ADVERTISEMENT

ಸುರಪುರ: 60ಕ್ಕೂ ಹೆಚ್ಚು ಪ್ರತಿಭಾವಂತ ಕೊಕ್ಕೊ ಆಟಗಾರರ ತಾಣ ಈ ಗ್ರಾಮ

ಕೊಕ್ಕೊ ಕ್ರೀಡೆ ಹಬ್ ಆಗುವತ್ತ ದೇವರಗೋನಾಲ

ಅಶೋಕ ಸಾಲವಾಡಗಿ
Published 7 ಜೂನ್ 2025, 7:39 IST
Last Updated 7 ಜೂನ್ 2025, 7:39 IST
ಉಡುಪಿಯಲ್ಲಿ 2024 ಡಿಸೆಂಬರ್‍ನಲ್ಲಿ ನಡೆದ ಆಲ್ ಇಂಡಿಯಾ ಕೊಕ್ಕೊ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಚಾಂಪಿಯನ್ ಟ್ರೂಫಿ ಎತ್ತಿ ಹಿಡಿದಿರುವ ಸಾಹೇಬಗೌಡ
ಉಡುಪಿಯಲ್ಲಿ 2024 ಡಿಸೆಂಬರ್‍ನಲ್ಲಿ ನಡೆದ ಆಲ್ ಇಂಡಿಯಾ ಕೊಕ್ಕೊ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಚಾಂಪಿಯನ್ ಟ್ರೂಫಿ ಎತ್ತಿ ಹಿಡಿದಿರುವ ಸಾಹೇಬಗೌಡ   

ಸುರಪುರ: ನಗರದಿಂದ 6 ಕಿ.ಮೀ ಅಂತರದಲ್ಲಿರುವ ದೇವರಗೋನಾಲ ಗ್ರಾಮ ಜಗದ್ಗುರು ಮೌನೇಶ್ವರ ಮತ್ತು ಹೈಯ್ಯಾಳಲಿಂಗೇಶ್ವರನ ನೆಲೆವೀಡು. ಈ ಗ್ರಾಮದ ಪ್ರತಿ ಮನೆಯಲ್ಲಿ ಸರ್ಕಾರಿ ನೌಕರರಿದ್ದಾರೆ. ವಿದ್ಯಾವಂತರ ಊರು ಎಂದು ಕರೆಸಿಕೊಳ್ಳುವ ಈ ಗ್ರಾಮಕ್ಕೆ ಈಗ ಕೊಕ್ಕೊ ಕ್ರೀಡೆ ಮೆರುಗು ತಂದಿದೆ.

ಇಲ್ಲಿ ಈಗ 60ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕೊಕ್ಕೊ ಆಟಗಾರರು ಇದ್ದಾರೆ. ಸಾಲದ್ದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕೊಕ್ಕೊ ಆಟಗಾರ ಗ್ರಾಮದ ಭೀಮಣ್ಣ ದೀವಳಗುಡ್ಡ ಈಗ ಕರ್ನಾಟಕ ರಾಜ್ಯ ಕೊಕ್ಕೊ ಅಸೋಶಿಯೇಶನ್‍ದ ಉಪಾಧ್ಯಕ್ಷ. ಗ್ರಾಮದ 20ಕ್ಕೂ ಹೆಚ್ಚು ಯುವಕರು ವಿವಿಧೆಡೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದ ಸಾಹೇಬಗೌಡ ಹಣಮಂತ್ರಾಯಗೌಡ ಮಾಲಿಪಾಟೀಲ (22) ಕೊಕ್ಕೊದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. 1 ರಿಂದ 10ನೇ ತರಗತಿವರೆಗೆ ಗ್ರಾಮದಲ್ಲಿ ಅಭ್ಯಾಸ ಮಾಡಿದ್ದಾರೆ. ಅವರಲ್ಲಿನ ಕ್ರೀಡೆಯ ಹಸಿವು ಗುರುತಿಸಿದ ದೈಹಿಕ ಶಿಕ್ಷಣ ಶಿಕ್ಷಕ ಭೀಮರಾಯ ಮಲ್ಲಾಪುರ ಕೊಕ್ಕೊ ತರಬೇತಿ ನೀಡಿದರು.

ADVERTISEMENT

7ನೇ ತರಗತಿ ಓದುತ್ತಿದ್ದಾಗ ಪ್ರಾಥಮಿಕ ಶಾಲೆ ವಿಭಾಗ ಮಟ್ಟದಲ್ಲಿ 2 ನೇ ಸ್ಥಾನ ಪಡೆದರು. 9 ನೇ ತರಗತಿ ಓದುತ್ತಿದ್ದಾಗ ರಾಜ್ಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ 3ನೇ ಸ್ಥಾನ ಪಡೆದರು. ಜೊತೆಗೆ ದಸರಾ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆದರು.
ಕ್ರೀಡೆಯ ಸಾಧನೆ ಗುರುತಿಸಿ ಮೂಡಬಿದಿರೆಯ ಆಳ್ವಾಸ್ ಕ್ರೀಡಾ ಕೋಟಾದಲ್ಲಿ ಸಾಹೇಬಗೌಡ ಅವರಿಗೆ ಉಚಿತ ಪ್ರವೇಶ ನೀಡಿತು. ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.

