ADVERTISEMENT

ಯಾದಗಿರಿ: 300 ಕ್ವಿಂಟಲ್ ಕಲ್ಲಂಗಡಿ ಖರೀದಿಸಿದ ಶಾಸಕ ವೆಂಕಟರೆಡ್ಡಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 19:45 IST
Last Updated 13 ಏಪ್ರಿಲ್ 2020, 19:45 IST
ಯಾದಗಿರಿ ಮತಕ್ಷೇತ್ರದ ಖಾನಾಪುರ ಗ್ರಾಮದ ಹೊಲವೊಂದಕ್ಕೆ ಭೇಟಿ ನೀಡಿದ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಲ್ಲಂಗಡಿ ಬೆಳೆ ಪರಿಶೀಲನೆ ಮಾಡಿದರು
ಯಾದಗಿರಿ ಮತಕ್ಷೇತ್ರದ ಖಾನಾಪುರ ಗ್ರಾಮದ ಹೊಲವೊಂದಕ್ಕೆ ಭೇಟಿ ನೀಡಿದ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಲ್ಲಂಗಡಿ ಬೆಳೆ ಪರಿಶೀಲನೆ ಮಾಡಿದರು   

ಯಾದಗಿರಿ: ಯಾದಗಿರಿ ಕ್ಷೇತ್ರದ ಶಾಸಕವೆಂಕಟರೆಡ್ಡಿ ಮುದ್ನಾಳ ಸ್ವಂತ ಹಣ ಹಾಗೂ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ರೈತರಿಂದ 300 ಕ್ವಿಂಟಲ್ ಕಲ್ಲಂಗಡಿ ಖರೀದಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದಿದ್ದಾರೆ.

ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದ ರೈತ ಗೋವಿಂದಪ್ಪ ಸಾಹುಕಾರ ಮತ್ತು ನಾಗಪ್ಪ ಅವರ ಹೊಲಕ್ಕೆ ತೆರಳಿದ ಶಾಸಕರು, ಅವರಿಂದ ತಲಾ50 ಕ್ವಿಂಟಲ್‌, ಮತಕ್ಷೇತ್ರದ ಇನ್ನುಳಿದ ರೈತರಿಂದ 200 ಕ್ವಿಂಟಲ್‌ ಹಣ್ಣು ಖರೀದಿಸಿದ್ದಾರೆ.

‘ಖರೀದಿಸಿದ ಕಲ್ಲಂಗಡಿಯನ್ನುಯಾದಗಿರಿ ನಗರದ 31 ವಾರ್ಡ್‌ಗಳಲ್ಲಿ ಬಡವರಿಗೆ ಹಂಚಲಿದ್ದೇವೆ. ಗಣಪುರ, ಮೈಲಾಪುರ, ಯಾದಗಿರಿ ರೈತರಿಂದ ಮತ್ತಷ್ಟು ಹಣ್ಣು ಖರೀದಿಸಲಾಗುವುದು’ ಎಂದು ಶಾಸಕ ಮುದ್ನಾಳ ಪ್ರತಿಕ್ರಿಯಿಸಿದರು.

ADVERTISEMENT

‘ಲಾಕ್‌ಡೌನ್‌ನಿಂದ ಜನರು ಮನೆಯಿಂದ ಹೊರ ಬಾರದಿರುವುದಕ್ಕೆ ಕಲ್ಲಂಗಡಿ ಮಾರಾಟವಾಗುತ್ತಿಲ್ಲ. ಇದರಿಂದ ರೈತರು ಕಣ್ಣೀರು ಹಾಕುವಂತಾಗಿದೆ. ಉಳ್ಳವರು, ಸಾರ್ವಜನಿಕರು ಮುಂದೆ ಬಂದು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನ ಖರೀದಿಸಿ ಅನ್ನದಾತರ ಜೀವ ಉಳಿಸುವ ಕಾರ್ಯ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಮುಖಂಡರಾದ ಮಲ್ಲಣ್ಣಗೌಡ ಪಾಟೀಲ ಹತ್ತಿಕುಣಿ, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್‌, ಸಿದ್ದನಗೌಡ, ಶರಣಗೌಡ ಕಾಳೆಬೆಳಗುಂದಿ, ವಿಲಾಸ ಪಾಟೀಲ, ಪರಶುರಾಮ ಕುರಕುಂದಿ, ಗೋವಿಂದಪ್ಪ, ರಾಮಲಿಂಗಪ್ಪ, ನಾಗಶೆಟ್ಟಿ ಅಂಗಡಿ, ಮರಿಲಿಂಗಪ್ಪ ಅವರು ಈ ಕಾರ್ಯಕ್ಕೆ ಶಾಸಕರೊಂದಿಗೆ ಕೈಜೋಡಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕೆಲ ಸಂಘ–ಸಂಸ್ಥೆಗಳವರು ಕಲ್ಲಂಗಡಿ ಖರೀದಿಸಿ ಬಡಜನರಿಗೆ ಹಂಚುವ ಕೆಲಸ ಮಾಡುತ್ತಿವೆ.

‘ಜಿಲ್ಲೆಯಲ್ಲಿ 279 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.9,465 ಟನ್‌ ಇಳುವರಿ ನಿರೀಕ್ಷಿಸಲಾಗಿದೆ’ ಎನ್ನುವುದು ತೋಟಗಾರಿಕೆ ಇಲಾಖೆಯ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.