಳವಡಿಸಿ ನೀರಿನಲ್ಲಿ ಕಸವನ್ನು ತೆಗೆಯಲು ಇದನ್ನು ಉಪಯೋಗಿಸಬಹುದು.

ಇದೇ ರೀತಿ ಸಾಹೀಲ್ ಕೇವಲ ₹ 50 ವೆಚ್ಚದಲ್ಲಿ ಮನೆಯಲ್ಲಿ ಬಿಸಾಕಿದ ವಸ್ತುಗಳಿಂದ ವೆಲ್ಡಿಂಗ್ ಮಶಿನ್ ತಯಾರಿಸಿದ್ದಾರೆ. ಕುಕ್ಕರ್‌ಗೆ ಪೈಪ್ ಅಳವಡಿಸಿ ಅದರಿಂದ ಡಿಸ್ಟಿಲ್ ವಾಟರ್ ತಯಾರಿಸುತ್ತಾರೆ. ಎಲ್‍ಇಡಿ ಬಲ್ಬ್‌ ಬಿಚ್ಚಿ ಜೋಡಿಸಿ ಕನಿಷ್ಠ 10 ವರ್ಷ ಬಾಳಿಕೆ ಬರುವಂತೆ ಮಾಡುತ್ತಾರೆ. ಉತ್ತಮ ಕರಾಟೆ ಪಟುವಾಗಿರುವ ಸಾಹಿಲ್ ಕ್ರೀಡೆಗಳಲ್ಲೂ ಆಸಕ್ತಿ ಹೊಂದಿದ್ದಾರೆ. ವಿಜ್ಞಾನ ಸಂಶೋಧನೆ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

'ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉನ್ನತ ಅಭ್ಯಾಸ ಮಾಡಿ ಉಪಗ್ರಹ ತಯಾರಿಸುವ ಕನಸಿದೆ. ಇಸ್ರೋದಲ್ಲಿ ಕೆಲಸ ಮಾಡಬೇಕೆನ್ನುವ ಉತ್ಕಟತೆ ಇದೆ' ಎನ್ನುತ್ತಾರೆ ಸಾಹಿಲ್ಸಾಹಿಲ್ ಮುನ್ನಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.