2024ರಲ್ಲಿ ಕ್ಯಾಲಿಕಟ್‍ನಲ್ಲಿ ನಡೆದ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಟೂರ್ನಾಮೆಂಟ್‍ನಲ್ಲಿ ಅವರ ತಂಡ ದ್ವಿತೀಯ ಸ್ಥಾನ ಪಡೆದಿದೆ. 2025ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೂರ್ನಾಮೆಂಟ್‍ನಲ್ಲಿ ಸಾಹೇಬಗೌಡ ಅವರ ಭರ್ಜರಿ ಆಟದಿಂದ ತಂಡ ಚಾಂಪಿಯನ್ ಆಯಿತು.

ಆಲ್‍ರೌಂಡರ್ ಆಗಿರುವ ಸಾಹೇಬಗೌಡ 3 ನಿಮಿಷದವರೆಗೂ ಔಟಾಗದೇ ಆಡಬಲ್ಲರು. ಉಡುಪಿಯ ಟೂರ್ನಿಯಲ್ಲಿ ಅತಿ ಹೆಚ್ಚು 4 ಅಂಕ ಪಡೆದ ದಾಖಲೆ ಇದೆ. ಜಿಂಕೆಯಂತಹ ಓಟ, ಆಕರ್ಷಕ ಡೈವ್, ಎದುರಾಳಿಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆಗೆ ಎಂತವರೂ ಬೆರಗಾಗುತ್ತಾರೆ.

ಓದಿನಲ್ಲೂ ಮುಂದೆ ಇರುವ ಸಾಹೇಬಗೌಡ ಎಸ್‍ಎಸ್‍ಎಲ್‍ಸಿಯಲ್ಲಿ ಶೇ 92, ಪಿಯುಸಿನಲ್ಲಿ ಶೇ 94 ಅಂಕ ಪಡೆದಿದ್ದಾರೆ. ಒಂದು ಎಕರೆ ಭೂಮಿ ಇದ್ದು ತಂದೆ ಕೂಲಿ ಮಾಡುತ್ತಾರೆ. ಕ್ರೀಡೆಯಲ್ಲಿ ಅನನ್ಯ ಸಾಧನೆ ಮಾಡುವುದರ ಜೊತೆಗೆ ಯುಪಿಎಸ್‍ಸಿ ಪರೀಕ್ಷೆ ಕಟ್ಟಬೇಕೆನ್ನುವ ಅದಮ್ಯ ಆಸೆ ಇದೆ.

ಸಾಹೇಬಗೌಡ ಅವರಂತೆ 60ಕ್ಕೂ ಹೆಚ್ಚು ಪ್ರತಿಭಾವಂತ ಕೊಕ್ಕೊ ಆಟಗಾರರು ಗ್ರಾಮದಲ್ಲಿದ್ದಾರೆ. ಬಾಲಕಿಯರು ಸೇರಿರುವುದು ವಿಶೇಷ. ಅವರಲ್ಲಿ ಮಲ್ಲಿಕಾರ್ಜುನ ವಗ್ಗಾರ, ನಾಗರಾಜ ಕೆಳಗಿನಮನಿ, ಜಾವೀದ್, ಭೀರಲಿಂಗ ವಗ್ಗಾರ, ಉದಯಕುಮಾರ ಗುರಿಕಾರ, ದೇವರಾಜ ದೀವಳಗುಡ್ಡ, ರಿತೇಶ ಗುತ್ತೇದಾರ ಇತರರು ರಾಜ್ಯ ಮಟ್ಟದ ಕೊಕ್ಕೊ ಟೂರ್ನಿಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾರೆ.
ಕೊಕ್ಕೊ ಕ್ರೀಡೆಯ ಹಬ್ ಆಗುವತ್ತ ದಾಪುಗಾಲು ಇಟ್ಟಿರುವ ದೇರಗೋನಾಲದಲ್ಲಿ ಕಬಡ್ಡಿ, ವ್ಹಾಲಿಬಾಲ್, ಕುಸ್ತಿಯ ಪ್ರತಿಭಾವಂತ ಆಟಗಾರರ ದಂಡೂ ಇದ್ದು ರಾಜ್ಯದ ಗಮನ ಸೆಳೆಯುತ್ತಿದೆ.

ದೇವರಗೋನಾಲದ ಕೊಕ್ಕೊ ಆಟಗಾರರು ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಮರೆಪ್ಪ ಗುರಿಕಾರ ಪ್ರೊ ಕೊಕ್ಕೊದಲ್ಲಿ ಆಡಿ ಹೆಸರು ಮಾಡಿದ್ದಾರೆ. ಕ್ರೀಡಾ ಗ್ರಾಮವನ್ನಾಗಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವೆ -ಭೀಮಣ್ಣ ದೀವಳಗುಡ್ಡ ರಾಜ್ಯ ಕೊಕ್ಕೊ ಅಸೋಶಿಯೇಶನ್ ಉಪಾಧ್ಯಕ್ಷ

ದೇವರಗೋನಾಲದ ಪ್ರತಿ ಮನೆಯಲ್ಲಿ ಆಟಗಾರರು ಇದ್ದಾರೆ. ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಬಹುತೇಕರು ಬಡವರಾಗಿರುವುದರಿಂದ ಅವರಲ್ಲಿನ ಕ್ರೀಡಾ ಪ್ರತಿಭೆ ನಂದಿ ಹೋಗುತ್ತಿದೆ

-ಭೀಮರಾಯ ಮಲ್ಲಾಪುರ ದೈಹಿಕ ಶಿಕ್ಷಣ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.